Showing posts with label ಳಳ- ದೇಶಭಕ್ತಿ ಗೀತೆ- ಕರ್ನಾಟಕ ಮಾತೆ ನಮೋ ನಮೋ ಖ್ಯಾತೆ lakshmikanta patriotic. Show all posts
Showing posts with label ಳಳ- ದೇಶಭಕ್ತಿ ಗೀತೆ- ಕರ್ನಾಟಕ ಮಾತೆ ನಮೋ ನಮೋ ಖ್ಯಾತೆ lakshmikanta patriotic. Show all posts

Tuesday, 13 April 2021

ಕರ್ನಾಟಕ ಮಾತೆ ನಮೋ ನಮೋ ಖ್ಯಾತೆ ankita lakshmikanta patriotic

 ಕರ್ಣಾಟಕ ಮಾತೆ ಕರ್ನಾಟಕ ಮಾತೆ 


ದೀಪಾವಳಿಯ ನಿನ್ನೆಯ ಲೇಖನದಲ್ಲಿ ನೋಡಿದ್ದೇವೆ ನಮ್ಮ ಹರಿದಾಸರು ಸ್ಪಷ್ಟಮಾಡದ ವಿಷಯವೇ ಇಲ್ಲ ಎಂದು. ದೇಶದಲ್ಲಿ ಮಾರಿಕಾ ವ್ಯಾಧಿ ಹರಡಿದ್ದಾಗಲೂ ಜನರು ವ್ಯಾಧಿ ನಿರ್ಮುಕ್ತರಾಗಲು ಶ್ರೀ ವಾಸುದೇವವಿಠಲರು ರಚನೆ ಮಾಡಿದ್ದಾರೆ. ಹೀಗೆ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು.


ನಮ್ಮ ಭಾರತದೇಶದ ಖ್ಯಾತಿ ಎಂತದ್ದು ಎಂದು ಪುರಾಣಗಳೂ ಸಾರಿ ಹೇಳುತ್ತವೆ. ಕರ್ಮಭೂಮಿಯಾದ ನಮ್ಮ ಭಾರತದೇಶದಲ್ಲಿ ಮಾತ್ರ ಎಲ್ಲ ದೇವತೆಗಳು ಹುಟ್ಟಿ ಬಂದಿದ್ದಾರೆ. ಸ್ವಯಂ ಪರಮಾತ್ಮನೇ ಹುಟ್ಟಿ ಬಂದಿದ್ದಾನೆ. ಅಂತಹ ಪರಮ ಪವಿತ್ರವಾದ ದೇಶಮಾತೆಯನ್ನು ಸಹ ದಾಸರು ಹೊಗಳಿದ್ದಾರೆ. ಶ್ರೀವಿದ್ಯಾಪ್ರಸನ್ನತೀರ್ಥರು ಹಿಂದೂಸ್ತಾನವು ಬೇಡೆಮಗೆ ಗೋವಿಂದನ ಸ್ಥಾನಕ್ಕೆ ಹೊಡೆದಾಡಿ ಎಂದು ಸ್ವರಾಜ್ಯಕ್ಕಾಗಿ ಜನರು ಹೋರಾಡುವ ಸಮಯದಲ್ಲಿ ರಚಿಸಿದ್ದಾರೆ.  ಈ ಕೃತಿಯೂ ವಿಶೇಷವಾಗಿರುತ್ತದೆ.  ಅದರ ಅರ್ಥವನ್ನೂ ಒಂದು ದಿನ ನೋಡುವ ಭಾಗ್ಯ ಸಿಗಲಿ.


          ಈಗ ಕರುನಾಡಿನ ವಿಷಯಕ್ಕೆ ಬಂದರೆ ದೊಡ್ಡಬಳ್ಳಾಪುರದ ಶ್ರೀಮುದ್ದುಮೋಹನ ದಾಸಾರ್ಯರ ಶಿಷ್ಯಪರಂಪರೆಯಲ್ಲಿ ಬಂದವರಾದ ಶ್ರೀಕಾಂತ ಅಂಕಿತಸ್ಥರಾದ ಶ್ರೀ ದಾಸರ ಲಕ್ಷ್ಮೀನಾರಾಯಣ ದಾಸಾರ್ಯರು ಆಗಿನ ಸ್ವತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರಾಗಿ ಭರತಮಾತೆಯನ್ನು ಕುರಿತು ಸ್ವರಾಜ್ಯದ ಕುರಿತು ಅನೇಕ ಕೃತಿಗಳು ರಚನೆಮಾಡಿದ್ದಾರೆ.


           ಕರ್ಣಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ಶ್ರೀ ದಾಸರ ಲಕ್ಷ್ಮೀನಾರಾಯಣ ದಾಸರು  ರಚಿಸಿದ ಈ ಪದ...


ಸಾಹಿತ್ಯ


ಕರ್ಣಾಟಕಮಾತೆ ನಮೋ ನಮೋ ಖ್ಯಾತೆ ॥ಪಲ್ಲವಿ ॥


ಧನಧಾನ್ಯ ಸಂಭರಿತೆ ಶ್ರೀಕೃಷ್ಣಪ್ರೀತೆ ॥ ಅನುಪಲ್ಲವಿ ॥


ಮಲೆಯಾಳ ದ್ರವಿಡಾಂಧ್ರ ಮಹರಾಷ್ಟ್ರ ವರಣೆ

ಲಲಿತಾದಿ ತರುಗುಲ್ಮ ಸರಿದಾದ್ರಿ ಪೂರ್ಣೆ ॥


ಬುಧವಿನುತ ಮುಖಚಂದ್ರ ಭುಜಶೌರ್ಯಸಾಂದ್ರೇ

ಸದವಣಿಜ ಸೌಭಾಗ್ಯ ಸತ್ ಸೇವ್ಯಮಾರ್ಗೆ ॥


ಸಂಗೀತ ಸಾಹಿತ್ಯ ಸಕಲಾಂಗ ವರಣೆ

ಶೃಂಗಾರಮಾಂಗಲ್ಯೆ ಶುಭಾಂಗ ಪೂರ್ಣೆ ॥


ಶುಕಕೋಕಿಲಾಲಾಸೆ ಸತ್ ಚಿತ್ ವಿಲಾಪೆ 

ಅಕಳಂಕಜನವಾಸೆ ಸತ್ಯಪ್ರಕಾಶೆ ॥


ಸಕಲಮತಾಧಾರೆ ಸರ್ವಾರ್ಥಸಾರೆ

ಶ್ರೀಕಾಂತ ಪದಪದ್ಮ ಭಕ್ತಾರ್ಥಿಹಾರೆ ॥

***


ಹಾಗೆಯೇ ಕರ್ಣಾಟಕ ಮಾತೆಗೆ ಜಯಕಾರವನ್ನು ಹಾಡುವ ಈ ಕೃತಿಯೂ ಅಷ್ಟೇ ಸೊಗಸಾಗಿದೆ.  ಆಗಿನಕಾಲಕ್ಕೆ ಕೇರಳವು, ಆಂಧ್ರ, ತಮಿಳುನಾಡು, ಮಹರಾಷ್ಟ್ರಗಳು ಕರುನಾಡಿನ ಭಾಗವಾದ್ದರಿಂದ ಈ ಕೃತಿಯಲ್ಲಿ ಮಹರಾಷ್ಟ್ವವೂ ಸೇರಿದ್ದನ್ನು ಗಮನಿಸಬಹುದು.  ಸುಲಭವಾಗಿಯೇ ಅರ್ಥವಾಗುವ ಕೃತಿ. ಸೊಗಸಾದ ಸಾಹಿತ್ಯ... 


ಜ್ಞಾನಿಗಳ ಆವಾಸಸ್ಥಾನವಾದ ಈ ನಾಡು ಸಂಗೀತ ಸಾಹಿತ್ಯ ಮೊದಲಾದ ಎಲ್ಲ ಅಂಗಗಳಲ್ಲಿಯೂ ಪರಿಪೂರ್ಣವಾಗಿದೆ. ವಾಣಿಜ್ಯಕೇಂದ್ರವಾಗಿದ್ದು ಸಕಲರಿಗೂ ಆಶ್ರಯನೀಡುವುದಾಗಿದೆ.  ಸದಾ ಹಸಿರಾಗಿದ್ದು ಎಲ್ಲರಿಗೂ ಆಧಾರವಾಗಿದೆ. ಅಂತಹ ಕನ್ನಡ ಮಾತೆ ನಮ್ಮ ಶ್ರೀಕಾಂತ ಅಭಿನ್ನ ಶ್ರೀ ಲಕ್ಷ್ಮೀನಾರಾಯಣನ ಪದಪದ್ಮಗಳಲ್ಲಿ ಭಕ್ತಿಯನ್ನು ಮಾಡುವಳಾಗಿದ್ದಾಳೆ ಎನ್ನುವುದನ್ನು ಇಲ್ಲಿ ದಾಸಾರ್ಯರು ಈ ಕೃತಿಯ ಮುಖಾಂತರ ತಿಳಿಸಿಹೇಳಿದ್ದಾರೆ. ಶ್ರೀ ಲಕ್ಷ್ಮೀನಾರಾಯಣ ದಾಸಾರ್ಯರು ಅನೇಕ ಕೃತಿಗಳ ರಚನೆ ಮಾಡಿದ್ದಾರೆ. ಕೃತಿಗಳ ಸಂಗ್ರಹ ಮಾಡಿದ್ದಾರೆ. ಪ್ರಕಟಣೆಗೆ ಸಹಾಯವೂ ಮಾಡಿದ್ದಾರೆ. ಇಂತಹ ಗುಪ್ತಸಾಧಕರು ನಮಗೆ ಮಾಡಿದ ಮಹೋಪಕಾರವನ್ನು ಮರೆಯದಿರುವುದೇ ನಮ್ಮ ಕರ್ತವ್ಯವೆಂದು ಹೇಳುತ್ತಾ...


ಇಂತಹ ಅದ್ಭತವಾದ ಕೃತಿಗಳನ್ನು ನೀಡಿದ ನಮ್ಮ ಎಲ್ಲ ದಾಸವರೇಣ್ಯರಲ್ಲಿ ಭಕ್ತಿಯಿಂದ ನಮಸ್ಕಾರಗಳನ್ನು ಸಲ್ಲಿಸುತ್ತಾ...


ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ...


ಜೈ ವಿಜಯರಾಯ

ಪದ್ಮ ಸಿರಿಶ್ 

ನಾದನೀರಾಜನದಿಂ ದಾಸಸುರಭಿ. 🙏🏽

***