ಶ್ರೀನಿವಾಸ ಸ್ಥಿರವಾರದೊಡೆಯ ಹರಿಯೆ ನಂಬಿದೆ
ಪೊರೆ ದೊರೆಯೆ ಪ.
ಭಾನು ಪ್ರಕಾಶ ಪದ್ಮವತಿಗೆ ಪ್ರಿಯ ತಿಳಿಯೆನೊ
ನಿನ್ನ ಮಾಯ ಅ.ಪ.
ಎಷ್ಟು ಛಲವೋ ಎನ್ನಿಂದಲಿ ಸೇವೆಯನು ಕೈಕೊಳ್ಳು ಇನ್ನು
ಶ್ರೇಷ್ಠರಾದ ಶ್ರೀ ಗುರುಗಳ ಆಜ್ಞೆಯಲಿ ಬಂಧಿಸಿ ಎನ್ನಿಲ್ಲಿ
ದಿಟ್ಟತನದಿ ಕೈಕೊಂಡೆಯೊ ಧ್ಯಾನವನು
ಮಹ ಮಹಿಮನೊ ನೀನು
ಗುಟ್ಟು ಪೇಳಲು ಎನ್ನಿಂದಲಿ ಅಳವೇ ನಿತ್ಯದಿ ನಿನ್ನ ನೆನವೆ 1
ನಾನಾ ರೂಪ ಧ್ಯಾನದಲಿ ಬಂದ್ಯೊ ಎನ್ನಲಿ ನಿಂದ್ಯೊ
ಮಾನವ ಜನ್ಮ ಸಾರ್ಥಕವೆನಿಸಿದ್ಯೊ ಶ್ರೀ ಗುರುದಯ ನೀಡ್ದ್ಯೊ
ಏನು ಹೇಳಲೋ ನಿನ್ನಯ ಮಹ ಚರಿತೆ
ನಿನ್ನ ಪಾದದಲಿ ಮಮತೆ
ಸಾನುರಾಗದಿ ಕೊಟ್ಟು ಎನ್ನ ಸಲಹೊ ಬಿಡೆನು ನಿನ್ನೆಲವೊ 2
ಮಚ್ಛಕೂರ್ಮ ಹರಿ ಸ್ವಚ್ಛ ವರಹರೂಪ ನರಹರಿ ಪ್ರತಾಪ
ಸ್ವಚ್ಛಮನದಲಿಹ ಬಲಿಯನೆ ಬಂಧಿಸಿದ್ಯೊ ರಾಜರ ಮರ್ಧಿಸಿದ್ಯೊ
ಅಚ್ಚ ಜೀವೋತ್ತಮಗಜನ ಪದವನಿತ್ಯೊ ಗೋಪಿಗೆ ಮುದವಿತ್ಯೊ
ಬಿಚ್ಚಿ ವಸನವ ಹಯವನೇರಿದ್ಯಲ್ಲಾ ಗೋಪಾಲಕೃಷ್ಣವಿಠಲಾ 3
****