ಶ್ರೀ ಗುರುರಾಮವಿಠಲ ದಾಸರ ರಚನೆ
ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ಪ
ದೃಢಭಕ್ತ ಸಮೂಹವ ಸಿರಿಯೊಡೆಯನು ಕೈಬಿಡನೆಂದು ಅ.ಪ
ವಿಧಿಸೃಷ್ಟಿಯೊಳಿಲ್ಲದರೂ-
ಪದಿ ಬಂದು ನಖದಿ ಅಸುರನ
ಉದರ ಬಗೆದು ಕರುಳ ತೆಗೆದು
ಮುದದಿ ಗಳದಿ ಧರಿಸಿದನೆಂದು
1
ಪರರು ತನ್ನ ಹಿಂಸೆಗೈ
ದರು ಸಹಿಸಿ ಸಮಾಧಾನದಿ
ಸಿರಿಯರಸನ ನೆನೆವಗೆ ಭಯ
ವಿರದಿರದಿರದಿರದೆಂದು
2
ದ್ವೇಷಿಗಳನುದಿನ ಯೋಚಿಪ
ಮೋಸಗಳನು ತಿಳಿಯುತ ಲ-
ಕ್ಷ್ಮೀಶನು ಪರಿಹರಿಸಿ ತನ್ನ
ದಾಸರಿಗೊಶವಾಗುವನೆಂದು
3
ಖಳಜನರ ಮರ್ದಿಸುತ
ಜಲಜನಾಭ ಮೂಜಗದ
ಒಳಹೊರಗೂ ವ್ಯಾಪಿಸುತ
ತಿಳಿಯಗೊಡನು ಸತ್ಯವಿದೆಂದು
4
ಕಾಮಾದಿಗಳನು ಗೆದ್ದು ಮ-
ಹಾಮಹಿಮರೆನಿಸುವರ ಯೋಗ-
ಕ್ಷೇಮವನ್ನು ವಹಿಸಿಹ ಗುರು-
ರಾಮವಿಠಲ ನರಹರಿಯೆಂದು
5
***