ಅಪರಾಧ ಎನ್ನದಯ್ಯ ಹೇ ಗುರುವರ್ಯ ಪ
ಅಪರಾಧ ಎನ್ನದಯ್ಯ ಅಪರಿಮಿತವು ಸರಿ
ಕೃಪೆಯು ಮಾಡಲಿ ಬೇಕು ಕೃಪಣವತ್ಸಲ ಗುರುವೆ ಅ.ಪ.
ಹಡೆದ ತಾಯಿ ಶಿಶುವ ಬಡಿದು ಕೊಂದರೆ ತೃಣವು
ಬಿಡಿಸಿಕೊಳ್ಳಲು ಬಲ್ಲುದೆ ಜಡಕೆ ಸಮವಾದದ್ದು
ಒಡೆಯ ನೀ ಎನ್ನಯ ಅಸ್ವಾತಂತ್ರ ಎಣಿಸದೆ
ಬಿಡುವೆನೆಂದರೆ ನಿನಗೆ ತಡೆಯ ಬರುವರು ಯಾರೈ 1
ದೀನವತ್ಸಲ ಕೇಳು ಅನೇಕ ಜನ್ಮದೊಳು
ನಾನಾ ಪರಿಯೊಳು ನೊಂದು ಸೇರಿದೆ ನಿನಗೆ ಬಂಧು
ಏನು ಪೇಳದೆ ಎನ್ನ ಕಾನನದಲಿ ಬಿಟ್ಟು
ಶ್ರೀನಾಥನ ಸೇರಿದಿ ಅನಾಥನ ಮಾಡಿದಿ ಎನ್ನ 2
ಬ್ಯಾರೆ ಉಪಾಯವಿಲ್ಲ ಸಾರಿದೆ ನಿನಗಯ್ಯ
ಕಾರುಣ್ಯ ನಿಧಿಯೆ ಅಪಾರ ಕರುಣಮಾಡಿ
ಮಾರಪಿತನಾದ ಜಯೇಶವಿಠಲನ್ನ
ಆರಾಧನೆಯಲಿ ಸತತ ಧಾರಾಳ ಮತಿನೀಡೋ 3
***