ಚಿಂತಾರಹಿತ ಮೂರ್ತಿ ಚಿನ್ಮಯಾತ್ಮಕ ರೂಪ
ಸಂತತದಿ ನೆನೆವವರ ಸಲಹೊ ಕರುಣಿ ಪ.
ಚಿಂತೆಯಲಿ ಜಗವೆಲ್ಲ ತಾ ತುಂಬಿ ಇರುತಿಹುದು
ಎಂತು ನಿನ್ನಾಟ ಪೇಳ್ ನಿಗಮವೇದ್ಯ
ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ
ಸಂತತದಿ ನಿನ ಧ್ಯಾನ ನೀಡೆಂಬೆನೊ 1
ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ
ದೇಶ ತಿರುಗುವನಿಗೆ ಹಣದ ಚಿಂತೆ
ದೇಶಸ್ಥನಾದವಗೆ ರಾಜಭಟರಾ ಚಿಂತೆ
ಕಾಶಿಯಲ್ಲಿರುವವಗೆ ಮನೆಯ ಚಿಂತೆ 2
ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ
ಚೋರನಿಗೆ ರವಿ ಮುಳುಗದಿರುವ ಚಿಂತೆ
ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ
ನಾರಿಗೆ ಪತಿ ಒಲುಮೆ ಪಡೆವ ಚಿಂತೆ 3
ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ
ಧರ್ಮಪುರುಷಗೆ ಕಲಿಬಾಧೆಯ ಚಿಂತೆ
ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ
ಹಾದಿ ನಡೆವಗೆ ದುಷ್ಟ ಜನರ ಚಿಂತೆ 4
ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ
ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ
ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ
ಮಾನವಂತರಿಗೂನ ನುಡಿಯ ಚಿಂತೆ 5
ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ
ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ
ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ
ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6
ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ
ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ
ಇಂತು ನಿನ ಪದವನಾನ್ಹಾರೈಸಿ ಬಂದರೂ
ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7
ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ
ಚರಣದಲಿ ತನುಮನ ಒಪ್ಪಿಸಿದರೂ
ಕರಗಲಿಲವು ಮನಸು ಕರುಣಪುಟ್ಟಲು ಕಾಣೆ
ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8
ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ
ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ
ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು
ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9
ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ
ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ
ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ
ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10
ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ
ಹರಿದಾಸ ಸಂತತಿಗೆ ಮನೆದೈವ ನಿಜವಾಗೆ
ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ
ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11
ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ
ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ
ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ
ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
****