ಗಜೇಂದ್ರ ಮೋಕ್ಷ
ಪಾಲ ಸಮುದ್ರದ ಮಧ್ಯ ಭಾಗದಲಿ
ತ್ರಿಕೂಟ ಪರ್ವತವು ನೆಲಸಿಹುದು
ಸುವರ್ಣಮಯ ಶಿಖರವು ಮತ್ತೆ
ರಜತ ಲೋಹ ಶಿಖರಗಳಿರಲು||ಪಲ್ಲ||
ವರುಣನ ಉದ್ಯಾನವನವು ಇರಲು
ಅಮೃತ ಸದೃಶ ಸರೋವರವು
ಇಂದ್ರದ್ಯುಮ್ನರಾಜ ಶಾಪಗ್ರಸ್ತನಾಗಿ
ಗಜರಾಜನಾಗಿ ಅಲ್ಲಿ ಪುಟ್ಟಿದನು||೧||
ಹಾ ಹಾ ಗಂಧರ್ವನೆಂಬ ಹೆಸರಿನಿಂದ
ಮಹಾ ಸುಖದಿಂದ ಇರುತಿದ್ದನು
ಹೂ ಹೂಎನ್ನುವ ಗಂಧರ್ವ ತಾನು
ಮಕರನಾಗಿ ಅಲ್ಲಿ ಪುಟ್ಟಿದನು||೨||
ಗಜರಾಜ ತಾನು ವರುಣನ ಉದ್ಯಾನದಿ
ವಿಹಾರ ಮಾಡುತಿರಲೊಂದುದಿನ
ಅತಿಯಾದ ಬಾಯಾರಿಕೆಯಾಗುತಿರಲು
ಸರೋವರದ ಬಳಿ ಬಂದನಾಗ||೩||
ಹರಿವ ನೀರನೆ ಕಂಡು ಸಂತೋಷದಿಂದ
ಪರಿವಾರ ಸಹಿತ ಸ್ನಾನವ ಮಾಡಲು
ಸಂತಸದಿಂದ ಇರುವ ಕಾಲಕ್ಕೆ
ಮಕರಿಯು ಕಾಲು ಗಟ್ಟಿಯಾಗಿ ಹಿಡೀಯೆ||೪||
ಗಜರಾಜ ತಾನು ಹೊರಗಡೆ ಎಳೀಯೆ
ಮಕರಿಯು ತಾನು ಒಳಗೆ ಎಳೆಯೆ
ದೊಡ್ಡ ಸಂಗ್ರಾಮವು ಆದಂತೆಆಗಿ
ಸಾವಿರ ವರುಷಗಳು ಕಳಿಯೆ||೫||
ತನ್ನವರೆಂದು ಕರೆದು ವಿಹರಿಸಿದ
ಸಮಯಕ್ಕೆ ಯಾರು ಬಾರದೆ ದೂರ
ಹೋದ ಬಾಂಧವರನ ಕಂಡು
ಆಶ್ಚರ್ಯ ಪೊಂದಿದ ಗಜರಾಜನು||೬||
ನಿದ್ರಾಹಾರವಿಲ್ಲದೆ ಕದನವು ನೋಡಿ
ಸುರರು ದಿಗ್ಭ್ರಾಂತಿ ಚಂದಿದರು ತನ್ನವ
ರೆನ್ನುವ ಬಾಂಧವರೆಲ್ಲ ದೂರ ದೂರ
ಹೋಗಿತೆರಳಿದರು||೭||
ತನ್ನ ರಕ್ಷಿಸುವ ನಾಥರು ಯಾರೆಂದು
ಅಂತರಂಗದಲಿ ಚಿಂತಿಸಿದ ಶ್ರೀಪತಿ
ವಿನಹ ರಕ್ಷಿಸುವರ್ಯಾರಿಲ್ಲೆಂದು
ಜ್ಞಾನ ಜ್ಯೋತಿ ಮನದಲಿ ಬೆಳಗೆ||೮||
ಕರಿರಾಜನ ವದನದಿ ಮಂಗಳ ಗೀತೆ ಬರಲು
ಮೊರೆಯ ಆಲಿಸಿದ ಶ್ರೀ ಹರಿಯು ತಾನು
ಗರುಡಗಮನನಾದ ಸ್ವಾಮಿಯ ಧ್ಯಾನಿಸಿ
ಭಕ್ತಿಯಿಂದ ಬೇಡಿಕೊಂಡನಾಗ||೯||
ಭುವಿಗೆ ಇಳಿದು ಬಂದ ಸ್ವಾಮಿಯು ತಾನು
ಚಕ್ರದಿ ಮಕರಿ ಶಿರವ ಖಂಡಿಸಿ
ಕೃಪಾ ಸಮುದ್ರ ಭಕ್ತ ವತ್ಸಲ ಸ್ವಾಮಿ
ಸಲಹಿದನೆಂದು ದೇವತೆಗಳು ನುಡಿಯೆ||೧೦||
ಸಾತ್ವಿಕ ರಾಜಸ ತಾಮಸ ಗುಣಗಳೆಂಬ
ತ್ರಿಕೂಟ ಪರ್ವತ ದಂತೆ ನಮ್ಮ ಮನದಲ್ಲಿರಲು
ಭೋಗಾಸಕ್ತ ವಾದ ಜೀವನವನ್ನ ಕಳೆದು
ಮಧ್ವೇಶಕೃಷ್ಣ ನ್ನ ಧ್ಯಾನಿಪುದು||೧೧||
********