ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ
ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ ಒಡಗೂಡಲದು ಮಕ್ಕಳಾಗುವಾಶಾ ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ 1
ಅನ್ನವಾಗಲು ವಸ್ತ್ರ ಅಲಂಕಾರದಾಶಾ ಇನ್ನು ಮಕ್ಕಳ ಮುಂಜಿ ಮದುವಿಯಾಶಾ ತನ್ನ ನೆಂಟರಸರಿಯಾ ಮಾಡುವದಾಶಾ ಪನ್ನಗಾಶನವಾಹನಾಶೆಗೇ ಮನವಿಲ್ಲ 2
ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ ಅಡರಲು ರಥದಿಂದ ಆಂದಣಾಶಾ ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ 3
ಒಂದೊದಗಲು ಮತ್ತೆ ಒಂದು ಬಯಸುದಾಶಾ ಎಂದಿಗೇ ಸರಿಯದು ವಿಷಯದಾಶಾ ಕುಂದಿದ ತನುವಿನ ಬಲವಾಗುವದಾಶಾ ಇಂದಿರೇಶನ ಆಶೆಗೆನ್ನ ಮನವಿಲ್ಲ 4
ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ ದಾಸರಾ ಸಂಗ ಮನವ ತಿದ್ದೀ ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ 5
***