..
ವಾರಿಜನಾಭನ ವನಜಾಂಘ್ರಿಗಳಿಗೆ
ಜೋಡಿಸಿ ಕರವ ಕೊಂಡಾಡುವೆ ಪದವ 1
ದೇವದೈತ್ಯರು ಕೂಡಿ ಪಾಲಾಂಬುಧಿಯಲ್ಲಿ
ಮೇರು ಮಂದರವ ಕಡೆಗೋಲು ಮಾಡಿದರು2
ಗಿರಿಗೆ ವಾಸುಕಿ ಸುತ್ತಿ ಶರಧಿ ಮಧ್ಯದಲಿ
ಹರಿ ಕೂರುಮನಾಗಿ ಮಂದರವನೆತ್ತಿದನು3
ಕಾಲಕೂಟ ವಿಷವಾಯು ಪಾನಮಾಡುತಲಿ
ಮಹದೇವ ಕೋಪದಿ ನುಂಗಿ ನೀಲಕಂಠೆನಿಸೆ 4
ರತ್ನ ಕೌಸ್ತುಭ ಕಾಮಧೇನು ಸುರತರುವು
ಹಸ್ತಿ ತೇಜಿಯು ಕಲ್ಪವೃಕ್ಷ ಸುಧೆ ಉದಿಸೆ 5
ಸಿಂಧು ಮಥನವ ಮಾಡಲು ಶ್ರೀದೇವಿ ಜನಿಸೆ
ಮಂದಾರಮಾಲೆ ಕೈಯಿಂದಲಿ ಪಿಡಿದು 6
ಅರ್ಕಚಂದ್ರರ ಕಾಂತಿಗಧಿಕಾದ ಮುಖವು
ದಿಕ್ಕು ದಿಕ್ಕಿಗೆ ಮಿಂಚಿನಂತೆ ಹೊಳೆಯುತಲಿ 7
ವಜ್ರಾಭರಣವು ಕಾಲಗೆಜ್ಜೆ ಸರಪಳಿಯು ಮಲ್ಲಿಗೆ
ಕುಸುಮಗಳೊಂದೊಂದ್ಹೆಜ್ಜೆಗುದುರುತಲಿ 8
ಕುಡಿಹುಬ್ಬು ಕಡೆಗಣ್ಣ ನೋಡುತಲಿ ನಡೆದು
ಬಂದಳು ತಾ ಬಡನಡುವಿನ ಒಯ್ಯಾರಿ 9
ಅತಿಹಾಸ್ಯಗಳಿಂದ ದೇವತೆಗಳ ಮಧ್ಯೆ ಈ
ಪೃಥಿವಿಗುತ್ತಮನಾದ ಪತಿ ಎಲ್ಲಿಹನೋ ತಾ 10
ಅರ್ಕನ್ವಲ್ಲೆನೆ ಅಗ್ನಿಯಂತೆ ಸುಡುತಿರುವನ
ಶಕ್ರನ ಒಲ್ಲೆ ಮೈಯೆಲ್ಲ ಕಣ್ಣವಗೆ 11
ಸೋಮನ ಒಲ್ಲೆ ಕಳೆಗುಂದಿ ತಿರುಗುವನ
ಪಾವನ ನಮ್ಮ ಗಾಳಿರೂಪದವನ12
ರುದ್ರನ್ವಲ್ಲೆನೆ ರುಂಡಮಾಲೆ ಹಾಕುವನ
ಮುದಿಹದ್ದಿನಂದದಲಿ ಗರುಡ ಹಾರ್ಯಾಡುವನಲ್ಲೆ 13
ಶೇಷನ ಒಲ್ಲೆ ವಿಷದ ದೇಹದವನ ಗ-
ಣೇಶನ್ವಲ್ಲೆನೆ ಡೊಳ್ಳು ಹೊಟ್ಟೆ ಗಜಮುಖನ 14
ಬ್ರಹ್ಮ ನಾಲಕು ಮೋರೆಗುಮ್ಮನಂತಿರುವ ಯಮ-
ಧರ್ಮನ ಒಲ್ಲೆ ನಿಷ್ಕರುಣ ಘಾತಕನ 15
ನಾರದ ನರೆಗಡ್ಡ ಚಾಡಿಕೋರ್ಯಿವನನೊಲ್ಲೆ
ಸುರಜನರ ನೋಡಿ ಗಾಬರ್ಯಾಗುವೆನು 16
ಮಂದ ಹಾಸ್ಯಗಳಿಂದ ಮಾತನಾಡುತಲಿ
ಇಂದಿರೆಪತಿ ಪಾದಾರವಿಂದ ನೋಡುತಲಿ 17
ಗುಣದಲಿ ಗಂಭೀರ ಮಣಿಕೋಟಿತೇಜ
ಎಣಿಕಿಲ್ಲದ ಚೆಲುವ ನೋಡೆನ್ನ ಪ್ರಾಣನಾಥ 18
ಹದಿನಾಲ್ಕು ಲೋಕ ತನ್ನುದರದಲ್ಲಿರುವ
ಪದುಮಾಕ್ಷಗ್ವನಮಾಲೆ ಮುದದಿಂದ್ಹಾಕುವೆನು 19
ವರ ಶಂಖ ಚಕ್ರ ಕರ ಮೆರೆವೋ ವೈಜಯಂತಿ ಸರ
ಕೌಂಸ್ತುಭ ಮಣಿ ನಾ ಇರುತಿರೆ ವಕ್ಷಸ್ಥಳವು 20
ಶ್ಯಾಮವರ್ಣನ ಮುದ್ದು ಕಾಮನಜನಕ
ಪ್ರೇಮದಿಂದ್ವೊಲಿವೆ ನಾ ಕಾಮಿಸಿ ಹರಿಯ 21
ಕಮಲಮುಖಿ ಬ್ಯಾಗ ಕಮಲಾಕ್ಷನ್ನ ನೋಡಿ
ಕಮಲಮಾಲೆಯ ತಾ ಕಂದರದಲ್ಹಾಕಿದಳು 22
ರಂಗರಾಯನ ಸುಂದರಾಂಗಕ್ವನಮಾಲೆ
ಅಂಗನೆ ರಚಿಸಿ ತಾ ನಿಂತಳು ನಗುತ 23
ರತ್ನ ಮಂಟಪ ಚಿನ್ನ ಚಿತ್ರ ಪೀಠದಲಿ
ಲಕ್ಷ್ಮೀನಾರಾಯಣರು ಒಪ್ಪಿ ಕುಳಿತಿರಲು 24
ಸಾಗರರಾಜ ತನ್ನ ಭಾಗೀರಥಿ ಕೂಡಿ
ಬ್ಯಾಗ ಬಂದ್ಹರಿಗೆ ಸಿರಿ ಧಾರೆಯನೆರೆದ 25
ಅಚ್ಚಕರಿಮಣಿ ಮಂಗಳಸೂತ್ರವ ಪಿಡಿದು
ಅಚ್ಚುತ ಲಕುಮಿಗೆ ಕಟ್ಟಿದ ನಗುತ 26
ಮೇಲು ಕರಿಮಣಿ ಮಂಗಳ ಸೂತ್ರವ ಪಿಡಿದು
ಶ್ರೀ ಲೋಲ ಲಕುಮಿಗೆ ತಾ ಕಟ್ಟಿದ ನಗುತ 27
ವಂಕಿ ಕಂಕಣ ಮುತ್ತಿನ ಪಂಚಾಳಿಪದಕ
ಪಂಕಜಮುಖಿಗೆ ಅಲಂಕರಿಸಿದರು 28
ಸರಿಗೆ ಸರಗಳು ನಾಗಮುರಿಗೆ ಕಟ್ಟಾಣಿ
ವರಮಾಲಕ್ಷುಮಿಯ ಸಿರಿಮುಡಿಗೆ ಮಲ್ಲಿಗೆಯ 29
ನಡುವಿನ್ವೊಡ್ಯಾಣ ಹೊಸ ಬಿಡಿಮುತ್ತಿನ ದಂಡೆ
ಮಡದಿ ಸಿರಿ ಪರಮಾತ್ಮನ ತೊಡೆಯಲ್ಲೊಪ್ಪಿರಲು 30
ಮಂದರೋದ್ಧರ ನೋಡುತ ಇಂದಿರೆ ಮುಖವ ಆ-
ನಂದ ಬಾಷ್ಪಗಳು ಕಣ್ಣಿಂದಲುದುರಿದವು 31
ರಂಗನ ಕಂಗಳ ಬಿಂದು ಮಾತ್ರದಲಿ
ಅಂಗನೆ ತುಳಸಿ ತಾನವತರಿಸಿದಳು32
ಪಚ್ಚದಂತ್ಹೊಳೆವೊ ಶ್ರೀ ತುಳಸಿ ದೇವಿಯರ
ಅಚ್ಚುತ ತನ್ನಂಕದಲ್ಲಿ ಧರಿಸಿದನು 33
ಮಂಗಳಾಷ್ಟಕ ಹೇಳುತ ಇಂದ್ರಾದಿ ಸುರರು
ರಂಗ ಲಕ್ಷುಮಿಗೆ ಲಗ್ನವ ಮಾಡಿಸಿದರು 34
ಅಂತರಿಕ್ಷದಿ ಭೇರಿನಾದ ಸುರತರುವು
ನಿಂತು ಕರೆದಿತು ದಿವ್ಯ ಸಂಪಿಗೆ ಮಳೆಯ 35
ಲಾಜಾಹೋಮವ ಮಾಡಿ ಭೂಮವನುಂಡು
ನಾಗಶಯನಗೆ ನಾಗೋಲಿ ಮಾಡಿದರು 36
ಸಿಂಧುರಾಜನ ರಾಣಿಗೆ ಸಿಂಧೂಪವನಿತ್ತು
ತಂಡುಲುಪ್ಪಿನಲಿ ಗಜ ಚೆಂದದಿ ಬರೆದು 37
ಎಲೆ ಸ್ತ್ರೀಯೆ ಎನ್ನಾನೆ ಎಣಿಕಿಲ್ಲದ್ಹಣವು
ಚೆಲುವೆ ನೀ ಬೇಕಾದರೆ ಹಿಡಿಯೆಂದನು ರಂಗ 38
ಅಚ್ಚುತ ಎನ್ನಾನೆ ಲೆಕ್ಕಿಲ್ಲದ್ಹಣವ ಕೊಟ್ಟರೆ
ಕೊಡುವೆನೆಂದಳು ಲಕ್ಷುಮಿ ನಗುತ 39
ಮುತ್ತು ಮಾಣಿಕ್ಯ ತುಂಬಿ ಮರದ ಬಾಗಿನವ
ಕೊಟ್ಟಳು ಸಿರಿ ತಾ ಋಷಿಪತ್ನೇರನೆ ಕರೆದು40
ಹವಳ ಮಾಣಿಕ್ಯ ತುಂಬಿ ಮರದ ಬಾಗಿನವ
ಹರದಿ ಕೊಟ್ಟಳು ತಾ ಋಷಿಪತ್ನೇರನೆ ಕರೆದು 41
ಕುಂದಣದ್ಹೊನ್ನಕೂಸಿನ ತೊಟ್ಟಿಲೊಳಿಟ್ಟು
ಕಂದನಾಡಿಸಿ ಜೋಜೋ ಎಂದು ಪಾಡಿದರು42
ಹರಬ್ರಹ್ಮರಿಗೆ ಆರೋಗಣೆ ಮಾಡಿಸಬೇಕು
ಸಿರಿ ನಿನ್ನ ಕೂಸಿನ ಕರಿ ಎಂದನು ರಂಗ 43
ಸುರದೇವತೆಗಳಿಗೆ ಸುಧೆ ಎರೆಯಬೇಕಿನ್ನು
ಹರಿ ನಿನ್ನ ಕೂಸನು ಕರಿ ಎಂದಳು ಲಕ್ಷ್ಮಿ 44
ಹೆಣ್ಣನೊಪ್ಪಿಸಿಕೊಟ್ಟು ಚಿನ್ನದಾರತಿಯ
ಕರ್ನೆ(ನ್ಯ?) ಸರಸ್ವತಿ ಭಾರತಿ ಬೆಳಗಿದರಾಗ 45
ಈರೇಳು ಲೋಕದೊಡೆಯನು ನೀನಾಗೆಂದು
ಬಹುಜನರ್ಹರಸ್ಯೆರೆದರು ಮಂತ್ರಾಕ್ಷತೆಯ 46
ಪೀತಾಂಬರಧಾರಿ ತನ್ನ ಪ್ರೀತ್ಯುಳ್ಳಜನಕೆ
ಮಾತುಳಾಂತಕ ಮಾಮನೆ ಪ್ರಸ್ತ ಮಾಡಿದನು 47
ಸಾಲು ಕುಡಿಎಲೆ ಹಾಕಿ ಮೇಲು ಮಂಡಿಗೆಯ
ಹಾಲು ಸಕ್ಕರೆ ಶಾಖ ಪಾಕ ಬಡಿಸಿದರು 48
ಎಣ್ಣೋರಿಗೆ ಫೇಣಿ ಪರಮಾನ್ನ ಶಾಲ್ಯಾನ್ನ
ಸಣ್ಣಶ್ಯಾವಿಗೆ ತುಪ್ಪವನ್ನು ಬಡಿಸಿದರು 49
ಏಕಾಪೋಶನ ಹಾಕಿದ ಶೀಕಾಂತಾಮೃತವ
ಆ ಕಾಲದಿ ಸುರರುಂಡು ತೃಪ್ತರಾಗಿಹರು 50
ಈ ಮಹಾ ಅಮೃತ ಮಥನವ ಕೇಳಿದ ಜನಕೆ
***