Showing posts with label ಕೃಷ್ಣ ಎಂಥಾದೋ ನಿನ್ನ ಕರುಣಿ mahipati. Show all posts
Showing posts with label ಕೃಷ್ಣ ಎಂಥಾದೋ ನಿನ್ನ ಕರುಣಿ mahipati. Show all posts

Wednesday, 11 December 2019

ಕೃಷ್ಣ ಎಂಥಾದೋ ನಿನ್ನ ಕರುಣಿ ankita mahipati

ಭೈರವಿ ರಾಗ ಧುಮಾಳಿ

ಕೃಷ್ಣ ಎಂಥಾದೋ ನಿನ್ನ ಕರುಣಿ
ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ
ದುಷ್ಟಜನರ ಮಾಡಿದ್ಯೊ ನೀ ಮರ್ದನಿ
ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧||

ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ
ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ
ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ
ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨||

ಮೊಲಿಯನುಂಡು ಕೊಂದಿ ಪೂತನಿ ಪ್ರಾಣ
ಕಾಲಿಲೊದ್ದು ಕೊಂದಿ ಶಕಟಾಸುರನ
ಬಾಲತನದಲಿ ಕೆಡಹಿದ್ಯೊ ಮಾವನ
ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩||

ತುರುಗಳ ಕಾಯ್ದ್ಯೊ ನೀ ಗೋವಿಂದ
ಬೆರಳಲೆತ್ತಿದ್ಯೊ ಗಿರಿಯ ಮುಕುಂದ
ಮರುಳು ಮಾಡಿದ್ಯೊ ಗೋಪಿಕೆಯರ ವೃಂದ
ಹರುಷಗೈಸಿದೆ ಅನೇಕ ಪರಿಯಿಂದ ||೪||

ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ
ಬಾಲಗೋಪಾಲರ ಕೂಡಿ ನಿನ್ನೂಟ
ಚೆಲುವ ನಾರೇರ ನೋಡ್ವ ನಿನ್ನ ನೋಟ
ಒಲಿದು ಕುಬ್ಜೆಯ ಬೆನ್ನ ಮಾಡಿದ್ಯೊ ನೀಟ ||೫||

ಗುರುಮಗನ ತಂದುಕೊಟ್ಯೊ ನೀ ಪ್ರಾಣ
ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ
ಶರಣಾಗತರ ವಜ್ರಪಂಜರ ಪೂರ್ಣ
ವರಮುನಿಗಳಿಗಾಗಿಹೆ ನೀ ನಿಧಾನ ||೬||

ಒಲಿದು ಪಾಂಡವರಿಗಾದಿ ಸಹಕಾರಿ
ಬಲವ ಮುರಿದ್ಯೋ ನೀ ಕೌರವರ ಸಂಹಾರಿ
ಹಲವು ಪರಿ ಆಟ ನಿನ್ನದೊ ಹರಿ
ಸಲಹುತಿಹೆ ಮಹಿಪತಿಗನೇಕ ಪರಿ ||೭||
***********