Audio by Mrs. Nandini Sripad
ರಾಗ ರೇವತಿ
ಧ್ರುವತಾಳ
ದುರಿತವನಕುಠಾರಿ ದುರ್ಜನ ಕುಲವೈರಿ
ಶರಣಾಗತವಜ್ರಪಂಜರ ಕುಂಜರ -
ವರಸಂರಕ್ಷಕ ಜನ್ಮಮರಣರಹಿತ ಮಹಿತ
ಪರಮಕರುಣಾ ಸಿಂಧು ಭಕುತಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರಪುರುಷೋತ್ತಮ
ಉರುಗಾಯ ವೈಕುಂಠವರಮಂದಿರ , ಚಂದಿರ -
ತರಣಿಕೋಟಿಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗನಡೆಸಿದ ಸಂ -
ಗರ ಭಯಂಕರ ಲೋಕೈಕವೀರ
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ
ಸರ್ವರಂತರ್ಯಾಮಿ ಲೋಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವಕಾಮದ ಜಗನ್ನಾಥವಿಠ್ಠಲ ಭಕ್ತ -
ಪರಿಪಾಲಕನೆಂಬ ಬಿರುದು ನಿನ್ನದಲ್ಲವೇ || 1 ||
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿಕೊಂಡೆ ನಿನ್ನ ದ್ವೇಷಿಗಳಿಗೆ || 2 ||
ರೂಪಕತಾಳ
ಮೂರುಲೋಕಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣಸಾಕ್ಷಿ ಕಾರಣಕಾರ್ಯ ದೋಷವಿ-
ದೂರ ಸದ್ಗುಣಸಾಂದ್ರ ಸಜ್ಜನಾಂಬುಧಿಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೊ ನಿನಗೆ;
ಕ್ರೂರಮಾನವರ ಸಂಹಾರ ಮಾಡಿಸು ಗುರು -
ಮಾರುತನಿಂದತಿ ಶೀಘ್ರವಾಗಿ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರ ಕಾವ ಕರುಣಿಗಳು ಜಗದೀ || 3 ||
ಝಂಪೆತಾಳ
ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ , ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ, ದಯದಿ ದ್ರೌ-
ಪತಿಯ ಮೊರೆಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ; ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರ ಬಿಡಿಸಿ ಪಾಲಿಸಿದೆ ಕರುಣದಲಿ ; ಕುರು-
ಪೃತನೆಯೊಳು ಪಾಂಡವರ ಗೆಲಿಸಿ ಕೀರ್ತಿಯನಿತ್ತೆ
ಶತಮೋದನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶುಪರೀಕ್ಷಿತನ ಸಂತೈಸಿದೆ
ಶಿತಿಕಂಠಗೊಲಿದು ಸಾಯಕನಾಗಿ ಮುಪ್ಪುರದ
ಸತಿಯರನು ಒಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪಕೇಳಜಸ್ರ ಸಂ-
ಸ್ತುತಿಪ ಭಕುತರ ಮನೋರಥವ ಪೂರೈಸು ಸು-
ವ್ರತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನಪ್ರೀಯ ನೀನೆ ಗತಿ ಎಮಗೆ ಇಹಪರದಿ || 4 ||
ತ್ರಿವಿಡಿತಾಳ
ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರ-
ಗೀ ಸಮಸ್ತ ದಿವೌಕಸರು ನಿನ -
ಗೆ ಸಮರ್ಪಕವಾದ ಕಾರ್ಯ ಮ-
ಹಾಸುಖದಿ ನಡೆಸುವರು ನಿರುತ ಲಕ್ಷ್ಮೀ
ದಾಸಿ ಎಂದೆನಿಪಳು ನಿನ್ನರಮನೆಯಲ್ಲಿ
ದೇಶಕಾಲಗುಣಕರ್ಮಾದಿಗಳು ನಿನಗಾ-
ವಾಸಯೋಗ್ಯಸ್ಥಾನವೆಂದೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನೋ ; ವೇದ-
ವ್ಯಾಸ ಕೀಟಗೆ ನೀನೇ ಒಲಿದು ಕೊಟ್ಟೆ ಮ -
ಹಾಸಿಂಹಾಸನವನೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ -
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ
ಈಸು ಮಾತುಗಳ್ಯಾಕೆ ಮನ್ಮನ -
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು || 5 ||
ಅಟ್ಟತಾಳ
ನಿಗಮತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿಬೊಮ್ಮಭವಾ -
ದಿಗಳು ತಾವರಿಯರು ಸಾಕಲ್ಯದಿ ಮಂದಜೀ -
ವಿಗಳಿಗೆ ಗೋಚರಿಸುವುದೆ ನಿನ್ನ ರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯದಿರೆನ್ನಪರಾಧಕೋಟಿಗಳ
ಜಗತ್ಪತಿ ತನ್ನ ಮಗುವಿನ ತೊದಲು ಮಾ -
ತುಗಳನೆ ಕೇಳಿ ತಾ ನಗುತಲಿ ಕಾಮಿತ
ಬಗೆಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ -
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ -
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ -
ಲ್ಮೊಗನಯ್ಯ ಅರ್ಥಕಾಮಗಳೊಳಗಿಪ್ಪ ಈ -
ರ್ವಗೆರೂಪ ಒಂದಾಗೆ ಆವುದಸಾಧ್ಯವೊ
ಗಗನಭೂಪಾತಾಳವ್ಯಾಪ್ತರೂಪನೆ ಕರ
ಮುಗಿವೆ ಗೋಚರಿಸೆನ್ನ ದೃಗುಯುಗಗಳಿಗಿಂದು
ಯುಗಕರ್ತ ಶ್ರೀಜಗನ್ನಾಥವಿಠಲ ನರ -
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ || 6 ||
ಏಕತಾಳ
ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹಪರದಲ್ಲಿ
ಆ ನಳಿನಭವಾದ್ಯನಿಮಿಷ -
ರಾ ನಿಜಾನಂದವರಿತು ಫಲಗಳ ಕೊಡುವಿ ಮ -
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ -
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ -
ದಾನಂದಮಯನೆ ಪ್ರಣತರ ಅಧಿಕಾ -
ರಾನುಸಾರ ಸುಖವನಧಿಯೊಳೋಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಗಭಿ -
ಮಾನಿಗಳಿಗೊಡೆಯನೆನಿಸುವ ಮುಖ್ಯ -
ಪ್ರಾಣಪತಿಗೆ ನೂತನ ವಿಜ್ಞಾಪನ -
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು -
ಣಾನಿಧಿ ಸರ್ವದಾ ಸುಲಭ ನೀನಲ್ಲವೆ || 7 ||
ಜತೆ
ಚಟುಲಕಾರ್ಯಗಳ ಸಂಘಟನೆ ಮಾಡಿಸುವಿ ನಿ -
ಷ್ಕುಟಿಲ ಶ್ರೀಜಗನ್ನಾಥವಿಠ್ಠಲ ದೇವೋತ್ತಮ ||
***********
ದಾರಿದ್ರ್ಯಾದಿಸಕಲಾನಿಷ್ಟನಿವೃತ್ತಿಪೂರ್ವಕಜ್ಞಾನಾದಿ
ಸಕಲೈಶ್ವರ್ಯಪ್ರದ
ಶ್ರೀಲಕ್ಷ್ಮೀನೃಸಿಂಹಸುಳಾದಿ
ಈ ಸುಳಾದಿಯ ರಚನೆಗೆ ಹಿನ್ನೆಲೆ ಹೀಗಿದೆ :
ಶ್ರೀ ಜಗನ್ನಾಥದಾಸರಾಯರು ತೀರ್ಥಯಾತ್ರಾನಿಮಿತ್ತ ಸಂಚಾರ ಮಾಡುತ್ತಾ ಒಮ್ಮೆ ಸುರಪುರಕ್ಕೆ ದಯಮಾಡಿಸಿದರು. ಆಗಿನ ಸುರಪುರದ ಅರಸನಾದ ವೆಂಕಪ್ಪನಾಯಕ ಶ್ರೀದಾಸರ ಮಹಿಮಾಶ್ರವಣ ಮಾಡಿದ್ದರಿಂದ ಅವರನ್ನು ಸತ್ಕರಿಸಿ , ಪೂಜಿಸಿ ಕೃತಕೃತ್ಯನಾದನು. ಶ್ರೀದಾಸರು ರಾತ್ರಿ ಭೋಜನಕಾಲದಲ್ಲಿ ಸುಜನರಿಗೆ ನೀಡುತ್ತಿದ್ದ ಹಿತೋಪದೇಶದಿಂದ ಅತ್ಯಂತ ಪ್ರಭಾವಿತನಾದ ಆ ಊರಿನ ಕಡುಬಡವನಾದ ವೈಷ್ಣವನೊಬ್ಬನು ಅವರ ಸನಿಹವನ್ನು ಬಿಡಲಾರದೆ , ಹೆಂಡತಿ ಮಕ್ಕಳನ್ನು ಬಿಟ್ಟು ಶ್ರೀದಾಸರನ್ನೇ ಸುರಪುರದಿಂದ ಹಿಂಬಾಲಿಸಿದನು. ಶ್ರೀದಾಸರು ಹತ್ತಾರು ದಿವಸಗಳಿಂದಲೂ ತಮ್ಮ ಪರಿವಾರದೊಂದಿಗೇ ಬರುತ್ತಿದ್ದು , ತಮ್ಮ ಹಿತೋಪದೇಶದಿಂದ ಪರಿಪಕ್ವಮನಸ್ಕನಾದ ಆತನನ್ನು ಊರು-ಮನೆ ಬಿಟ್ಟು ತಮ್ಮನ್ನೇ ಅನುಸರಿಸಲು ಕಾರಣವೇನೆಂದು ಮೃದುವಚನಗಳಿಂದ ಕೇಳಿದರು. ಕರುಣಾರ್ದ್ರಹೃದಯರೂ , ದೀನರ ಪಾಲಿನ ಚಿಂತಾಮಣಿ - ಕಲ್ಪವೃಕ್ಷರೂ, ಕಾಮಧೇನುಗಳೂ ಆದ ಶ್ರೀದಾಸರ ಪ್ರಶ್ನೆಗೆ ಆ ಬ್ರಾಹ್ಮಣ ತನ್ನ ತೀವ್ರಬಡತನದ ಬೇಗೆಯನ್ನೂ , ತನ್ನ ಸಾಧನದ ಮಾರ್ಗದಲ್ಲಿನ ಅಡೆತಡೆಗಳನ್ನೂ ಕಣ್ಣೀರಿಡುತ್ತಾ ಬಿನ್ನವಿಸಿದಾಗ , ಶ್ರೀದಾಸರು - ಆತನಿಗೆ ಹಿಂದಿನ ಜನ್ಮದಲ್ಲಿ ಸತ್ಪಾತ್ರರಿಗೆ ದಾನಮಾಡದ ಲೋಭಿತನವೇ ಈಗಿನ ಬಡತನಕ್ಕೆ ಕಾರಣವೆಂದು ತಿಳಿದು - ಆತನಲ್ಲಿದ್ದ ಒಡಕು ತಂಬಿಗೆಯೊಂದನ್ನು ತಾವೇ ದಾನವಾಗಿ ಪಡೆದು - ಅದನ್ನು ಮಾರಿಸಿ ಬಂದ ಹಣದಿಂದ ಕಲ್ಲುಸಕ್ಕರೆಯನ್ನು ತರಿಸಿ , ಪಾನಕ ಮಾಡಿಸಿ ಶ್ರೀನೃಸಿಂಹನಿಗೆ ನಿವೇದಿಸಿ ಅದನ್ನು ತಾವೂ ಸವಿದು -ಇತರರಿಗೂ ವಿತರಿಸಿದರು. ಆನಂತರ ಈ ' ಶ್ರೀಲಕ್ಷ್ಮೀನೃಸಿಂಹಸುಳಾದಿ 'ಯನ್ನು ರಚಿಸಿ ಆ ಬಡವೈಷ್ಣವನಿಗೆ ಉಪದೇಶನೀಡಿ ಅದನ್ನು ಸುರಪುರದ ಗುಡ್ಡದಲ್ಲಿನ ಶ್ರೀವ್ಯಾಸರಾಯರಿಂದ ಪ್ರತಿಷ್ಠಿತ ಪ್ರಾಣದೇವನ ಸನ್ನಿಧಿಯಲ್ಲಿ ಒಂದು ಮಂಡಲ ಪಠಿಸುವಂತೆ ಸೂಚಿಸಿದರು.
ಶ್ರೀದಾಸರ ಅಣತಿ - ಅನುಗ್ರಹದಿಂದ ಆತ ಮಾಡಿದ ಸೇವೆಯ ಫಲವಾಗಿ ಆಗಿನ ಸುರಪುರದ ರಾಜನಾಗಿದ್ದ ವೆಂಕಪ್ಪನಾಯಕನ ಭೇಟಿಯಾಗಿ ಶ್ರೀದಾಸರ ಶಿಷ್ಯನೆಂಬ ಕಾರಣದಿಂದ ಆತನಿಗೆ ಅರಮನೆಯಲ್ಲಿ ಕೆಲಸಕೊಟ್ಟು ಕ್ರಮೇಣ ತನ್ನ ದಿವಾನನನ್ನಾಗಿಯೂ ನೇಮಿಸಿ ಪುರಸ್ಕರಿಸಿದ. ಇಷ್ಟಾದರೂ ಆ ವೈಷ್ಣವ ಪ್ರತಿನಿತ್ಯ ಈ ಸುಳಾದಿಯ ಪಠನ ಹಾಗೂ ಶ್ರೀದಾಸರ ಉಪಕಾರಸ್ಮರಣೆ ಮಾಡುವುದನ್ಧು ಬಿಡಲಿಲ್ಲ! ಈಗಲೂ ಭಕ್ತಿಯಿಂದ ಈ ಸುಳಾದಿಯನ್ನು ಪಾರಾಯಣಮಾಡಿದರೆ ತಕ್ಷಣ ಅನಿಷ್ಟನಿವೃತ್ತಿಯಾಗಿ ಇಷ್ಟಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಸಿದ್ಧಿಪ್ರದಸ್ತ್ವಂ ಕಿಲದೇವವರ್ಯ ತ್ವತ್ಪ್ರೇರಿತೋऽಹಂ ತವಪಾದಮಾಪ್ತಃ ।
ತ್ವತ್ಪಾದಭಕ್ತೋ ಬಹಿರಂತರಾತ್ಮನ್ ಕಿಮಸ್ತಿ ವಿಜ್ಞಾಪ್ಯಮಶೇಷಸಾಕ್ಷಿಣಃ ॥ (೪-೮)
ಆದಿತ್ಯಪುರಾಣಾಂತರ್ಗತ ಶ್ರೀವೇಂಕಟೇಶಮಹಾತ್ಮ್ಯೆಯಲ್ಲಿ ದೇವಶರ್ಮನ ಪ್ರಾರ್ಥನೆಯ ಭಾವ ಈ ಸುಳಾದಿಯ ಮಾತುಗಳಲ್ಲಿದೆ.
ಸಂಗ್ರಹ :
ಹರಿದಾಸರತ್ನಂ ಶ್ರೀಗೋಪಾಲದಾಸರು
**********************
ಶ್ರೀಲಕ್ಷ್ಮೀನೃಸಿಂಹಸುಳಾದಿ
ಧ್ರುವತಾಳ
ದುರಿತವನಕುಠಾರಿ ದುರ್ಜನಕುಲವೈರಿ
ಶರಣಾಗತ ವಜ್ರಪಂಜರ ಕುಂಜರ-
ವರ ಸಂರಕ್ಷಕ ಜನ್ಮಮರಣರಹಿತ ಮಹಿತ
ಪರಮಕರುಣಾಸಿಂಧು ಭಕ್ತಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರಪುರುಷೋತ್ತಮ
ಉರುಗಾಯ ವೈಕುಂಠವರಮಂದಿರ ಚಂದಿರ-
ತರಣಿಕೋಟಿಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ-
ಗರಭಯಂಕರ ಲೋಕೈಕವೀರ
ನರಸಿಂಹ ನಿನ್ನ ಪಾದಕ್ಕೆರಗಿ ಭಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ ಸರುವರಂತರ್ಯಾಮಿ ಲೋಕಸ್ವಾಮಿ
ಸ್ಮರಣೆಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀ ಎಮ್ಮ ಪೊರೆವುದೀಗ
ಸರುವಕಾಮದ ಜಗನ್ನಾಥವಿಠ್ಠಲ ಭಕ್ತ-
ಪರಿಪಾಲಕನೆಂಬ ಬಿರುದು ನಿನ್ನದಲ್ಲವೇ ॥ 1 ॥
ಅರ್ಥ :- ದುರಿತವನಕುಠಾರಿ = ಪಾಪಗಳೆಂಬ ಅರಣ್ಯಕ್ಕೆ ಕೊಡಲಿಯ ಸದೃಶವಾಗಿದೆ ಶ್ರೀನರಸಿಂಹನ ಸ್ಮರಣೆ , ದುರ್ಜನಕುಲವೈರಿ = ದುಷ್ಟಜನರೆಂಬ ದೈತ್ಯರ ವಂಶಕ್ಕೆ ಶತ್ರು ರೂಪವಾಗಿದೆ , ಶರಣಾಗತವಜ್ರಪಂಜರ = ಮೊರೆಹೊಕ್ಕ ಜನರಿಗೆ ವಜ್ರಕವಚದಂತೆ ರಕ್ಷಕನು , ಕುಂಜರವರಸಂರಕ್ಷಕ = ಗಜೇಂದ್ರಪಾಲಕನು (ಕುಂಜರ - ಗಜ) , ಜನ್ಮಮರಣರಹಿತ = ಆದ್ಯಂತ ವಿದೂರ (ನಿತ್ಯ ಶಾಶ್ವತ ಸ್ವರೂಪನು), ಮಹಿತ = ಅಪಾರ ಮಹಿಮಾ ಸಂಪನ್ನನು , ಪರಮಕರುಣಾಸಿಂಧು = ಅತ್ಯಂತ ಶ್ರೇಷ್ಠನಾದ ದಯಾಸಾಗರನು , ಭಕ್ತಬಂಧು = ಭಕ್ತರಿಗೆ ಆಪ್ತಬಾಂಧವನು (ಬಿಂಬಗಲದ ಬಿಂಬರೂಪಿಯು) , ಸ್ವರತ = ತನ್ನ ಭಗವದ್ರೂಪಗಳಲ್ಲಿಯೇ ಕ್ರೀಡಿಸುವವನು (ಸ್ವರಮಣನು), ಸ್ವತಂತ್ರ = ಯಾರಿಂದಲೂ ಪರಾಧೀನನಲ್ಲ (ಸ್ವಾತಂತ್ರ್ಯ ಎಂಬುದು ಶ್ರೀಪರಮಾತ್ಮನ ಸ್ವರೂಪಗತ ಧರ್ಮವು) , ಜಗದ್ಭರಿತ = ಜಗತ್ತಿನ ಎಲ್ಲೆಡೆಯಲ್ಲಿಯೂ ವ್ಯಾಪಕನು (ತುಂಬಿ ಹರಡಿರುವವನು) , ಚಿತ್ಸುಖಪೂರ್ಣ = ಅಪ್ರಾಕೃತ (ಜಗದ್ವಿಲಕ್ಷಣವಾದ) ಜ್ಞಾನಾನಂದಸ್ವರೂಪನು (ಚಿತ್ - ಜ್ಞಾನ , ಸುಖ - ಆನಂದ) , ಹರಿಯ = ಸಜ್ಜನರ ಸಕಲಪಾಪ ಪರಿಹಾರಕವಾದ ಬಿಂಬರೂಪವು (ಹರಿ ಎಂದರೆ ಸಿಂಹ - ನರಸಿಂಹನೆಂತಲೂ ಅರ್ಥ) , ಕ್ಷರಾಕ್ಷರಪುರುಷೋತ್ತಮ = ಕ್ಷರ ನಾಮಕರಾದ ಬ್ರಹ್ಮಾದಿ ಜೀವರು , ಅಕ್ಷರನಾಮಕಳಾದ ಶ್ರೀಲಕ್ಷ್ಮೀದೇವಿ ಇವರುಗಳಿಗಿಂತ ಅನಂತಾನಂತ ಕೋಟಿ ಗುಣಗಳಿಂದ ಉತ್ತಮೋತ್ತಮನು , ಉರಗಶಯನ = ಶೇಷಶಾಯಿ (ಉರಗ - ಹೊಟ್ಟೆಯಿಂದ ಚಲಿಸುವ ಸರ್ಪ) , ವೈಕುಂಠವರಮಂದಿರ = ಶ್ರೇಷ್ಠವಾದ (ಪರಮಪದ) ವೈಕುಂಠವೆಂಬ ಮುಕ್ತಿಧಾಮನಿವಾಸಿಯು , ಚಂದಿರ = ಲಾವಣ್ಯನಿಧಿಯು (ಸಾಕ್ಷಾತ್ ಮನ್ಮಥ ಮನ್ಮಥಃ) , ತರಣಿಕೋಟಿಸಂಕಾಶ = ಕೋಟಿಸೂರ್ಯರ ಕಾಂತಿಯುಳ್ಳವನು , ವಿಮಲಕೇಶ = ಕೃಷ್ಣ ಕೇಶದಿಂದ ಅವತರಿಸಿದ ಶ್ರೀಕೃಷ್ಣ (ಸರ್ವ ಅವಯವ ಅಂಗಾಂಗ ಪರಿಪೂರ್ಣನೆಂದರ್ಥ) , ಧುರದೊಳಗೆ = ಕುರುಕ್ಷೇತ್ರ ಮಹಾಸಂಗ್ರಾಮದಲ್ಲಿ , ಅರ್ಜುನನ ತುರಗ = ಪಾರ್ಥನ ರಥವನ್ನು (ತುರಗ - ಕುದುರೆ , ಇಲ್ಲಿ ವಾಹನವಾದ ರಥವು) , ನಡೆಸಿದ = ಪಾರ್ಥಸಾರಥಿ ಶ್ರೀಕೃಷ್ಣ , ಸಂಗರಭಯಂಕರ = ರಣರಂಗದಲ್ಲಿ ಯಾರಿಂದಲೂ ಅಜೇಯನು (ಶತ್ರುಗಳಿಗೆ ಭೀಕರಸ್ವರೂಪನು) , ಲೋಕೈಕವೀರ = ಜಗತ್ತಿನಲ್ಲಿ ಏಕೈಕ ಅಸಮಪರಾಕ್ರಮಿ , ಸ್ಮರಣೆ ಮಾತ್ರದಿ = ಅಂತ್ಯಕಾಲದಲ್ಲಿ ಮಗನನ್ನು ಕರೆಯುವ ನೆಪದಲ್ಲಿ ' ನಾರಾಯಣ ' ಎಂದು ಕೂಗಿದ , ಅಜಾಮಿಳಗೆ = ಅಜಾಮಿಳನು ಸುಸಂಸ್ಕೃತ , ಜ್ಞಾನಿ . ಪ್ರಾರಬ್ಧಕರ್ಮವಶದಿಂದ ಕರ್ಮಭ್ರಷ್ಟನಾಗಿದ್ದ . ಅಂತ್ಯಕಾಲದಲ್ಲಿ ಶ್ರೀಮನ್ನಾರಾಯಣನ ಸ್ಮರಣೆಯಿಂದಲೇ ಸದ್ಗತಿ ಪಡೆದನು. ಅರಿದೇನೋ = ನೀನು ನಮ್ಮೆಲ್ಲರ ಸಂರಕ್ಷಕನೆಂದು ತಿಳಿದಿರುವೆ , ಸರುವ ಕಾಮದ = ಭಕ್ತಜನರ ಸಕಲ ಮನೋಭೀಷ್ಟಗಳನ್ನು ಸಲ್ಲಿಸುವ (ಕಾಮ - ಇಷ್ಟಾರ್ಥ , ದ - ಕೊಡುವವನು) , ಭಕ್ತಪರಿಪಾಲಕನೆಂಬ = ನಿನ್ನ ಬಿರುದೇ ಭಕ್ತವತ್ಸಲ - ಭಕ್ತ ಸಂರಕ್ಷಕನೆಂದಲ್ಲವೇ?
ಸಂಗ್ರಹ : ಭಜನಕೌಸ್ತುಭ
ಹೆಚ್ . ಎಸ್ . ಶ್ರೀನಿವಾಸಮೂರ್ತಿ
**************