ರಾಗ: ಮೋಹನ ತಾಳ: ಆದಿ
ಕರೆದು ಕೈ ಪಿಡಿಯೊ ಎನ್ನಾ ಶ್ರೀ ರಾಘವೇಂದ್ರ
ಗುರುವೇ ಕರುಣಾಸಂಪನ್ನ ಪ
ಗುರುವೆ ನಿಮ್ಮಯ ಚರಣಕಮಲಕೆ
ಶರಣು ಹೊಕ್ಕೆನೊ ಅರೆಮರಿಲ್ಲದೆ
ಸುರತರುವೆ ನಿರುತದಲಿ ಎನ್ನನು
ಪೊರೆಯೊ ಬಾರಿಂದೆರೆವುಮಾಡದೆ ಅ.ಪ
ಘೋರ ಸಂಸಾರವೆಂಬ ವಾರಿಧಿಯೊಳು
ಮೇರೆಗಾಣದಲಿಹೆನೋ
ಆರು ವರ್ಗಗಳೆಂಬ ವಾರಿಚರ ಮಕ-
ಮಾರಿಬಾಧೆಗೆ ಎದೆ ಆರೀ ಬಿದ್ದೆನಿಂದು
ದಾರಿ ನೋಡುವರಿಲ್ಲವೋ ಈ ಸಮಯದಿ
ದೂರ ನೋಡುವುದಲ್ಲವೋ ನಿನ್ಹೊರತು ಆ-
ಧಾರ ಒಬ್ಬರ ಕಾಣೆವೋ ನೀನೇ ದೀನೋ-
ದ್ಧಾರನೆಂಬುದ ಬಲ್ಲೆವೊ
ಧೀರಯತಿ ಪರೋದ್ಧಾರ ಭಯಹರ
ಸಾರಿದವರಿಗಪಾರಸುಖಕರ
ಸೇರಿದೆನೊ ಪರಿಚಾರಿಗನು
ಸಾರಿ ಎನ್ನನು ಬಾರಿಬಾರಿಗೆ 1
ಕಂಡಕಂಡವರ ಬಳಿಗೆ ಥಂಡಥಂಡದಿ ಹೋಗಿ
ದಿಂಡುತಿರುಗೀತೀ ದೇಹಾ
ಸಂಡಿಗ್ಹಾಯಿತೋ ಬೇಡಿಕೊಂಡೆ ಕೋಡಗನಂತೆ
ದಂಡವಾಯಿತೊ ಮಾನ ಅಂಡಲಿವೆನೊ ಈಗ
ಭಂಡುಮಾಡುವುದುಚಿತವೇ ದಾಸನ ದೋಷ
ಖಂಡ್ರಿಸದಿದು ಥರವೇ ಹೀನನ ಲಜ್ಜಾ
ಕಂಡುಬಿಡುವುದುಚಿತವೇ ನಾನೊಬ್ಬ ಭೂ-
ಮಂಡಲದೊಳಗಿರುವೆ
ಮಂಡಲಾಧಿಪ ಪಂಡಿತೋತ್ತಮ
ಚಂಡಖಳಕೃತ ಷಂಡತಮತಮಾ-
ರ್ತಾಂಡನೆ ಮುನಿವರೋದ್ದಂಡ ಸಜ್ಜನ
ಪಂಡಿತನೆ ನಾನುದ್ದಂಡ ನಮಿಸುವೆ 2
ಬಂದು ನಿನ್ನಯ ಪಾದವಾ ಹರುಷದಿಂದ
ವಂದಿಸುವಾ ಜನರ
ಮಂದಾರತರುವಂತೆ ಛಂದಛಂದದಿ ಮನ
ಬಂದಾವರನೆಲ್ಲ ಸಂದೇಹವಿಲ್ಲದೆ
ತಂದು ಕೊಡುವೆ ಬಿಡದೆ ಅವರ ದೋಷ
ಒಂದನೂ ನೀ ನೋಡದೆ ಅವರಂತ ನೋ-
ಡಿಂದೆನ್ನನು ಬಿಡದೆ ಎನ್ನ ತಾಯಿ
ತಂದೆಗಧಿಕ ನೋಡಿದೆ
ಇಂದಿರಾಮನಮಂದಿರಾ ಶ್ರೀಶ
ಸುಂದರಾ ರಾಮಚಂದ್ರವಿಠ-
ಲೇಂದೀವರ ಪದವೃಂದಸೇವಾ-
ನಂದಪೂರಿತ ಬಂದು ಮುಂದಕೆ 3
****