ರಾಗ - : ತಾಳ -
ನರಹರೆ ಪಾಹಿ ಮಾಂ ನರಹರೇ ll ಪ ll
ನರಹರೇ ನಮಿಪೆನಾ ನಿನಗೇ l ನಿನ್ನ l
ಚರಿತೆಯಾಶ್ಚರ್ಯ ಪೇಳ್ವರಿಗೇ l ಆಹ l
ತರಳ ಪ್ರಹ್ಲಾದನ್ನ ಪೊರೆದಹೋಬಲದಲ್ಲಿ l
ಮೆರೆವ ಮೂರುತಿ ಸಿರಿವರ ಕರುಣಾಕರ ll ಅ ಪ ll
ತಂದೆಯ ಮಾತು ಮೀರಿ l ನಿತ್ಯಾ l
ನಂದ ಭಜಕರುಪಕಾರಿ ಯೆಂದು l
ಕಂದ ನುಡಿದ ಬಾರಿ ಬಾರಿ ಸ್ತುತಿ l
ನಂದಾದಿ ಮಾಡ್ದ ವೈಖರಿ l ಆಹ l
ಮಂದಹಾಸದಲಿ ಆನಂದಮೂರುತಿ ಗೋ l
ವಿಂದ ಮುಕುಂದ ಎಂತೆಂದನು ಹರುಷದಿ ll 1 ll
ನುಡಿಕೇಳಾಲೊಲ್ಲ ಇವನೆಂದೂ l ಕರ l
ಪಿಡಿದೆಳದನು ಖಳ ಬಂದೂ l ಹೊಡಿ l
ಬಡಿಯೆನ್ನುತಲಿ ಹ್ಯೊ ಹ್ಯೊ ಎಂದೂ l ಹೇಳಿ l
ಮಿಡುಕುತ ದುರುಳನು ಬಂದೂ l ಆಹ l
ಮಡದಿ ಬೆಂಬಿಡದಲೆ ಅಡಿಗೆರಗಿದರೆನ್ನ l
ಕಡುಕೋಪದಿಂದ ಆರ್ಭಟಿಸುತ ಇರಲಾಗಿ ll 2 ll
ಬತ್ತೀಸಾಯುಧದಿ ಬಾಧಿಸಲು ಮೇಲ l
ಕ್ಕೆತ್ತಿ ಅಂತರಕೆ ಹಾರಿಸಲೂ l ಬೀಳ l
ಲೊತ್ತಿಕೊರಳ ಮತ್ತೆ ನೊಸಲೂ l ತನ್ನ l
ಹೆತ್ತಯ್ಯ ಪರನೆಂದೆನಿಸಲೂ l ಆಹ l
ಮತ್ತತನದಿ ನುಡಿದುತ್ತರ ಕೇಳದೆ l
ವತ್ತಿ ಶ್ರೀಹರಿಯೆ ಸರ್ವೋತ್ತಮನೆನಲಾಗಿ ll 3 ll
ಎಸೇಸು ಪರಿದಂಡಿಸಿದರೂ l ಜಗ l
ದೀಶ ಶ್ರೀಹರಿಗ್ಯಾರು ಎದುರೂ l
ಭಕ್ತ ಪೋಷಕ ಇವನಲ್ಲದಾರೂ l ಇಲ್ಲ l
ಲೇಸಾಗಿ ತಿಳಿದು ಬಯ್ಯದಿರೊ ll ಆಹ ll
ಈಶ ಅಹೀಶ ವಾಣೀಶಾದ್ಯರೆಲ್ಲರು l
ದಾಸಾನುದಾಸರು ಶ್ರೀಶಗೆಂದೆಂದಾನು ll 4 ll
ಎಲ್ಲಿಪ್ಪನೋ ನಿನ್ನ ದೈವಾ l ಯೆಂದು l
ಕಳ್ಳ ಕೇಳಲು ಏಕೋಭಾವಾ l ದಲ್ಲಿ l
ಪ್ರಹ್ಲಾದ ಭಕ್ತ ಸಂಜೀವಾ l ಪೇಳ್ದ l
ಸೊಲ್ಲೊಂದು ಖಳದುರುಳ ಭಾವಾ l ಆಹಾ l
ನಿಲ್ಲದವನ ಬಾಯಲ್ಲಿ ಶಸ್ತ್ರವನಿಕ್ಕಿ l
ಯಲ್ಲ ಪರಿಯ ಬಾಧೆಯಲ್ಲವ ಪಡಿಸಿದೆ ll 5 ll
ಕರ್ಣ ಕಠೋರ ಈ ವಾಕಾ l ಕೇಳಿ l
ಸ್ವರ್ಣ ಕಶಿಪು ಅನೇಕಾ l ಚಿಂ l
ತಾರ್ಣವದೊಳು ಸೇರಿ ಶೋಕಾ l ಬಟ್ಟು l
ನಿರ್ಣಯ ಕಾಣಾ ವಿವೇಕಾ l ಆಹ l
ತನ್ನೊಳು ತಾನೆ ಕಾದೆಣ್ಣೆ ಕುದಿವ ಪರಿ l
ಬನ್ನ ಬಡುತ ತರಳನ್ನ ನುಡೀಸಿದನು ll 6 ll
ನಿನ್ನ ವಡೆಯನಿಹ ಸ್ಥಳವಾ l ತೋರು l
ಮನ್ನಿಸು ಈ ಮಾತು ಛಲವಾ l ಬಿಟ್ಟು l
ಘನ್ನ ಘಾತಕನ್ನ ಕುಲವಾ l ಕೆಡಿ l
ಪನ್ಯಾಯಾವ್ಯಾಕೊ ಯೆಮ್ಮೊಳವಾ l ಆಹ l
ಚಿಣ್ಣನ ಪಿಡಿದು ಮತ್ತನ್ಯ ಚಿಂತೆಯ ಬಿಟ್ಟು l
ಪನ್ನಗಾಭರಣಾನ ಬೆನ್ನ ಬೀಳೆಲೊ ಎಂದ ll 7 ll
ಕಂದ ನುಡಿದ ಕಂಭದಲ್ಲೀ l ನಮ್ಮ l
ಇಂದಿರೇಶನು ಇಪ್ಪನಿಲ್ಲೀ l ಸುರ l
ವೃಂದ ವಂದಿತನು ಯೆಲ್ಲಿಲ್ಲಿ l ವ್ಯಾಪ್ತ l
ಸಂದೇಹವಿಲ್ಲಿದರಲ್ಲಿ l ಆಹ l
ಎಂದಡಾರ್ಭಟ ಖತಿಯಿಂದಲೊದೆಯೆ ಸ್ತಂಭ l
ದಿಂದ ಉದ್ಭವಿಸಿ ನೀ ಬಂದಿಯೊ ಕರುಣದಿ ll 8 ll
ಸರಸಿಜ ಜಾಂಡವು ನಡುಗೆ l ಬಂದ l
ಭರದಲ್ಯಸುರನ ಕೆವಡಿಗೆ l ಕರ l
ಏರಿಸಿ ಸೆಳೆದೆ ಭೂಮಿ ಅಡಿಗೇ l ಬಿರಿ l
ದೊರಸಿ ಬೀರುತಲಡಿಗೇ l ಆಹ l
ಕರದ ಕೂರುಗುರಿಂದ ಕರುಳ ಬಗೆದು ನಿನ್ನ l
ಕೊರಳಲ್ಲಿ ಧರಿಸಿದೆ ಪರಮೋದಾರದಲ್ಲಿ ll 9 ll
ಸೇರಿ ಅಜಭವ ಮುಖ್ಯ ಸುರಪಾ l ಮುಖ್ಯ l
ಸುರಸಿದ್ಧ ಮುನಿವಾಯು ಧನಪಾ l ಮಿಕ್ಕ l
ಪರಿವಾರ ಗಂಧರ್ವ ಕ್ಷಿತಿಪಾ l ಆಹಾ l
ಪರಿಯ ಚರಿಯ ಆಶ್ಚರ್ಯವೆನುತ ಪುಷ್ಪ l
ಸುರಿದು ಮೈಮರೆದಲ್ಲಿ ನೆರೆದು ನಿಂದಿರುವರು ll 10 ll
ಅಳುತೆಂದೀ ಭಕ್ತರ ಮೇಲೇ l ನಿನ l
ಗಳು ಕದಿಪ್ಪರುಧರೆ ಮ್ಯಾಲೇ l ಯೆನ l
ಗಳವಡಲಿಲ್ಲ ಈ ಲೀಲೇ l ಪೇಳ l
ಲಳವಲ್ಲವೋವ್ಯಾಳೆ ವ್ಯಾಳೇ ವ್ಯಾಳೇ l ಆಹ l
ಕುಳಿತು ಸಂತೋಷದಿ ಚೆಲುವ ಈ ಬಾಲನ್ನ l
ಸಲಹಿದೆ ಬಿರುದಾಂಕ ಶ್ರೀಪತಿವಿಟ್ಠಲ ll 11 ll
***