Showing posts with label ದೇವ ನೀನುಪಕಾರ ಅಪಾರ ಮಾಡಿದೆ ಕಾವ ಕರುಣಾ ಸ್ವಭಾವ ಕೇಳು ಪೇಳುವೆ vasudeva vittala. Show all posts
Showing posts with label ದೇವ ನೀನುಪಕಾರ ಅಪಾರ ಮಾಡಿದೆ ಕಾವ ಕರುಣಾ ಸ್ವಭಾವ ಕೇಳು ಪೇಳುವೆ vasudeva vittala. Show all posts

Friday, 3 September 2021

ದೇವ ನೀನುಪಕಾರ ಅಪಾರ ಮಾಡಿದೆ ಕಾವ ಕರುಣಾ ಸ್ವಭಾವ ಕೇಳು ಪೇಳುವೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ದೇವ ನೀನುಪಕಾರ ಅಪಾರ ಮಾಡಿದೆ

ಕಾವ ಕರುಣಾ ಸ್ವಭಾವ ಕೇಳು ಪೇಳುವೆ ಪ


ನವಯುವತಿ ಶಿಲೆ ಕೊರಳಿಗೆ ಕಟ್ಟಿಕೊಂಡು

ಭವ ಸಾಗರದೊಳು ಮುಳುಗಿ ಪೋಗುವ ನಾ

ಅವಸರಕೊದಗಿ ಪಿಡಿದು ದಡ ಸೇರಿಸಿ

ದವನಾಗಿ ಎಚ್ಚರಿಕೆ ತಂದಿತ್ತೆ ದಯಾಳೊ 1


ಭಾರ ತಾಳದು ಎಂದು ಸೂತ್ರವೂ ಶಿಖಿಯೊ ನಿ

ವಾರಿಸಿ ತನುವಿಗೆ ಲಘುವು ಮಾಡಿದೇಯೆ

ಭಾರಮಯತಾ ರಜ್ಜು ಮನಕೆ ಸುತ್ತಿದೆ ಆಶಾಂ-

ಕುರ ಕೇಶಗಳು ಬೆಳದಿವೆ ಪರಿಹರಿಸು 2


ಲಕ್ಷ್ಯವಿಲ್ಲದೆ ಅನ್ನ ಮೊದಲಾಗಿ ಕೊಡುವಂಗೆ

ಶಿಕ್ಷಿಸಿ ಗರ್ವವು ಕಳೆದು ಈಗ

ಭಿಕ್ಷುಕನ ಮಾಡಿದೆ ನಿನ್ನದೆ ಬೇಡುವೆ

ಲಕ್ಷ್ಮೀಪತಿಯೆ ಅಂತರಂಗದ ಗೃಹಸ್ಥ 3


ಏಳು ಮನೆಗಳನ್ನು ಕೇಳೋದು ಯತಿಧರ್ಮ

ಏಳಲಾರಿನೊ ವೃದ್ಧ ಕೇಳಲಾರೆ

ಕೇಳುವೆ ನಿನ್ನನೇ ಏಳು ಭಿಕ್ಷವ ನೀಡು

ಬಾಳುವೆ ಬಹುಕಾಲ ನಿನ್ನ ಕೊಂಡಾಡುತ 4


ಶ್ರೋತ್ರಕ್ಕೆ ನಿನ್ನ ಕಥೆ ನಾಸಕೆ ನಿನ್ನ ಗಂಧ

ನೇತ್ರಕ್ಕೆ ನಿನ್ನ ರೂಪ ರಸನಿಗೆ ನಾಮಾಮೃತ

ಗಾತ್ರಕ್ಕೆ ನಿನ್ನ ಪಾದಸ್ಪರುಷ ಮನೋಬುದ್ಧಿ

ಮಾತ್ರಕ್ಕೆ ಗುಣಕರ್ಮ ಕೊಡು ವಾಸುದೇವವಿಠಲ5

***