ಮಧ್ವವತಾರ ಸುಳಾದಿ ಶ್ರೀ ವಿಜಯದಾಸರ ರಚನೆ
ರಾಗ: ಕಾಂಬೋಧಿ
SRI GURUVINANGHRIYA
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಮಧ್ವಾವತಾರ ಸ್ತೋತ್ರ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಶ್ರೀಗುರುವಿನಂಘ್ರಿಯ ಯೋಗದಿಂದಲಿ ತಿಳಿದು
ಬಾಗಿ ನಮೋ ಎಂದು ಬಾಗಿಸುವೆ
ಭಾಗವತರ ಮಣಿ ಆಗಮ ವಿಖ್ಯಾತ
ನಾಗಾರಿ ನಾಗ ಪನ್ನಗಾಭರಣಾದಿಗಳಿಗೆ ಜ್ಞಾನ -
ವಾಗಲಿಸಿದ ತತ್ವಸಾಗರ ಶುಭಚಂದ್ರ
ಯೋಗಿಗಳರಸ ರಾಗದ್ವೇಷದೂರ
ರಾಘವನ ಕಿಂಕರ, ಮಾಗಧನ ಸಂಹಾರ ಭಾಗಿರಥಿ ಪಾರ ಸಾಗರಶಯನ ಮಹಾಭಾಗ ವಿಜಯವಿಟ್ಠಲನ್ನ
ಭೋಗದಲ್ಲಿಟ್ಟ ಭಾವಿ ವಾಗೀಶನು ಪವನ ॥ 1 ॥
ಮಟ್ಟತಾಳ
ಕುಸುಮವ ತರಪೋಗಿ ಅಸಮ ಸಹಸ ಭೀಮ
ಅಸುರ ಮಣಿಮಾನನ ಮರ್ಧಿಸಲಾ ಹಗೆಯಲ್ಲಿ
ವಸುಧೆಯೊಳಗೆ ಜನಿಸಿ ಸಂಕರನೆಂದು
ಪೆಸರಾದ ದುರುಳನು ಕುಶಲಮತಿಗಳೆಲ್ಲ
ಹಸಗೆಡಿಸಿದನಂದು ವಸುಧೆಯೊಳಗೆ ಬಂದು
ವೃಷಾಹೀ ನಾಮ ವಿಜಯವಿಟ್ಠಲನ್ನ
ಬಿಸಜಪದಕೆ ಬಲು ದ್ವಿಷಗನು ತಾನಾಗಿ ॥ 2 ॥
ರೂಪಕತಾಳ
ಮಿಥ್ಯಾಮಾಯಿ ದುರಮಿಥ್ಯಾ ಶಾಸ್ತ್ರವ ಮಾಡಿ
ಸತ್ಯಾಚಾರವ ಕಳೆದಸತ್ಯದಲ್ಲೀ
ನಿತ್ಯ ಪರಮಾತ್ಮಗೆ ನಿತ್ಯ ದುಃಖವನೆ
ಅತ್ಯಂತ ಅಭೇದಾರ್ಥ ಪೇಳಲು
ಭೃತ್ಯ ತನ್ನೊಡಿಯನ ಹತ್ಯ ಮಾಡಿದಂತೆ
ಮೃತ್ಯುವಿಗೆ ಎಡೆಯಾಗಿ ನಿತ್ಯ ಬಾಳುವನು
ಸತ್ಯಧರ್ಮ ನಾಮ ವಿಜಯವಿಟ್ಠಲನ್ನ
ಸ್ತೌತ್ಯ ಮಾಡದಲೆ ಅಕೃತ್ಯನಾಗುವನು ॥ 2 ॥
ಝಂಪೆತಾಳ
ಪಾಖಂಡಿ ಸಂಕರನು ಏಕಮೇವನು ತಾನೇ
ಲೋಕಕ್ಕೆ ಸೋऽಹಂ ಎಂದು ಸಂಚರಿಸೆ
ಪಾಕಶಾಸನಾದಿಗೆ ಕೊಡುವ ಆಹುತಿ
ಹಾಕಿ ತಾನೆ ಮರಳಿ ಭುಂಜಿಸಲು
ನಾಕಾದಿ ಜನರು ಬಲು ವ್ಯಾಕುಲದಲಿ ಪೋಗಿ
ಆ ಕಮಲಾಸನಗೆ ಬಿನ್ನೈಸಲು
ವಾಕು ಕೇಳುತಲೆ ಶ್ರೀವೈಕುಂಠವಾಸಗೆ
ಲೋಕೇಶ ವಿವರಿಸಲು ಕರುಣದಿಂದಾ -.
ನೇಕ ನಾಮ ನಮ್ಮ ವಿಜಯವಿಟ್ಠಲನು ಕೃ -
ಪಾಕರನಾಗಿ ಪವನಗೆ ನಿರೂಪಿಸಿದಾ ॥ 4 ॥
ತ್ರಿವಿಡಿತಾಳ
ವಸುಧಿಯೊಳಗೆ ಜನಿಸಿ ವಾಸುದೇವನೆಂಬ
ಪೆಸರಲಿ ಮೆರೆದು ರಕ್ಕಸ ಸಂಕರನ ಮುರಿದು
ದಶ ಪ್ರಕರಣ ಸೂತ್ರ ವ್ಯಾಖ್ಯಾನ ದಶ ಉಪ -
ನಿಷದ್ಭಾಷ್ಯ ಗೀತಾತ್ರಯತಾತ್ಪರ್ಯ
ಎಸೆವ ಯಮಕಭಾರತ ಸದಾಚಾರ ಸ್ಮೃತಿ ದ್ವಾ -
ದಶಸ್ತೋತ್ರ ಕೃಷ್ಣಾಮೃತಮಹಾರ್ಣವ ಮೇಣು
ಅಸಮ ತಂತ್ರಸಾರ ಜಯಂತಿನಿರ್ಣಯ
ಹಸನಾಗಿ ಯತಿಚಲ್ಪ ನರಸಿಂಹ ಸ್ತುತಿ ಇನಿತು
ರಸಪೂರಿತವಾಗಿ ಪಸರಿಸಿದವು ತ್ರಿ -
ದಶ ಮೇಲೆ ಏಳು ರಂಜಿಸುವ ಸುಧಾಕಥಾ
ಪ್ರಸರವಾಗರದು ತಾಮಸಜ್ಞಾನ ಪರಿದು ಕಿ -
ಮಸನೆ ನಾಮ ವಿಜಯವಿಟ್ಠಲನ್ನ ನೆನೆದು ॥ 5 ॥
ಅಟ್ಟತಾಳ
ದುರುಳ ಸಂಕರನ ಉತ್ತರವನ್ನು ಖಂಡಿಸಿ
ಪರಮಾತ್ಮ ಅಖಿಳ ಜೀವರಿಗೆ ಭಿನ್ನನೆಂದು
ಬಿರಿದು ಡಂಗುರ ಹೊಯಿಸಿ ಧರೆಯೊಳು ಮೆರದು ಶ್ರೀ -
ಹರಿಯಲ್ಲದನ್ಯತ್ರ ಪರದೈವವಿಲ್ಲೆಂದು
ದರುಶನ ಗ್ರಂಥ ಶಿಷ್ಯರಿಗೆ ಬೋಧಿಸಿ ವೀರ -
ವರ ವೈಷ್ಣವರನ ಉದ್ಧರಿಸಿದ ಭಾರತಿ -
ಯರಸ ಜಗದ್ಗುರು ಧರೆಯರಸ ಗದಾ -
ಧರ ವಿಜಯವಿಟ್ಠಲನ್ನ ಚರಣ ವಿನುತನೆ ॥ 6 ॥
ಆದಿತಾಳ
ಗುರುಮುಖವಿಲ್ಲದಲೆ ದೊರಿಯದು ಜ್ಞಾನಮಾರ್ಗ
ಅರಿದು ಸುಜನರೆಲ್ಲ ಮರುದಂಶ ಯತಿವರನ
ಮರಿಯದಲನುಸರಿಸಿ ದುರುಳ ಮಾರ್ಗವ ತೊರೆದು
ಸುರಳಿತರಾದ ವೈಷ್ಣವರ ಚರಣ ಮೊರೆ ಹೋಗೆ
ಕರುಣಿಸುವ ಮಹಧನ ವಿಜಯವಿಟ್ಠಲ ಬಿಡದೆ
ಸರಿಯಿಲ್ಲ ಮಧ್ವಮತ ಶರಧಿಯಲ್ಲಿದ್ದವನಿಗೆ ॥ 7 ॥
ಜತೆ
ಅದ್ವೈತವನದಾವ ಮಧ್ವರಾಯನ ಶ್ರೀಪಾ -
ದದ್ವಯ ನೆನೆದು ವಿಜಯವಿಟ್ಠಲನ್ನ ಸೇರೊ ॥
********
ಲಘುಟಿಪ್ಪಣಿ :
ಹರಿದಾಸರತ್ನಂ ಶ್ರೀಗೋಪಾಲದಾಸರು
ಧ್ರುವತಾಳದ ನುಡಿ :
ಯೋಗದಿಂದಲಿ = ಧ್ಯಾನದಿಂದಲಿ ;
ಬಾಗಿಸುವೆ = ಶರೀರ ಹಾಗೂ ಮನಸ್ಸನ್ನು ಒಪ್ಪಿಸುವೆ ;
ಭೋಗ = ಶರೀರ ;
ಮಟ್ಟತಾಳದ ನುಡಿ :
ದ್ವಿಷಗನು = ದ್ವೇಷ ಮಾಡುವವ ;
ಮಹಾಭಾಗ = (ವಿ ಸ ನಾ 371) ಮಹತ್ವ ಪೂರ್ಣಗಳಾದ ಸ್ವರೂಪಾಂಶ ಉಳ್ಳವನು ;
ವೃಷಾಹೀ = ( ವಿ ಸ ನಾ 256) ಧರ್ಮದ ಜ್ಞಾನವನ್ನು ಅತಿಶಯವಾಗಿ ನಿತ್ಯವೂ ಹೊಂದಿರುವವನು ;
ರೂಪಕತಾಳದ ನುಡಿ :
ಎಡೆಯಾಗಿ = ಆಹಾರವಾಗಿ ;
ಸ್ತೌತ್ಯ = ಸ್ತುತಿ ;
ಝಂಪೆತಾಳ ನುಡಿ :
ಪಾಖಂಡಿ = ವೇದೋಕ್ತ ಧರ್ಮಗಳನ್ನು ಖಂಡಿಸುವವನು ;
ಸತ್ಯಧರ್ಮ = (ವಿ ಸ ನಾ 529) ಸತ್ಯವಾದ ಜಗತ್ತನ್ನು , ಶ್ರೀವಾಯುದೇವನನ್ನು ಧರಿಸಿರುವವನು ;
ನೇಕ = (ವಿ ಸ ನಾ 725) ಸ್ವರೂಪಾತ್ಮಗಳಾದ ಅನಂತಗುಣ ರೂಪ - ಕ್ರಿಯೆ - ಅವಯವಗಳುಳ್ಳವನು ;
ಅಟ್ಟತಾಳದ ನುಡಿ :
ಉತ್ತರ = ಮತ, ಅಭಿಪ್ರಾಯ ;
ಆದಿತಾಳದ ನುಡಿ :
ಸುರಳಿತರಾದ = ವಿನಯಗುಣ ಸಂಪನ್ನರಾದ ಜ್ಞಾನಿಗಳು ;
ಜತೆ ನುಡಿ :
ಅದ್ವೈತವನದಾವ = ಜೀವೇಶ್ವರ ಐಕ್ಯವನ್ನು ಪ್ರತಿಪಾದಿಸುವ - ಅದ್ವೈತವೆಂಬ ಕಾಡಿಗೆ ಕಾಡ್ಗಿಚ್ಚಿನಂತಿರುವ ;
ಗದಾಧರಃ = (ವಿ ಸ ನಾ 997) ಕೌಮೋದಕೀ ಎಂಬ ಗದೆಯನ್ನು ಧರಿಸಿರುವವನು ;
ಮಹಧನ = (ವಿ ಸ ನಾ 3, 434) ಉತ್ತಮವಾದ ಸಂಪತ್ತು ಉಳ್ಳವನು ;
ಮಧ್ವ = 'ಮಧು' ಎಂದರೆ ಆನಂದಕರವೆಂದು ಅರ್ಥವು, 'ವ' ಎಂದರೆ ಜ್ಞಾನಕರವಾದ ಶಾಸ್ತ್ರವೆಂದು ಹೇಳಲ್ಪಟ್ಟಿದೆ. ಹೀಗಾಗಿ 'ಮಧ್ವ' ಎಂದರೆ ಆನಂದಕರವಾದ ಶಾಸ್ತ್ರ ಪ್ರಣೀತರೆಂದು ಅರ್ಥ.