Showing posts with label ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ankita neleyadikeshava ISHTU DINA EE VAIKUNTA. Show all posts
Showing posts with label ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ankita neleyadikeshava ISHTU DINA EE VAIKUNTA. Show all posts

Tuesday, 15 October 2019

ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ankita neleyadikeshava ISHTU DINA EE VAIKUNTA


ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||

ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||

ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||
***

iShTu dina I vaikuMTha

eShTu dUravo ennutalidde

dRuShTiyiMdali naanu kaMDe

sRuShtigIshane shrIraMgashaayi ||pa||

eMTu ELanu kaLedudariMde

baMTaraivara tuLidudariMde

kaMTakanobbana taridudariMde

baMTanaagi baMdeno shrIraMgashaayi ||2||

vana upavanagaLiMda

ghana sarOvaragaLiMda

kanaka gOpuragaLiMda

ghanashobhitane shrIraMgashaayi ||3||

vajra vaiDUryada tolegaLa kaMDe

prajvalipa mahaadwaarava kaMDe

nirjaraadi munigaLa kaMDe

durjanaaMtakane shrIraMgashaayi ||3||

raMbhe Urvashiyara mELava kaMDe

tuMburu muni naaradaranu kaMDe

aMbujOdbhava rudrara kaMDe

shaMbaraaripitane raMgashaayi ||4||

naagashayanana mUruti kaMDe

bhOgibhUShaNa shivananu kaMDe

bhaagavatara sammELava kaMDe

kaagineleyaadikEshava shrIraMgashaayi ||5||
***


Ishtu dina I vaikuntha eshtu duravo ennutalidde
Drushtiyindali naanu kande srushtigishane shrirangashaayi ||pa||

Entu elanu kaledudarinde bantaraivara tulidudarinde
Kantakanobbana taridudarinde bantanaagi bandeno shrirangashaayi ||1||

Vana upavanagalinda ghana sarovaragalinda
Kanaka gopuragalinda ghanashobhitane shrirangashaayi ||2||

Vajra vaiduryada tolegala kande prajvalipa mahaadwaarava kande
Nirjaraadi munigala kande durjanaantakane shrirangashaayi ||3||

Rambhe Urvashiyara melava kande tumburu muni naaradaranu kande
Ambujodbhava rudrara kande shambaraaripitane rangashaayi ||4||

Naagashayanana muruti kande bhogibhushana shivananu kande
Bhaagavatara sammelava kande kaagineleyaadikeshava shrirangashaayi ||5||
***

ಎಷ್ಟು ದೂರ!

ಇಷ್ಟು ದಿನ ಈ ವೈಕುಂಠ 
ಎಷ್ಟು ದೂರವೋ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನುಕಂಡೆ
ಸೃಷ್ಟಿಗೀಶನೆ ಶ್ರೀ ರಂಗಶಾಯಿ  |ಪ|
ಎಂಟು ಏಳನು  ಕಳೆದುದರಿಂದ
ತುಂಟರೈವರ ತುಳಿದುದರಿಂದ
ಕಂಟಕೊಬ್ಬನ ಅಳಿದುದರಿಂದ
ಭಂಟನಾಗಿ ಬಂದೇ ಶ್ರೀ ರಂಗಶಾಯಿ ||1||
ವನ ಉಪವನಗಳಿಂದ 
ಘನ ಸರೋವರಗಳ ನದ
ಕನಕ ಗೋಪುರಗಳಿಂದ
ಘನ ಶೋಭಿತನೆ ಶ್ರೀ ರಂಗಶಾಯಿ ||2||
ವಜ್ರ ವೈಢೂರ್ಯ ತೊಲೆಗಳ ಕಂಡೆ.
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕ ಶ್ರೀ ರಂಗಶಾಯಿ ||3||
ರಂಭೆ ಊರ್ವಶಿ ಮೇಳವ  ಕಂಡೆ
ತುಂಬುರು ನಾರದರ ಕಂಡೆ
ಅಂಬುಜೋದ್ಭವ ಪ್ರಮುಖರ 
ಶಂಬರಾರಿ ಪಿತನೆ ಶ್ರೀ ರಂಗಶಾಯಿ ||4||
ನಾಗಶಯನ ಮೂರತಿ ಕಂಡೆ
ಭೋಗಿಭೂಷಣ ಶಿವನನು 
ಭಾಗವತರ ಸಮ್ಮೇಳನವ 
ಕಾಗಿನೆಲೆ ಆದಿಕೇಶವ ಶ್ರೀ ರಂಗಶಾಯಿ ||5||
***
artha by dr. vijendra desai
ದಾಸವರೇಣ್ಯರು ಕನಕದಾಸರು. 
ಅವರ ಪ್ರಸಿದ್ಧ ದೇವರ ನಾಮ. 
ಮೇಲು ನೋಟಕ್ಕೆ ಸರಳ. ಸುಂದರ. 
ಅಷ್ಟೇ ಕಠಿಣ. ಬಹು ಅರ್ಥ ಗರ್ಭಿತ.
ವೈಕುಂಠಕ್ಕೇ ಕರೆದೊಯ್ಯುತ್ತಾರೆ.
ವೈಕುಂಠದ ಘನ ವೈಭವ ನೋಡಿ.
ಶ್ರೀ ರಂಗಶಾಯಿಯ ದರ್ಶನ ಮಾಡಿ.
ಭಾಗವತರು ಕೇಳುತ್ತಾರೆ  - 
'ದಾಸರೇ, ವೈಕುಂಠದ ದಾರಿ ನಿಮಗೆ 
ಹೇಗೆ ದೊರೆಯಿತು?'
ದಾಸರ ಉತ್ತರ --
ಹೌದು ಸಜ್ಜನರೇ.
ವೈಕುಂಠ ದೂರ. 
ದಾರಿ ದುರ್ಗಮ. 
ಹರಿ ದರ್ಶನ ಅಸಾಧ್ಯ.
ಇದು ನನ್ನ ಇಷ್ಟು ದಿನದ ‌ ಅರಿವು.
ಇದೀಗ ಬದಲು.
ಈಗೇನಾಯಿತು?
ಗುರು ಸಿಕ್ಕ. 
ನಿಷ್ಠೆ ಇಟ್ಟೆ. 
ಫಲವಾಯಿತು. 
ಅನುಗ್ರಹ ದೊರೆಯಿತು.
ಗುರು ಪ್ರಸಾದೋ ಬಲವಾನ್|
'ಇದೇ ದಾರಿ ವೈಕುಂಠಕ್ಕೆ.  
ವೈಕುಂಠಪತಿ ದರ್ಶನಕ್ಕೆ.'
ಗುರು ಸರಿ ದಾರಿ ತೋರಿದ. 
ಅದಕ್ಕಾಗಿ
ಇಷ್ಟು ದಿನ ಎಷ್ಟು ದೂರವೋ ಎನಿಸಿದ ವೈಕುಂಠ
ಇಂದು ಇಷ್ಟೇ ದೂರವಾ ಎನಿಸುತ್ತಿದೆ.
ದೂರದ ಊರು ನೆರೆ ಮನೆಯಾಯ್ತು.
ಮತ್ತೆ ದಾಸರು ವೈಕುಂಠದ ದಾರಿ ಎಂತು, 
ಮುಟ್ಟುವ ಬಗೆ ಹೇಗೆ, ಹೇಳುತ್ತಾರೆ.
ತಾವು ಕಟ್ಟಿದ ಬುತ್ತಿ, ಇಟ್ಟ ಹೆಜ್ಜೆ, 
ಕ್ರಮಿಸಿದ ದಾರಿ, ಕಂಡ ವಭವ ವರ್ಣಿಸುತ್ತಾರೆ.
ಕೈ ಮುಗಿದು ಕೇಳೋಣ.--

ಎಂಟು ಏಳನ್ನು ಕಳೆಯ ಬೇಕು.
ತುಂಟ ಐವರ ತುಳಿಯ ಬೇಕು.
ಕಂಟಕೊಬ್ಬನ ಅಳಿಯ ಬೇಕು.
8+7+5+1 = 21
ಪಂಚಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಪಂಚಭೂತ, ಪಂಚತನ್ಮಾತ್ರ
ಮತ್ತೆ ಮೆಲೆ ಮನಸ್ಸು ಈ ಇಪ್ಪತ್ತೊಂದು ತತ್ವಗಳು.  
ಅವುಗಳ ಉಪಯೋಗ ಸರಿಯಾಗ ಬೇಕು. ಅಂದರೆ ಸಾಧನೆಯತ್ತ ಮುಖ.
ತಪ್ಪಿದರೆ ಅಧೋಮುಖ.
ಜ್ಞಾನೇಂದ್ರಿಯ, ಕರ್ಮೇಂದ್ರಿಯ ತಪ್ಪು 
ದಾರಿ ಹಿಡಿಯ ಬಾರದು.
ಇಂದ್ರಿಯಗಳ ವಶ ನಾವಲ್ಲ. 
ನಮ್ಮ ವಶದಲ್ಲಿ ಇಂದ್ರಿಯಗಳು. 
ಇದು ಇಂದ್ರಿಯ ಜಯ.
ಪಂಚಭೂತ,ಮಾತ್ರಾಗಳುಸಂಕೇತ.
ದೇಹ, ಗೇಹಗಳ
ಅಭಿಮಾನಕ್ಕೆ ಹೇತು.
ಅವುಗಳನ್ನು ಕಳೆದು ಕೊಳ್ಳ ಬೇಕು.
ಅಭಿಮಾನ ಷಟ್ಕ, ಅಜ್ಞಾನ ಷಟ್ಕಗಳ ನಾಶ.
ಕಣ್ಣು, ಕಿವಿ, ಮೂಗು,‌ ನಾಲಿಗ, ತ್ವಚೆ ಇವು
ಐದು ಜ್ಞಾನೇಂದ್ರಿಯಗಳು.
ಇವೇ ತುಂಟರು. ಯಾಕೆ?
ನೋಡಬಾರದ್ದು ನೋಡಲೆ ಬೇಕು.
ಕೇಳಬಾರದ್ದು ಕೇಳುವದು.
ಮೂಸಬಾರದ್ದು ಮೂಸುವದು.
ತಿನಬಾರದ್ದು ತಿನ್ನುವದು.
ಮುಟ್ಟಬಾರದ್ದು ಮುಟ್ಟುವದು.
ಇದು ಅಡ್ಡ ದಾರಿ. ತುಂಟರ ದಾರಿ.
ಇವುಗಳನ್ನು ತುಳಿದು ಅಂದರೆ ಮೆಟ್ಟಿ ನಿಲ್ಲ ಬೇಕು. 
ಇಂದ್ರಿಯ ನಿಗ್ರಹ ಬೇಕು.
ಕಂಟಕ - ಚಂಚಲ ಮನಸ್ಸು. 
ಸತ್ಕಾರ್ಯ ಬಯಕೆ.
ಆದರೆ ದುಷ್ಕರ್ಮ ಕರಣ.
ಹಿತ ಅಕರಣ.
ಅಹಿತ ಕರಣ.
ಮನೋನಿಗ್ರಹ ಬೇಕು. 
ಕಂಟಕ ಅಳಿಯ ಬೇಕು. 
ಮನ ಹರಿ ಪದತಲದಿ ಸ್ಥಿರವಾಗ ಬೇಕು.
ಎಂಟನ್ನು ಅಳಿಯ ಬೇಕು.
ಅಷ್ಟ ಮದಗಳ ಕಳೆದು ಕೊಳ್ಳ ಬೇಕು.
ಮತ್ತೆ ಅಹಂ,‌ ಮಮಕಾರ ಅಳಿಯ ಬೇಕು.
ಭಂಟನಾಗೀ ಬಂದೇ --
ಈತ ಭಂಟನಾಗಿ ಬರಬೇಕು. 
ಆತ ನೆಂಟನಾಗಿ ಉದ್ಧರಿಸುತ್ತಾನೆ.
ಆತ ಈಶ. ನಾನು ದಾಸ. 
'ರಕ್ಷತೀ ಇತ್ಯೇವ ವಿಶ್ವಾಸಃ'
ನನ್ನ ರಕ್ಷಣೆ ಆತನ ಹೊಣೆ.
ಸಂಪೂರ್ಣ ಶರಣಾಗತಿ.
ಇವು ಹೇಗೆ ಸಾಧ್ಯ? 
ಶಾಸ್ತ್ರ ಅಧ್ಯಯನ. 
ಸಜ್ಜನ ಸಂಗ
ಹರಿ, ವಾಯು, ಗುರುಗಳ ಅನುಗ್ರಹ. 
ಇದು ವೈಕುಂಠದ ದಾರಿ.
ದೃಷ್ಟಿಯಿಂದಲೀ ನಾನು ಕಂಡೆ. --
ಪರಮಾತ್ಮನ ಅನುಗ್ರಹ.
ಹೊಸಕಣ್ಣು ಹಚ್ಚಿದ.
ದಿವ್ಯ ದೃಷ್ಟಿ ಕೊಟ್ಟ.
ವೈಭವದ ವೈಕುಂಠ, 
ಅಲ್ಲಿ ಭಾಗವತರ ಅರಸು.
ಸೃಷ್ಟಿ ಸ್ಥಿತಿ ಲಯಾದಿಗಳ ಈಶ 
ಶೇಷಶಾಯಿ ಶ್ರೀ ರಂಗನ ಕಂಡೆ.
ಮತ್ತೆ ಅಲ್ಲಿ ಏನೇನು ಕಂಡೆ? 
ದಾಸರು ಹೇಳುತ್ತಾರೆ -
ವನ, ಉಪವನ, ಘನ ಸರೋವರ, ಕನಕ ಗೋಪುರಗಳ ಕಂಡೆ. --- 
ಇವೆಲ್ಲ ಮನೋಹರ ಸುಂದರ ವೈಕುಂಠದ ವೈಬವಗಳು. 
ಇನ್ನೊಂದು ಅರ್ಥ --
ವನ = ನೀರು  = ತೀರ್ಥ = ಶಾಸ್ತ್ರ
ಶಾಸ್ತ್ರ ಅಂದರೆ ಜ್ಞಾನ ಮಯ. 
ಸುಜ್ಞಾನದ ಸರೋವರ, ಸಾಗರಗಳ ಕಂಡೆ.
ವಜ್ರ, ವೈಡೂರ್ಯದ ತೊಲೆಗಳ ಕಂಡೆ.
ವೈಕುಂಠ ಸಕಲ ಸಂಪದ್ಭರಿತ ಇದು ಒಂದು ಅರ್ಥ.  ಇನ್ನೊಂದು -
ಘನೀಕೃತ ಭಕ್ತಿ ವಿರಕ್ತಿಗಳಾದಿಗಳೇ ತೊಲೆಗಳು.
ಅಂದರೆ ವೈಕುಂಠದ ದಾರಿಗೆ 
ಸದ್ಗುಣಗಳೇ ಆಧಾರ ಸ್ತಂಭಗಳು.
ಅಲ್ಲಿದೆ ಪ್ರಜ್ವಲಿಸುವ ಮಹಾದ್ವಾರ.
ತೇಜ, ಪ್ರಜ್ವಲನ  ಜ್ಞಾನದ ಸಂಕೇತ.
ತೇಜೋಮಯ ಜ್ಞಾನದ ಹೆಬ್ಬಾಗಿಲು.
ಜ್ಞಾನಿಗಳ ದರ್ಶನ.
ನಿರ್ಜರಾದಿ ಮುನಿಗಳ ಕಂಡೆ. --
ಅಲ್ಲಿ ಸಂಸಾರ ಗೆದ್ದ ಮುನಿಗಳು.
ಭಕ್ತಿ, ಜ್ಞಾನಗಳಿಂದ ಪರಮಾತ್ಮನನ್ನು
ಹಾಡುತ್ತಿದ್ದಾರೆ. ಕೊಂಡಾಡುತ್ತಿದ್ದಾರೆ.
ಆನಂದಪಡುತ್ತಿದ್ದಾರೆ.
ನವ ವಿಧ ಭಕ್ತಿಯ ಘನ ವೈಭವ.
ದಿವ್ಯ  ಹರಿ ಮಹಾತ್ಮೆ ಹಾಡುವ 
ತುಂಬುರು, ನಾರದರು
ನರ್ತನ ಸೇವೆ ಮಾಡುವ ರಂಭೆ, ಊರ್ವಶಿಯರು.
ಶ್ರವಣ, ಮನನ,ಧ್ಯಾನ, ಬ್ರಹ್ಮ ಜಿಜ್ಣಾಸೆ.
ಇವೆಲ್ಲ ಮಾಡುತ್ತಿರುವ ಭಾಗವತರ 
ಸಮ್ಮೇಳನಗಳು ಅಲ್ಲಲ್ಲಿ.
ಮತ್ತೆ
ಅಂಬುಜೋದ್ಭವ - ಬ್ರಹ್ಮ, ರುದ್ರಾದಿ, 
ಹರಿ ಪರಿವಾರದ ಮಹಾ ವೈಭವ ಕಂಡೆ.
ಇಂತಹ ಮಹಾ ವೈಭವದ ವೈಕುಂಠದ 
ಮಧ್ಯೆ ರಾರಾಜಿಸುವ
ನಾಗಶಯನ ಶ್ರೀ ರಂಗ ಅಬಿನ್ನ ಆರಾಧ್ಯ ದೈವ
ಆದಿಕೇಶವನನ್ನು ಕಾಣುತ್ತಾರೆ ಕನಕದಾಸರು.
ಅವರು ಅಪರೋಕ್ಷ ಜ್ಞಾನಿಗಳು.
ಒಟ್ಟಿನಲ್ಲಿ ತಾತ್ಪರ್ಯ --
ಶಾಸ್ತ್ರ ಶ್ರವಣ, ಮನನ,ಜಿಜ್ಣಾಸೆ
ತತ್ವ ನಿಶ್ಚಯವಾಗ ಬೇಕು.
ಇಪ್ಪತ್ತೊಂದು ತತ್ವಗಳ 
ಸದುಪಯೋಗವಾಗ ಬೇಕು.
ಪರಮ ವಿಶ್ವಾಸವಿಡ ಬೇಕು. 
ದಾಸನಾಗ ಬೇಕು.
ನವವಿಧ ಭಕ್ತಿ ಬೆಕು.
ಭಕ್ತಿ ವಿರಕ್ತಿಯ ಆಧಾರ ಸ್ತಂಭ ಕಟ್ಟಬೇಕು.
ಜ್ಞಾನವೇ ವೈಕುಂಠದ ದಾರಿಯ ಮಹಾದ್ವಾರ.
ಇಷ್ಟೆಲ್ಲ ಪಾಥೇಯ ಕಟ್ಟ ಬೇಕು.
ಆಗ ಅದು ಸರಿ ದಾರಿ.
ವೈಕುಂಠ ಒಂದೇ ಕೂಗಳತೆ.
ವೈಕುಂಠ ಪತಿ ನಾಗಶಯನನ ದರ್ಶನ.
ಎನ್ನುತ್ತಾರೆ ದಾಸವರೇಣ್ಯರು.
ಹೆದ್ದೈವನ, ಅವನ ಅರಮನೆ, ಸಿರಿಮನೆ ಕಂಡ ಕನಕದಾಸರಿಗೆ ನಮಿಸಿ, ಅವರ ಅಂತರ್ಗತ
ಮುಖ್ಯಪ್ರಾಣ ಅಂತರ್ಗತ
ಶೇಷಶಾಯಿ ಆದಿಕೇಶವನಿಗೆ ಸಹಸ್ರ ನಮಿಸಿ ಅನುಗ್ರಹ ಪಡೆಯೋಣ.
(ದಾಸರ ಮಾತಿಗೆ ಇದೊಂದು ವಿಭಿನ್ನ ಅರ್ಥ ಮಾಡುವ ಪ್ರಯತ್ನ. ಸರಿಯೇ ನೋಡಿ.)
ಡಾ. ವಿಜಯೇಂದ್ರ ದೇಸಾಯಿ..
ಶ್ರೀ ಕೃಷ್ಣಾರ್ಪಣಮಸ್ತು.
***