Showing posts with label ಶ್ರೀನಿವಾಸ ಕಲ್ಯಾಣ srinivasa kalyana ಮೊದಲನೆಯ ಅಧ್ಯಾಯ anantadressha. Show all posts
Showing posts with label ಶ್ರೀನಿವಾಸ ಕಲ್ಯಾಣ srinivasa kalyana ಮೊದಲನೆಯ ಅಧ್ಯಾಯ anantadressha. Show all posts

Thursday, 5 August 2021

ಶ್ರೀನಿವಾಸ ಕಲ್ಯಾಣ srinivasa kalyana ಮೊದಲನೆಯ ಅಧ್ಯಾಯ ankita anantadressha

 ಹರೇಶ್ರೀನಿವಾಸ ||


ಮೊದಲನೇಯ ಅಧ್ಯಾಯ


( ಶ್ರೀಪತಿರ್ಭುರ್ಗುಣಾ ಸರ್ವಲೋಕೋತ್ಕೃಷ್ಠ ಇತೀಡಿತಃ

ಗೋಕ್ಷೀರಸಿಕ್ತಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್‌ )


ಪದ


ರಾಗ ಸೌರಾಷ್ಟ್ರ ತಾಳ ತ್ರಿಪುಟ ಸ್ವರ-ಋಷಭ


ಶ್ರೀಸಹಿತ ಶ್ರೀವೇಂಕಟೇಶಗೆ | ಸಾಸಿರಾನತಿ ಮಾಡಿ ಬೇಡುವೆ |

ಭಾಸಿಭಾಸುಗೆ ಎನಗೆ ಬುದ್ಧಿ ವಿಕಾಸ ಕೊಡು ಎಂದು |

ಆಸುಕೊಲ್ಹಾಪುರದ ದೇವಿಗೆ | ಬ್ಯಾಸರದೆ ಕರಮುಗಿದು ಬೇಡುವೆ |

ದಾಶರಥಿನಿಜದಾಸ ಕಲ್ಹೋಳೀಶಗೊಂದಿಸುವೆ || ೧ ||


ಶ್ರೀ ಜಯಾರ್ಯರ ಮೊದಲು ಮಾಡಿ | ರಾಜಗುರುಸಂತತಿಗೆ ನತಿಸುವೆ |

ಐಜಿವೇಂಕಟರಾಮವರ್ಯರ ಪೂಜೆಯಲ್ಲಿರುವೆ |

ಶ್ರೀಜಯಾರ್ಯಮುನೀಂದ್ರಸೇವೆಗೆ | ಈಜಗತಿಯಲಿ ಜನಿಸಿ ಅವರಾ |

ಪೂಜಿತಾಖ್ಯವು ವಹಿಸಿದವರನ ಪೂಜಿಸುವೆ ಬಿಡದೆ || ೨||


ನಿತ್ಯದಲಿ ಕೃಷ್ಣಾರ್ಯರೆಂಬುವ | ಉತ್ತಮರ ಪದಖ್ಹೋಂದಿಯಾ ಗುರು |

ಪುತ್ರರಾಗಿಹ ವಿಷ್ಣು ತೀರ್ಥರನ ನತಿಸಿ |

ಮತ್ತೆ ಸ್ತೋತ್ತಮರಾಗಿ ಇರುವ ಸ | ಮಸ್ತ ಗುರುಗಳಿಗೊಂದಿ |

ಸುತ ಸರ್ವೋತ್ತಮಾನಂತಾದ್ರಿರಮಣನ ಮಹಿಮೆ ಪೇಳುವೆನು || ೩ ||


ಪದ್ಯ


ಪೂರ್ವದಲಿ ಭೃಗುಮುನಿಗೆ ಸರ್ವಮುನಿಗಳು ಬುದ್ಧಿ

ಪೂರ್ವಕ್ಹೀಂಗ್ಹೇಳಿದರು ಗರ್ವಾದಿರಹಿತ ಸ-

ತ್ಸರ್ವಗುಣಸಂಪೂರ್ಣ ಸರ್ವದೇವೋತ್ತಮನು

ಇರ್ವನ್ಯಾರೆಂದು ತಿಳಿ ಸರ್ವಲೋಕದಲಿ ||

ಸರ್ವರಿಗೆ ಹಿತಕರ ಮೃದುಪೂರ್ವವಚನವನು ಕೇಳಿ

ಪೂರ್ವದಲಿ ಪೋದ ತನ್ನ ಪೂರ್ವಿಕನ ಮನೆಯಲ್ಲಿ

ಗರ್ವ ಅವನಲಿ ಕಂಡು ಗರ್ಕನೆ ತಾಂ ತಿರುಗಿ

ಪಾರ್ವತೀಶನು ಎಲ್ಲಿ ಇರ್ವ ನಡೆದನಲ್ಲೇ || ೧ ||


ನೋಡಿದನು ಆಗಲ್ಲಿ ಪ್ರೌಢಿ ಪಾರ್ವತಿಯು ಮಾ-

ತಾಡಿದಳು ನಾಚುತಲಿ ಬೇಡ ಬಿಡು ಪ್ರಾಣೇಶ

ನೋಡು ಭ್ರುಗುಮುನಿ ಬಂದ ಬೇಡಿಕೊಂಬುವೆನು ||

ಗಾಢನೇ ಕಣ್ಗೆಂಪು ಮಾಡಿ ಮುನಿಯಿದ್ದಲದಲಿ

ಓಡಿ ಬಂದನು ಆಗ ನೋಡಿ ಭ್ರುಗು ಶಾಪ

ಈಡಾಡಿದನು ನಿನ್ನ ಪೂಜೆಯು ಬೇಡವೀ ಲೋಕದಲಿ

ನೋಡಿ ಲಿಂಗವ ಪೂಜೆ ಮಾಡಲಿ ಜನರು || ೨ ||


ಕೊಟ್ಟು ಈ ಪರಿ ಶಾಪ ಮೆಟ್ಟಿದನು ವೈಕುಂಠ

ಥಟ್ಟನೇ ಮತ್ತಲ್ಲಿ ಧಿಟ್ಟ ದೇವನ ಕಂಡು

ಪಟ್ಟದರಸಿಯ ಕೂಡಿ ದಿಟ್ಟಾಗಿ ಮಲಗಿರಲು

ಸಿಟ್ಟಿಲೊದ್ದನು ಒಳ್ಳೆ ಪೆಟ್ಟು ಅವನೆದೆಗೆ ||

ಪೆಟ್ಟು ತಾಗಲು ನೋಡಿ ಥಟ್ಟನೆ ಹರಿಯೆದ್ದು

ಬಿಟ್ಟು ಮಂಚವ ನಿಳಿದು ಮುಟ್ಟಿ ಮುನಿಪಾದವನು

ಇಟ್ಟು ಶಿರವನು ಅಲ್ಲಿ ಗಟ್ಟಿ ಆಲಿಂಗನವ

ಕೊಟ್ಟು ಮಾತಾಡಿದನು ತುಷ್ಟನಾಗಿ || ೩||


ಪದ


ರಾಗ ಶಂಕರಾಭರಣ ತಾಳ ಅಟ್ಟ ಸ್ವರ-ಗಾಂಧಾರ


ಯಾಕೆನ್ನ ಮೇಲಿಷ್ಟು ಸಿಟ್ಟು | ಭ್ರುಗುಮುನಿ | ಯಾಕೆನ್ನ ಮೇಲಿಷ್ಟು ಸಿಟ್ಟು |

ನಾಕೊಡುವೆನು ನಿನಗೀ ಕಾಲಕ್ಕೆ ನೀ | ಬೇಕಾದ್ದು ಬೇಡು ಎಥೇಷ್ಟು || ಪ ||


ಸದ್ದು ಇಲ್ಲದೆ ನಾನಿದ್ದ ಮನೆಗೆ ಬಂದು | ಒದ್ದ ಕಾರಣ ಪೇಳಿಷ್ಟು ||

ಸಿದ್ದಾಗಿ ನೀನು ಬಂದದ್ದು ನಾ ಅರಿಯೆನು | ಬುದ್ದಿ ತಪ್ಪಿತು ಕ್ಷಮಿಸಿಷ್ಟು || ೧ ||


ಛಂದಾಗಿ ಕಾಠಿನ್ಯದಿಂದಿದ್ದ ಎನ್ನೆದೆ | ನೊಂದಿಲ್ಲ ಎಳ್ಳು ಕಾಳಷ್ಟು ||

ಇಂದು ಈ ಕೋಮಲಸುಂದರ ಪಾದವು | ನೊಂದು ಕೊಂಡಿದ್ಹಾವು ಎಷ್ಟೋ || ೨ ||


ಧರೆಯೊಳು ದ್ವಿಜರಿಗೆ ಸರಿಯಾರು ಇಲ್ಲೆಂ | ಬರುವುದು ಭಯ ಭಾಳಷ್ಟು ||

ವರದಾನಂತಾದ್ರೀಶನ ಪರಮ ಭಕ್ತರಿಗೆ | ಬರಬಾರದೆಂದಿಗು ಸಿಟ್ಟು || ೩ ||


ಪದ್ಯ


ಇಂದಿರಾಪತಿಯು ಹೀಗೆಂದು ಮುನಿಪಾದಗಳ

ಛಂದದಲಿ ಒತ್ತಿ ತ್ವರೆಯಿಂದ ಉಷ್ಣೋದಕವ

ತಂದು ತೊಳೆಯುತ ಭಕ್ತಿಯಿಂದ ಶಿರದಲಿ ವಹಿಸಿ

ಇಂದು ಪಾವಿತನಾದೆನೆಂದ ಹರುಷದಲಿ ||

ಮುಂದೆಭ್ರುಗುಮುನಿಯು ಮುಕುಂದನ ಕೊಂಡಾಡಿ

ಬಂದು ಹರುಷದಲಿ ಅಲ್ಲಿಂದ ಭೂಲೋಕದಲಿ

ಇಂದಿರೇಶನೆ ಸರ್ವರಿಂದಧಿಕ ಸತ್ಯ ತಿಳಿ-

ರೆಂದ ಮುನಿಗಳಿಗೆಲ್ಲ ಮುಂದೆ ವೈಕುಂಠದಲಿ

ಇಂದಿರಅದೇವಿ ಗೋವಿಂದನಾಟವ ಕಂಡು ಅಂದಳೀ ಪರಿಯು || ೧ ||


ಪದ


ರಾಗ ಮೋಹನಕಲ್ಯಾಣಿ ತಾಳ ಆದಿ ಸ್ವರ-ಗಾಂಧಾರ


ಹರಿಯೇ ಪೋಗುವೆ ನಾನು | ಮು | ನ್ನಿರುತಿರು ಒಬ್ಬನೆ ನೀನು ||

ತಿರುಕನಾಗಿ ಇರುತಿರುವ ಭೂಸುರನು | ಭರದೊಳೊದ್ದ ನಿನ್ನ್ಹಿರಿಯಾತನೇನು ||ಪ||


ನಿನ್ನ ಶ್ರೀವತ್ಸವಿದು | ಬಹು | ಮಾನ್ಯವು ಎಂದೆನಿಸುವುದು ||

ಎನ್ನ ಆಲಿಂಗನವನ್ನು ಕೊಂಬುವುದು | ಇನ್ನು ಈ ಸ್ಥಳವು ಅಮಾನ್ಯವಾಗಿಹುದು||೧||


ಬಡವ ಬ್ರಾಹ್ಮಣರಿಂದ | ನೀ | ಕಡೆಗೆ ಕೂಡಿರು ಛಂದ ||

ಮಡದಿಯ ಹಂಬಲ ಬಿಡು ದೂರದಿಂದ | ತಡಮಾಡದೆ ನಾನಡೆದೆ ಗೋವಿಂದ || ೨ ||


ಇನ್ನೆನ್ನ ಗೊಡವ್ಯಾಕೊ | ಬಿಡು | ನಿನ್ನ ಸಂಗತಿ ಸಾಕೊ ||

ಎನ್ನ ವೈರಿಗಳ ಮನ್ನಿಸು ವ್ಯಾಕೊ | ನನ್ನಿಚ್ಛೆಯಲಿ ನಾಇನ್ನಿರಬೇಕೊ ||೩ ||


ಹಿಂದಕೆ ಕುಂಭೋದ್ಭವನು | ಎನ್ನ | ತಂದೆಯ ನುಂಗಿದ ತಾನು ||

ಮುಂದೆ ಮೂತ್ರಭರದಿಂದ ಬಿಟ್ಟಿಹನು | ಅಂದಿಗೆ ಎನಗಾನಂದವು ಏನು || ೪ ||


ಮತ್ತೆನ್ನ ಸೊಸೆಗವರು | ಬಹು | ಭಕ್ತಿಲೆ ಪೂಜಿಸುವವರು ||

ನಿತ್ಯ ನಾಲಿಗೆಯಲಿ ಪೊತ್ತುಕೊಂಡಿಹರು | ಮತ್ತೆ ವೈರಿಗಳವರಹೊರತು ಇನ್ಯಾರು || ೫||


ಹುಡುಗಬುದ್ಧಿಯು ಎಂದು | ನಾ | ಕಡೆಗೆ ಬಲ್ಲೆನು ನಿಂದು ||

ಮಡುವು ಧುಮುಕಿ ಕಲ್ಫೆಡೆಯ ಪೊತ್ತಿಹುದು | ಪಿಡಿದು ಭೂಮಿಯ ಕುಂಭ ಒಡೆದು ಬಂದಿಹುದು || ೬ ||


ಬಡವ ಬ್ರಾಹ್ಮಣನಾದಿ | ಚಾಪ | ಕೊಡಲಿಯ ಕೈಯಲಿ ಪಿಡಿದಿ ||

ಮಡದಿಯ ಕಳಕೊಂಡು ತುಡುಗ ನೀನಾದಿ | ಹಿಡಿದು ಬತ್ತಲೆ ಖೊಟ್ಟಿ ಕಡವನ ಏರ್ದಿ || ೭||


ಎಷ್ಟೆಂಥೇಳಲಿ ನಿನಗೆ | ನೀ | ನೆಷ್ಟು ಮಾಡಿದಿ ಹೀಗೆ ||

ಅಷ್ಟು ಮನಸಿನೊಳಗಿಟ್ಟೇನು ಆಗ | ಕಟ್ಟಕಡೆಗೆ ಬಲು ಸಿಟ್ಟು ಬಂತೆನಗೆ || ೮ ||


ಎಲ್ಲರಿಗುತ್ತಮ ನೀನು | ಎಂ | ದಿಲ್ಲಿದ್ದೆ ಮೋಹಿಸಿ ನಾನು ||

ಬಲ್ಲನ್ನ ಕರವೀರದಲ್ಲಿರುವೆನು | ಬಲ್ಲಿದನಂತಾದ್ರಿಯಲ್ಲಿರು ನೀನು || ೯ ||


ಪದ


ರಾಗ ಸಾರಂಗ ತಾಳ ಆದಿ ಸ್ವರ-ಮಧ್ಯಮ


ಸಿರಿದೇವಿಯು ಹರಿ ಕೂಡೀಪರಿ ಮಾಡಿ ಕಲಹ

ತ್ವರದಿಂದ ನಡೆದಾಳು ಕರವೀರಪುರಕೆ ||

ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು

ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ || ೧ ||


ಏನು ಮಾಡಲಿ ಲಕ್ಷ್ಮೀಹೀನನಾದೆನು ನಾನು

ದೀನನಾದೆನು ಹಾ ನನ್ನೊಳು ನಾನೆ ನೊಂದು ||

ಪ್ರಾಣದರಸಿಯ ನಾನು ಕಾಣುವೆನೆಂದು

ಪ್ರಾಣ ನಿಲ್ಲದು ಪಟ್ಟದ ರಾಣೀಯ ಬಿಟ್ಟು || ೨ ||


ಇಂದ್ಹ್ಯಾಂಗೆ ಇರಲಿ ನಾನಿನ್ನಾಕೆಯ ಹೊರತು

ಕಣ್ಣಿಗೆ ವೈಕುಂಠಾರಣ್ಯ ತೋರುವುದು

ಇನ್ನೆಲ್ಹೋಗಲಿಯೆಂದು ಚೆನ್ನಾಗಿ ತಿಳಿಯದು

ಮುನ್ನ ಧರೆಯಲಿ ಬಂದ ತನ್ನಿಂದೆ ತಾನು || ೩ ||


ಶ್ರೀವೈಕುಂಠದಕಿಂತ ಶ್ರೀವೇಂಕಟಗಿರಿಯು

ಕೇವಲಧಿಕವೆಂದು ಭಾವಿಸೀ ಪರಿಯು

ಆವತ್ತಿಗೆ ಭೇಗಲ್ಲೆ ವಾಸಕೆ ನಡೆದ

ದೇವ ತಿಂತ್ರಿಣಿಯೆಂಬ ಆವೃಕ್ಷವ ಕಂಡ || ೪ ||


ಅಲ್ಲೊಂದು ಇರುವುದು ಬಲ್ಲಿದ ಹುತ್ತ

ಅಲ್ಲಿ ತಾ ನಡಗಿದ ಮೆಲ್ಲನೆ ಪೋಗಿ

ಅಲ್ಲ್ಯಾ ದೇಶದಲೊಬ್ಬ ಚೋಳಾಖ್ಯನು ರಾಜ

ಎಲ್ಲರಿಂದಲಿ ತನ್ನ ಪುರದಲ್ಲೆ ಇರುವ || ೫ ||


ಅವನ ಮನೆಯಲ್ಲಿ ಬಂದ ಭುವನಾಧಿಕ ಬ್ರಹ್ಮ

ಶಿವನ ಕರುವಿನ ಮಾಡಿ ತಾನಾಕಳಾಗಿ

ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು

ಅವಳು ಬೇಡಿದ್ದು ಕೊಟ್ಟು ಅವನೀಶ ಕೊಂಡ || ೬ ||


ಕರೆಸಿಕೊಂಡಷ್ಟು ಹಾಲು ಕರೆವುದು ನಿತ್ಯ

ವರಸಾಧುಗುಣದಿಂದ ಇರುತಿಹುದು ಮತ್ತೆ

ಎರಡು ಸಾವಿರ ಗೋಗಳ ಸರಸಾಗಿ ಕೂಡಿ

ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ || ೭ ||


ಮುಂದಾಧೇನುವು ಧ್ಯಾನಕೆ ತಂದು ನಾನಿಲ್ಲಿ

ಬಂದ ಕಾರಣವೇನು ಎಂದು ಸ್ಮರಿಸುತಲಿ

ಇಂದಿರೇಶಗೆ ಭಕ್ತಿಯಿಂದ ಕ್ಷೀರವನು

ಛಂದಾಗಿ ಕರೆವುದು ಬಂದು ಹುತ್ತಿನಲಿ || ೮ ||


ಹಿಂಡಾಕಳುಗಳ ಕೂಡಿಕೊಂಡು ಬರುವುದು

ಹಿಂಡದು ಕರುವಿನ ಕೊಂಡು ಒಂದಿನವು

ಕಂಡು ಈ ಪರಿ ರಾಜನ ಹೆಂಡತಿ ಆಗ

ಚಂಡಕೋಪದಿ ಗೋಪನ ಕಂಡೆಂದಳು ಹೀಂಗೆ || ೯ ||


ಪದ್ಯ


ಏನೊ ಎಲೆ ಗೋಪಾಲ ಧೇನುವಿನ ಪಾಲವನು

ನೀನೇನು ಮಾಡುವಿ ನಿತ್ಯ ನೀನೆ ಕೊಂಬಿವಿಯೊ

ಅಥವಾ ತಾನೆ ಕುಡಿವುದೊ ವತ್ಸೇನು ಬೇಗನೆ ಪೇಳೀಗ

ನಾನು ಒಳ್ಳೆಯವಳಲ್ಲ ಪ್ರಾಣ ಕೊಂಬುವೆನು ||

ಧೇನುಪನು ಈ ಮಾತು ಮೌನದಿಂದಲಿ ಕೇಳಿ

ತಾನು ಗಾಬರಿಗೊಂಡು ಏನು ಬಂತಿದು ಎನಗೆ

ಏನು ಮಾಡಲಿಯೆಂದು ಧ್ಯಾನಿಸುತ ಆ ರಾಜ

ಮಾನಿನಿಗೆ ನುಡಿದ ಬಹು ದೀನನಾಗಿ || ೧ ||


ಪದ


ರಾಗ ದೇಶಿ ತಾಳ ಅಟ ಸ್ವರ-ಷಡ್ಜ


ಅರಿಯೆ ನಾನಮ್ಮಾ ನಿಮ್ಮರಮನೆಸುದ್ದಯನು ಅರಿಯೆ ನಾನಮ್ಮ

ತುರುಗಳ ಕಾಯ್ಕೊಂಡು ಬರುವೆ ನಾ ಇದ ಹೊರತು || ಪ ||


ಕರೆಸಿಕೊಂಬುವರ್ಯಾರೊ ಕರುವ ಕಟ್ಟುಬರ್ಯಾರೋ || ಅರಿಯೆ ||

ಬರಿದೆ ನೀ ಎನ ಮೇಲೆ ಹರಿಹಾಯುವದೇಕೆ || ಅರಿಯೆ || ೧ ||


ಕರುವು ತಾನುಂಬೋದೊ ಪರರ ಪಾಲಾಗುವುದೋ || ಅರಿಯೆ ||

ಸರಸಾಗಿ ತಿಳಿ ನೀನು ನೆರೆಹೊರೆಯವರನ್ನ || ಅರಿಯೆ || ೨ ||


ಕಳ್ಳತನವ ಮಾಡಿ ಸುಳ್ಳು ಮಾತಾಡೋದು || ಅರಿಯೆ ||

ಬಲ್ಲಿದಾನಂತಾದ್ರಿವಲ್ಲಭ ತಾ ಬಲ್ಲ || ಅರಿಯೆ ನಾನಮ್ಮ || ೩ ||


ಪದ್ಯ


ಪಟ್ಟದರಿಸಿಯು ಗೋಪನಷ್ಟು ಮಾತನು ಕೇಳಿ

ಸಿಟ್ಟು ಸಹಿಸದೆ ಕ್ರೂರ ದೃಷ್ಡಿಯಿಂದಲಿ ನೋಡಿ

ಇಷ್ಟು ಮಾತಿವಗ್ಯಾಕೆ ಕುಟ್ಟಿರೆನ್ನುತ ಒಳ್ಳೆ

ಘಟ್ಟಿ ಚಬುಕಿಲಿ ಬಹಳ ಪೆಟ್ಟು ಹೊಡೆಸಿದಳು ||

ಪೆಟ್ಟಿ ಗಂಜುತ ಗೋಪ ಥಟ್ಟನೆ ಮರುದಿನವು

ಕಟ್ಟಿದಾಕಳ ಕಣ್ಣಿ ಬಿಟ್ಟು ಬೆನ್ಹತ್ತಿದನು

ಬಿಟ್ಹಂಥ ಆಕಳವು ನೆಟ್ಟನೆ ಗಿರಿಗ್ಹೋಗಿ

ಬಿಟ್ಟಿತಾ ಹುತ್ತಿನಲಿ ಅಷ್ಟು ಪಾಲನ್ನು || ೧ ||


ಸಿಟ್ಟಿಲದರನ ನೋಡಿ ದುಷ್ಟ ಗೋಪಾಲ ತಾ

ಮುಟ್ಟಿ ಕೊಡಲಿಯು ಎತ್ತಿ ಕುಟ್ಟುವ ಸಮಯದಲಿ

ಥಟ್ಟನೆ ಹರಿಯು ಆ ಪೆಟ್ಟು ತನ್ನಲಿ ಕೊಂಡ

ದೃಷ್ಟಿಂದ ತನ್ನವರ ಕಷ್ಟ ನೋಡದಲೆ ||

ಸೃಷ್ಡಿಕರ್ತನ ಶಿರದಿ ತಟ್ಟಿ ಪುಟ್ಟಿತು ರಕ್ತ

ನೆಟ್ಟನೆ ಏಳು ತಾಳ ವೃಕ್ಷ ಪರಿಮಿತಿಯಾಗಿ

ಎಷ್ಡೊಂದು ಭೀತಿಕರ ಶ್ರೇಷ್ಢ ಶಬ್ದಾಗುವುದು

ಅಷ್ಟು ನೋಡುತ ಪ್ರಾಣ ಬಿಟ್ಟ ಗೋಪಾಲ || ೨ ||


ಮುಂದಕಾಕಳು ಗಿರಿಯಿಂದ ಧರೆಗಿಳಿವುತಲೆ

ಬಂದು ರಾಜನ ಸಭೆಯ ಮುಂದೆ ಹೊರಳಾಡುವುದು

ಮುಂದೆ ನೃಪ ಕಂಡು ಹೀಗೆಂದ ಈ ಪರಿಯಾಕೆ

ಹೊಂದಗೂಡಿಸಿರಿ ಗೋವೃಂದನೊಳಗಿದನು ||

ಅಂದ ನುಡಿ ಕೇಳಿ ಅಲ್ಲಿಂದ ಪರಿಚಾರಕನು

ಮುಂದಕಾಕಳ ನಡಿಸಿ ಹಿಂದೆ ಗೊಂಟ ಹೋಗುತಲೆ

ಅಂದಿಗಲ್ಲಾದದ್ದು ಛಂದದಲಿ ನೋಡಿ ಭಯ-

ದಿಂದ ಅರಸಗೆ ಓಡಿ ಬಂದು ಪೇಳಿದನು || ೩ ||


ಅರಸ ಕೇಳುತ ಬೇಗ ತರಿಸಿ ನರಯಾನವನು

ವಿರಸದಿಂದಲಿ ಕುಳಿತು ಕರೆಸಿ ಸೈನ್ನವನೆಲ್ಲ

ಚರಿಸುತಲೆ ಆ ರಕ್ತ ಸುರಿಸುವ ಸ್ಥಳ ನೋಡಿ

ಸ್ಮರಿಸಿ ತಿಳಿಯದೆ ದಣಿದು ವರಿಸಿದನು ಬೆವರು ||

ಅರಸು ಬಂದುದ ನೋಡಿ ಸರಸಿಜೋದ್ಭವಪಿತನು

ಸರಸರನೆ ಹೊರಗ್ಹೊರಟ ವರಸರ್ಪ ಬಂದಂತೆ

ಶಿರಸಿನಲಿ ಅಂಗೈಯನಿರಿಸಿ ಘಾಯವನೊತ್ತಿ

ಸುರಿಸುತಲೆ ಕಣ್ಣೀರು ಒರೆಸುತಲೆ ನುಡಿದ || ೪ ||


ಪದ


ರಾಗ ನೀಲಾಂಬರೀ ತಾಳ ಬಿಳಂದೀ ಸ್ವರ-ಷಡ್ಜ


ಕೇಳು ನೀನೆಲೊ ಪಾಪಿ ಚೋಳರಾಜನೆ ಇದನು

ಹೇಳಕೇಳದೆ ಇಂಥಾ ವ್ಯಾಳ್ಯವು ಬಂತೆನಗೆ || ಪಲ್ಲ ||


ಮಂದಮತಿಯೆ ನೀ ಮದಾಂಧನಾಗಿರುವಿಯೋ

ಇಂದು ಬಡವರ ಸುದ್ದಿಯೊಂದು ಬಲ್ಲೇನೋ

ತಂದೆತಾಯಿಗಳಿಲ್ಲ ಬಂಧುಬಳವಿಲ್ಲ

ಇಂದು ಎನಗಾರಿಲ್ಲವೆಂದು ಮಿಡುಕುವೆನೊ || ೧ ||


ಎಡತೊಡೆಯಲಿ ಒಪ್ಪುವ ಎನ್ನ ಮಡದಿಯು ಎನ್ನನು ಬಿಟ್ಟು

ಸಿಡಿದು ಸಿಟ್ಟಿಲಿ ದೂರ ನಡೆದಳು ನಾ ಇಲ್ಲೆ

ಗಿಡದಾಶ್ರಯದಲಿರಿತಿರಲು ಬಿಡದೆ ನಿನ ಗೋಪಾಲ

ಕೊಡಲಿಯ ಪಿಡಿದು ಎನ್ನ ತಲೆಯೊಡೆದನಯ್ಯಯ್ಯೋ || ೨ ||


ಲೇಪಿಸಿ ಮೈಯಲಿ ರಕ್ತವು ವ್ಯಾಪಿಸಿತಾನಂತಾದ್ರಿ

ಈ ಪರಿ ದುಃಖವ ನಾನು ನಿರೂಪಿಸಲಿನ್ನೆಷ್ಟು

ತಾಪಸರೊಡೆಯನು ನಾ ಸಂತಾಪಿಸುತಲೆ ನಿನ್ನೊಳು

ಕೋಪಿಸಿ ದುಃಖವ ಸಹಿಸದೆ ಶಪಿಸುವೆನು ಬಿಡದೆ || ೩ ||


ಪದ


ರಾಗ ಯರಕಲಕಾಂಬೋದಿ ತಾಳ ಬಿಲಂದೀ ಸ್ವರ-ಷಡ್ಜ


ಹಾ ಚೋಳಾಧಿಪನೆ ಕಲಿ ಆಚರಿಸುವ ಪರ್ಯಂತ

ನೀ ಚರಿಸುತಿರು ಹೋಗು ಪಿಶಾಚನು ಆಗಿನ್ನು

ಈ ಚಂಡಾಗಿಹ ಶಾಪವು ತಾ ಚಿತ್ತಿಡುತ ಕೇಳಿ

ಆ ಚೋಳಾಧಿಪ ಬಿದ್ದನು ಮೂರ್ಛಿತನಾಗ್ಯಲ್ಲೆ || ೧ ||


ಎರಡು ಗಳಿಗೆಯ ಮೇಲೆ ಸ್ಮರಣೆಯಿಂದಲೆ ಎದ್ದು

ಥರಥರನೆ ನಡುಗುತಲೀ ಪರಿ ಮಾತಾಡಿದನು

ಹರಿಯೆ ನೀ ಎನಗೇಕೆ ಈ ಪರಿ ಶಾಪವ ಕೊಡುವಿ

ಅರಿತು ಎನ್ನಪರಾಧವು ಇರುವುದು ಏನ್ಹೇಳೊ ||| ೨ ||


ಈ ಪರಿ ಮಾತನು ಕೇಳಿ ಆ ಪರಮಾತ್ಮನು ಆಗ

ಪಾಪಿಗಳನು ಮೋಹಿಸುತಲೆ ಈ ಪರಿ ತಾ ನುಡಿದ

ನಾ ಪಾಪಿ ನಾ ಖಳ ಮುಂಗೋಪಿ ನಾ ನಿನಗೀಗ

ಶಾಪಿಸಿ ತಿಳಿಯದೆ ಪಶ್ಚಾತ್ತಾಪವ ಪಡುವೆನು || ೩ ||


ನೆತ್ತಿಯ ಘಾಯಕೆ ನಾ ಮೈಮರೆತು ಪರವಶನಾಗಿ

ವ್ಯರ್ಥ ಶಾಪವ ಕೊಟ್ಟೀಹೊತ್ತು ಅಯ್ಯಯ್ಯೋ

ಸತ್ತಸಂಕಲ್ಪಕ್ಕೆ ಮತ್ತುಪಾಯವು ಇಲ್ಲ

ಮಿಥ್ಯವಾಗದು ಶಾಪ ಸತ್ಯವು ತಿಳಿ ನೀನು || ೪ ||


ಆಕಾಶರಸನು ಕನ್ಯ ತಾ ಕೊಡುವನು ಮುಂದೆನಗೆ

ಶ್ರೀಕರ ಪದ್ಮಾವತಿಯೆಂದಾಕೆಯ ನಾಮವಿದು

ಆ ಕಾಲಕ್ಕೆ ತಿಳಿ ಮತ್ತೆ ಅನೇಕ ರತ್ನಗಳುಳ್ಳ

ಶ್ರೀ ಕಿರೀಟವ ಕೊಡುವ ತೂಕವು ಭಾಳದಕೆ || ೫ ||


ಎಂದಿಗೆ ಶುಕ್ರವಾರ ಬಂದಿಹುದು ನಾ ಬಿಡದೆ

ಅಂದಿಗೆ ಆ ಕಿರೀಟವು ಛಂದದಿ ಧರಿಸುವೆನು

ನೊಂದುತಲಿ ಆಗ ಕಣ್ಣಿಂದ ತುಳುಕಲು ನೀರು

ಅಂದಾರುಗಳಿಗೆ ಆನಂದವಾಗಲಿ ನಿನಗೆ || ೬ ||


ಹೀಗೆಂದಾತನ ಕಳುಹಿ ಆಗನಂತಾದ್ರೀಶ

ಹೀಗೆಂದು ತನ್ನ ಮನದಲಿ ಚಿಂತಿಸಿದ

ಈ ಘಾಯವು ಮುಂದಿನ್ನು ಹೇಗೆ ಮಾಯುವುದೆಂದು

ಆಗಲ್ಲೆ ಸ್ಮರಿಸಿದ ಬೇಗ ಬೃಹಸ್ಪತಿಯ || ೭ ||


ಪದ್ಯ


ಬಂದನಾ ದೇವಗುರು ಇಂದ್ರಲೋಕವ ಬಿಟ್ಟು

ಅಂದಿಗಾ ಕ್ಷಣ ಹರಿಗೆ ಅಂದನೀ ಪರಿ ತಾನು

ಇಂದಿರೇಶನೆ ನೀನು ಇಂದೆನ್ನ ಕರೆದೇಕೆ

ಮುಂದೆ ಕಾರ್ಯಗಳೇನು ಛಂದದಲಿ ಪೇಳೊ ||

ಅಂದ ಮಾತನು ಕೇಳಿ ಹಿಂದಾದ ವೃತ್ತಾಂತ

ಛಂದದಲಿ ತಿಳಿಸಿ ಹೀಗೆಂದು ನುಡಿದನು ಮತ್ತೆ

ಒಂದೊಂದು ಹೀಗೆ ನೂರೊಂದು ಮಾತುಗಳೇಕೆ

ಮುಂದೆ ತಲೆಗೌಷಧವನಿಂದು ಪೇಳೆನಗೆ || ೧ ||


ಉತ್ತಮಾಗಿರಬೇಕು ನೆತ್ತಿಗ್ಹಿತಕರವಾಗಿ

ಮತ್ತೆ ಸುಲಭಿರಬೇಕು ಸತ್ಯ ನೀ ಪೇಳು ದು-

ಡದಡೆತ್ತಿಕೊಡುವಣತಾದ್ದು ಮತ್ತೆ ಪೇಳಲು ಬೇಡ

ವಿತ್ತ ಎನ್ನಲ್ಲಿ ಇಲ್ಲ ಅತ್ಯಂತ ರಿಕ್ತ ||

ಉತ್ತರಕೆ ಹೀಗೆ ಪ್ರತ್ಯುತ್ತರವ ನುಡಿದ ಗುರು

ಉತ್ತಮನೆ ನೀ ಬಹಳ ರಿಕ್ತನಾದರೆ ಕೇಳು

ಅತ್ತಿಯಾ ಹಾಲೊಳಗೆ ಮತ್ತೆ ಎಕ್ಕೆಯ ಫಲದ

ಹತ್ತಿಯನು ಕೂಡಿಸುತ ಒತ್ತಿ ಗಾಯದಲಿಟ್ಟು

ಸುತ್ತು ಮೇಲ್ವಸ್ತ್ರವನು ನಿತ್ಯ ಈ ಪರಿ ಮಾಡು ಮತ್ತೇನು ಬೇಡ || ೨ ||


ಇಂಥ ಔಷಧಕೆ ಇದರಂತೆ ಪೇಳುವೆ ಪಥ್ಯ

ಶಾಂತಸಾಮೆಯ ಅನ್ನ ಜೇನ್ತುಪ್ಪ ಸ್ವೀಕರಿಸು

ಇಂಥ ಘಾಯಕೆ ನೀನು ಚಿಂತೆ ಮಾಡಲು ಬೇಡ

ಶಾಂತವಾಗುವುದಯ್ಯ ಶಾಂತಮೂರುತಿಯೆ ||

ಇಂಥ ಮಾತಿಗೆ ಹರಿಯು ಸಂತೋಷಪಟ್ಟು ತಾ-

ನತ್ಯಂತತಲೆದೂಗಿ ಎನ್ನಂತರಂಗಕ್ಕೆ ಒಪ್ಪು

ವಂಥಾದ್ದು ಪೇಳಿದಿಯೆಂತ ಸ್ತುತಿಸ್ಯವನು ಅದ-

ರಂತೆ ಮಾಡುತಲೆ ತಾ ನಿಂತ ಗಿರಿಯಲ್ಲೆ || ೩ ||


ಹುತ್ತವೇ ಕೌಸಲ್ಯೆ ತಿಂತ್ರಿಣಿಯು ದಶರಥನು

ಮತ್ತೆ ಶೇಷಾದ್ರ ಸೌಮಿತ್ರಿಯೆಂದೆನಿಸುವನು

ಸುತ್ತ ವೇಂಕಟಗಿರಿಯು ಉತ್ತಮಾಯೋಧ್ಯ ಸ-

ರ್ವೋತ್ತಮನು ತಾ ರಾಮಮೂರ್ತಿಯಾಗಿರುವ ||

ಹುತ್ತವೇ ದೇವಕಿಯು ತಿಂತ್ರಿಣಿಯು ವಸುದೇವ

ಮತ್ತೆ ಶೇಷಾದ್ರಿ ಬಲಭದ್ರನೆಂದೆನಿಸುವನು

ಸುತ್ತ ವೇಂಕಟಗಿರಿಯು ಉತ್ತಮಾ ಮಧುರೆ ಸ-

ರ್ವೋತ್ತಮನು ತಾ ಕೃಷ್ಣಮೂರ್ತಿಯಾಗಿರುವ || ೪ ||


ಸ್ವಾಮಿಪುಷ್ಕರಿಣಿಯೇ ನಾಮದಿಂದಲಿ ಯಮುನೆ

ಆ ಮಹಾಯಾದವಸ್ತೋಮ ಮೃಗವೃಂದ

ಕಾಮಚರಧೇನುಗಳು ನೇರದಲಿ ಗೋಪಿಯರು

ತಾ ಮಹಾಗೋಪಾಲ ನಾಮದಿಂದಿರುವ ||

ಆ ಮುಕ್ತ ಬ್ರಹ್ಮಾದಿಸ್ತೋಮ ಮೃಗಪಕ್ಷಿಗಣ

ಆ ಮಹಾ ವಾನರಸ್ತೋಮ ಸನಕಾದಿಗಣ

ಪ್ರೇಮಕರ ಗಿರಿರಾಜ ಭೂಮಿಯಲಿ ವೈಕುಂಠ

ಶ್ರೀಮಹಾಲಕ್ಷ್ಮೀಶ ತಾ ಮುಕ್ತಿಗೊಡೆಯ || ೫ ||


ಇಂದಿರೇಶನು ಹೀಗೆ ಒಂದೊಂದು ವರರೂಪ-

ದಿಂದ ಬ್ರಹ್ಮಾದಿ ಸುರವೃಂದವನು ಕೂಡಿ

ಆನಂದದಿಂದಾಡುವನು ಮುಂದಾ ಪರಿಮಿತಿಯಿಲ್ಲ-

ವೆಂದು ಆತನ ಸ್ಮೃತಿಗೆ ತಂದು ನಮೋ ಯೆಂಬೆ ||

ಛಂದಾದ ವೈಕುಂಠಮಂದಿರವ ಬಿಟ್ಟು ಸುರ-

ವಂದಿತಾನಂತಾದ್ರಿ ಮಂದಿರವ ಮಾಡಿ ಬಹು

ಮಂದಿಯನು ಸಲಹುವಾನಂದ ಮೂರುತಿಯದಯ-

ದಿಂದ ಮುಗಿಯಿತು ಇಲ್ಲಿಗೊಂದು ಅಧ್ಯಾಯ || ೬ ||


|| ಮೊದಲನೆಯ ಅಧ್ಯಾಯವು ಮುಗಿದುದು ||