..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಪಕ್ಷಿ ವಾಹನ ದಯಸಿಂದು ನೀ ಎನ್ನ
ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ
ಕತ್ತಲೆಯೊಳು ಬಲು ಕಾಲಕಳದೆಯಾಗಿ
ಮತ್ತೆ ಬೆಳಕು ಕಂಡು ಬೆದರುತಿದೆ
ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು
ಇತ್ತು ಕುಶಲಗತಿ ಕಲಿಸಯ್ಯ 1
ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ
ಮುಂದಕೆ ನಡೆದು ಪರರ ಬೆಳಸುಗಳ
ಒಂದನ್ನ ಬಯಸದೆ ಪದ್ಧತಿ ಬಿಡದಂತೆ
ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ 2
ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ
ಹೆದರಿಸೊ ಸನ್ಯಾಯ ಕಶದಿಂದಲೀ
ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು
ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ 3
ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ
ವಸ್ತು ಎನ್ನದು ಮಾತ್ರವೆಂದೆನಿಸಿ
ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ
ಹತ್ತಿ ಹರಿಸುವನು ಸನ್ಮತವೆನಗೆ 4
ಲೇಸಾದಾ ಹಯಗಳೊಳು ನೀನೆವೆ ಜಗದೊಳು
ಲೇಸು ಮಾಡಿದೆಯೆಂಬ ವಾರ್ತಿ ಕೇಳಿ
ವಾಸುದೇವವಿಠಲ ನಿನಗೆ ಬಿನ್ನೈಸಿದೆ
ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ5
***