Showing posts with label ಒಂಬತ್ತು ಹೂವಿಗೆ ಒಂದೇ ನಾಳವು neleyadikeshava ಮುಂಡಿಗೆ OMBATTU HOOVIGE ONDE NAALAVU MUNDIGE. Show all posts
Showing posts with label ಒಂಬತ್ತು ಹೂವಿಗೆ ಒಂದೇ ನಾಳವು neleyadikeshava ಮುಂಡಿಗೆ OMBATTU HOOVIGE ONDE NAALAVU MUNDIGE. Show all posts

Wednesday, 15 December 2021

ಒಂಬತ್ತು ಹೂವಿಗೆ ಒಂದೇ ನಾಳವು ankita neleyadikeshava ಮುಂಡಿಗೆ OMBATTU HOOVIGE ONDE NAALAVU MUNDIGE


ಮುಂಡಿಗೆ by ಕನಕದಾಸರು

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||ಪ||
ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ ||ಅ.ಪ||

ಕದರು ಗಾತರ ಕಂಬ ತೆಕ್ಕೆ ಗಾತರ ಹೂವು ಚಂದಮಾಮ|
ಆನೆ ಗಾತರ ಕಾಯಿ ಒಂಟೆ ಗಾತರ ಹಣ್ಣು ಚಂದಮಾಮ ||೧||

ಕಾಲಿಲ್ಲದಾತನು ಹತ್ತಿದನಾ ಮರವನು ಚಂದಮಾಮ|
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||೨||

ನೆತ್ತಿಲ್ಲದಾತನು ಹೊತ್ತನಾ ಹಣ್ಣ ಚಂದಮಾಮ|
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ||೩||

ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ|
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||೪||

ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ|
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||೫||

ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ|
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ ||೬||

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ|
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ||೭||

ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ|
ಮೂಢನಾದವನೇನು ಬಲ್ಲನು ಈ ಮಾತ ಚಂದಮಾಮ||೮||

ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ|
ತಿಳಿದವರು ಪೇಳಿರಿ ಹಳೆಗನ್ನಡವ ಚಂದಮಾಮ ||೯||
***

(raga: nadanamakriya)
ombattu huvige onde nalavu chandamama ||pa||
tumbi nalatudi tumbi bhanu prabhe chandamama ||anupa||

kadaru gatra kamba tekkegatra huvu chandamama
anegatara kayi omtegatara hannu chandamama ||1||

(raga: kedara)
kalilladatanu hattidanu maravanu chandamama
kaiyilladatanu koyvana hannanu chandamama ||2||

nettilladatanu hottana hanna chandamama
talavillada gudeyalilisidana hanna chandamama ||3||

(raga: simdhubhairavi)
marga tappi marga hididu nadedaru chandamama
saddillada santelilisidara hanna chandamama ||4||

rokkavilladata komdana hanna chandamama
mugilladata musidana hanna chandamama ||5||

(raga: jamjuti)
kannilladatanu kempane hannenda chandamama
amgulilladata nungidana hanna chandamama ||6||

bayilladata tindu basiralimbitta chandamama
sulabha padavidu nalinajandadolu chandamama ||7||

(raga: punnagavarali)
guruvina mahimeya guruve ta ballanu chandamama
mudhanadavanenu ballanu I matu chandamama ||8||

kanakanadida guttu Adi keshava balla chandamama
tilidavaru peliri halegannadava chandamama ||9||
***

ಭಾವಾರ್ಥ:- ಜೀವಾತ್ಮ ನವವಿಧ ಭಕ್ತಿಯ ಮುಖಾಂತರ ಪರಮಾತ್ಮನ ಅನುಗ್ರಹಕ್ಕೆ ಪಾತ್ರವಾಗಿ ಒಂದಾದುದು ಈ ಮುಂಡಿಗೆಯ ವಸ್ತು.
ಅರ್ಥ:- ಒಂಬತ್ತು ಹೂವು = ನವವಿಧ ಭಕ್ತಿ
ಚರಣ ೧:- ಕಡ್ಡಿ ಗಾತ್ರದ ಗಿಡದಲ್ಲಿ (ನಮ್ಮ ಪುಟ್ಟ ಹೃದಯದಲ್ಲಿ) ಭಕ್ತಿಯ ತೀವ್ರತೆಯಿಂದಾಗಿ ಹೂವು, ಕಾಯಿ, ಹಣ್ಣು ವಿಸ್ತಾರಗೊಂಡದ್ದನ್ನು ಸೂಚಿಸುತ್ತದೆ.
ಚರಣ ೨:- ಮನೋ ಮಾರ್ಗದಿಂದ ಬೆಳೆದ ಆ ಭಕ್ತಿವೃಕ್ಷವನ್ನು ಹತ್ತಲು ಆತ್ಮನಿಗೆ ಕಾಲಿಲ್ಲ ಕೊಯ್ಯಲು ಕೈಯಿಲ್ಲ. ಆದರೂ ಆ ಮರವ ಹತ್ತಿ ಹಣ್ಣನ್ನು ಕೊಯ್ದನಾ ಪರಮಾತ್ಮನು.
ಚರಣ ೩:- ನೆತ್ತಿಯಿಲ್ಲದ ಚಿತ್ತ ಅದನ್ನು ಹೊತ್ತುಕೊಂಡು ತಳವಿಲ್ಲದ ಬ್ರಹ್ಮಸ್ಥಾನದ ಬುಟ್ಟಿಯಲ್ಲಿಟ್ಟನು.
ಚರಣ ೪:- ಬಾಹ್ಯ ಜಗತ್ತಿನ ಪ್ರವೃತ್ತಿ ಮಾರ್ಗವನ್ನು ಬಿಟ್ಟು ಅಂತರ ಜಗತ್ತಿನ ದೈವೀ ಮಾರ್ಗವನ್ನು ಹಿಡಿದು ನಿಶ್ಶಬ್ದವಾದ ಸಂತೆಯಲ್ಲಿ (ಪರಮಾತ್ಮನ ಸಾನ್ನಿಧ್ಯ) ಇಳಿಸಿದ.
ಚರಣ೫:-ಪ್ರಾಪಂಚಿಕ ನಾಣ್ಯವಿಲ್ಲದ ಪರಮಾತ್ಮ ಅದನ್ನು ಕೊಂಡನು. ಮೂಗಿಲ್ಲದಾತನು (ವಾಸನಾರಹಿತನಾದ ಪರಮಾತ್ಮ) ಅದನ್ನು ಮೂಸಿ ನೋಡಿದನು.
ಚರಣ ೬:- ಪ್ರಾಕೃತ ಕಣ್ಣಿಲ್ಲದಿದ್ದರೂ ಅಪ್ರಾಕೃತ ಕಣ್ಣಿನಿಂದ ಅದನ್ನು ನೋಡಿ ಕೆಂಪಾದ ಹಣ್ಣು ಪಕ್ವವಾಗಿದೆ ಎಂದನು. ಪ್ರಾಕೃತ ಅಂಗುಳಿಲ್ಲದಿದ್ದರೂ ಅಪ್ರಾಕೃತ ಅಂಗುಳಿನಿಂದ ಅದನ್ನು ನುಂಗಿದನು.
ಚರಣ ೭:- ಬಾಯಿಲ್ಲದಾತ ಅದನ್ನು ತನ್ನ ಹೊಟ್ಟೆಯ ಒಳಗಿಟ್ಟು ಇಂಬುಗೊಟ್ಟ.
ಚರಣ ೮:- ಒಬ್ಬರ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ವ್ಯಕ್ತಿಯಲ್ಲೂ ಯೋಗ್ಯತೆ ಇರಬೇಕು. ಯೋಗ್ಯನ ಯೋಗ್ಯತೆಯನ್ನು ಅಯೋಗ್ಯ ಗುರುತಿಸಲಾರ.
ಚರಣ೯:- ಕನಕನ ಮಾತಿನರ್ಥವನ್ನು ಆದಿಕೇಶವ ಬಲ್ಲ. ತಿಳಿದವರು ಬಿಡಿಸಿರಿ ಈ ಒಗಟನ್ನು ಎನ್ನುತ್ತಾರೆ ಕನಕದಾಸರು. ಹಳೆಗನ್ನಡ = ಒಗಟು, ಮುಂಡಿಗೆ.
(ಹಿಂದೆ ಒಂದು ವಚನದಲ್ಲಿ ಒಗಟು ಎಂಬ ಅರ್ಥದಲ್ಲಿ ‘ಕನ್ನಡ’ ಎಂಬ ಪದ ಬಳಕೆಯಾಗಿದೆ: “ಅನು ನೀನೆಂಬ ಕನ್ನಡ ಕಳೆಯಿತ್ತು”)
*********


ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||pa||

ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ||a||

ಕದರು ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ ||1||

ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||2||

ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ ||3||

ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ|
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||4||

ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||5||

ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ \|6||

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ||7||

ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ ||8||

ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ
ತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ ||9||
***

ಶ್ರೀ ಕನಕದಾಸಾರ್ಯರ ಮುಂಡಿಗೆ by -ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ



ಅರ್ಥ ವಿವರಣೆಯ ಅಲ್ಪ ಪ್ರಯತ್ನ ಶ್ರೀ ಹರಿವಾಯುಗುರುಗಳ ಅನುಗ್ರದಿಂದ ಮಾತ್ರ.....

👇🏽👇🏽👇🏽👇🏽👇🏽👇🏽 

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮಾ
ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮಾ 

       ನವದ್ವಾರಂ ದ್ವಿಹಸ್ತಾಂಘ್ರಿಂಪುರಂಮನುತ ಸ್ವಾದಿತಿ /
       ಅಕ್ಷಿಣಿ ನಾಸಿಕೇ ಆಸ್ಯಮಿತಿ ಪಂಚಪುರಸ್ಕ್ಯತಾಃ //
       ದಕ್ಷಿಣಾದಕ್ಷಿಣಃ ಕರ್ಣಃ ಉತ್ತರಾಜೋತ್ತರಃಸ್ಮ್ಯತಃ/
       ಪಶ್ಚಿಮೇ ಇತ್ಯಧೌದ್ವಾರೌಗುದಶಿಶ್ನಾವಿಹೋದಿತಿ //
ಎನ್ನುವ ಶ್ರೀಮದ್ಭಾಗವತದ ಚತುರ್ಥಸ್ಕಂಧದ 29 ನೆಯ ಅಧ್ಯಾಯದಲ್ಲಿ ತಿಳಿಸಿದಂತೆ ಈ ಮಾನವ ಶರೀರದಲ್ಲಿ ಒಂಬತ್ತು ಹೂವುಗಳು ಅಂದರೆ ಒಂಬತ್ತು ದ್ವಾರಗಳು, ಈ ದ್ವಾರಗಳನ್ನೇ ಸಾಧನಕ್ಕೆ ಸಮೀಚೀನವಾಗಿ ಉಪಯೋಗಿಸಿಕೊಳ್ಳುವದರಿಂದ ಅವೇ ಭಗವತ್ಪೂಜೆಗೆ ಸಾಧನವಾದ ಹೂವುಗಳು ಎಂದು ಕರೆಸಿಕೊಳ್ಳುವುದರಿಂದ ಇಲ್ಲಿ ಒಂಬತ್ತು ಹೂವಿಗೆ ಅಂದಿದ್ದಾರೆ....  

  ತತೋ ಧ್ಯಾಯೇತ್ಸುಷುಮ್ನಾಖ್ಯಂ ಧಾಮ ರಂಧ್ರಾದ್ಬಹಿರ್ಗತಮ್ /
ತಥಾ ತೇನ ಗತಾ ಯಾಂತಿ ತದ್ವಿಷ್ಣೋಃ ಪರಮಂ ಪದಮ್ //

      ಗರುಡ ಪುರಾಣದ ಈ ಉಕ್ತಿಯಂತೆ, ಈ ಒಂಬತ್ತು ರಂಧ್ರಗಳಿಗೂ ಆಧಾರವಾದ ಸಷುಮ್ನಾ ನಾಡಿಯು ಬ್ರಹ್ಮರಂಧ್ರದಿಂದ ಹೊರಟಿರುತ್ತದೆ. 
ಇಂತಹಾ ಸುಷುಮ್ನಾ ನಾಡಿಯ ಮುಖಾಂತರ ಬ್ರಹ್ಮರಂಧ್ರದಿಂದ ನಮ್ಮ ಪ್ರಾಣ ಉತ್ಕ್ರಮಣವಾಗುವ ಮಾಅಂದರೆ ಜ್ಞಾನ, ಇಂತಹ ಜ್ಞಾನವನ್ನು  ಮ ಅಂದರೆ ಸಮಯ, ಕಾಲ ಅಂತ ಅರ್ಥ, ಆ ಕಾಲದಲ್ಲಿ, ಅಥವಾ ಆ ಸಮಯದಲ್ಲಿ, ಇಂತಹಾ ಜ್ಞಾನವನ್ನು ಕರುಣಿಸುವವನು ಚಂದ ಅನಾದಿನಿತ್ಯವಾದ ಅಲ್ಹಾದತೆಯನ್ನು ಸ್ವಭಾವತಃ ಹೊಂದಿರುವವನು ಪರಮಾತ್ಮನಾದ್ದರಿಂದ, ಆ ಪರಮಾತ್ಮನನ್ನು ಇಲ್ಲಿ ಚಂದಮಾಮ ಎಂದು ಪ್ರತಿಸಾಲಿನಲ್ಲೂ ಸಂಬೋಧಿಸಿದ್ದಾರೆ ಅರ್ಥಾತ್ ಕರೆದಿದ್ದಾರೆ ದಾಸಾರ್ಯರು.... 

         ತತಃ ಕುಂಡಲಿನೀಂ ಧ್ಯಾಯೇದಾರೋಹಾದವರೋಹತಃ/
         ಷಟ್ಚಕ್ರಕೃತಸಂಚಾರಾಂ ಸಾರ್ಧತ್ರವಲಯಾಂ ಸ್ಥಿತಾಮ್ //-(ಗರುಡಪುರಾಣ) 
       ಬ್ರಹ್ಮಕಲಾ ಕುಂಡಲಿನಿ ಎನ್ನುವ ಶಕ್ತಿಯು ಭಾನುಪ್ರಭೆಯಂತೆ ಪ್ರಕಾಶಮಾನವಾಗಿದ್ದು, ಈ ಸುಷುಮ್ನಾನಾಡಿಯ ಸುತ್ತಲೂ ಅಮೃತವನ್ನು ಸ್ರವಿಸುತ್ತಾ ನಮ್ಮ ದೇಹದಲ್ಲಿ ಇರುವ ಷಟ್ಚಕ್ರದಲ್ಲಿ ಸಂಚರಿಸುತ್ತಾ ಸರ್ಪದಂತೆ ಮೂರುವರೆ ಸುತ್ತು ಹಾಕಿದ್ದು ಇರುತ್ತದೆ ಆದ್ದರಿಂದ ಶ್ರೀಕನಕದಾಸಾರ್ಯರು ಇಲ್ಲಿ ತುಂಬಿ ನಾಳ ತುದಿ ತಂಬಿ ಭಾನುಪ್ರಭೆ ಚಂದಮಾಮಾ ಎಂದಿದ್ದಾರೆ.....

ಇದನ್ನು  ನಮ್ಮ  ಶ್ರೀ ಗೋಪಾಲದಾಸಾರ್ಯರು ವಿರಾಟ್ ರೂಪ ಚಿತ್ರದಲಿ ಬಹಳ ಅದ್ಭುತ ವಿವರಿಸಿದ್ದಾರೆ.....

ಕದರು ಗಾತರ ಕಂಬ ತೆಕ್ಕೆ ಗಾತರ ಹೂವು ಚಂದಮಾಮ/
ಆನೆ ಗಾತರ ಕಾಯಿ ಒಂಟೆ ಗಾತರ ಹಣ್ಣು ಚಂದಮಾಮ//
       ಕದರು ಎಂದರೆ ಕಗ್ಗಲಿ ಮರ, ಗರಗಸ ಎಂಬ ಅರ್ಥಗಳು ಇದ್ದವೆ. ನಮ್ಮ ದೇಹದಲ್ಲಿ ----
    ಮೂಲಾಧಾರಃ ಸ್ವಾಧಿಷ್ಠಾನಂ ಮಣಿಪೂರಕಮೇವ ಚ/
    ಅನಾಹತಂ ವಿಶುದ್ಧಾಖ್ಯಮಾಜ್ಞಾಷಟ್ಚಕ್ರಮುಚ್ಯತೇ //-(ಗರುಡ ಪುರಾಣ)
      ಮೂಲಾಧಾರ - ಸ್ವಾಧಿಷ್ಠಾನ-ಮಣಿಪೂರಕ-ಅನಾಹತ-ವಿಶುದ್ಧ-ಆಜ್ಞಾ . ಎಂಬ ಆರು ಗರಗಸದಂತೆ ಅಲಗುಗಳುಳ್ಳ ಆರು ಚಕ್ರಗಳು ಕಂಬದ ಆಕಾರದಲ್ಲಿ ಕಗ್ಗಲಿ ಮರದ ಹಾಗೆ ನೇರವಾಗಿ ಬ್ರಹ್ಮರಂಧ್ರದವರೆಗೂ ಇವೆ . ಇದನ್ನೇ ಕದರು ಗಾತ್ರದ ಕಂಬ ಅಂದಿದ್ದಾರೆ... 
    ಆಧಾರಂ ತು ಚತುರ್ದಾನಲ ಸಮಂ ವಾಸಾಂತವರ್ಣಾಶ್ರಯಂ/
ಸ್ವಧಿಷ್ಠಾನಮಪಿ ಪ್ರಭಾಕರಸಮಂ ಬಾಲಾಂತಷಟ್ ಪತ್ರಕಮ್ //
ರಕ್ತಾಭಂ ಮಣಿಪೂರಕಂ ದಶದಲಂ ಡಾದ್ಯಂ ಫಕಾರಾಂತಕಂ/
ಪತ್ರೈದ್ವಾದಶಭಿಸ್ತ್ವನಾಹತಪುರಂ ಹೈಮಂ ಕಠಾಂತಾವೃತಮ್ //
ಪತ್ರೈಃ ಸಸ್ವರಷೋಡಶೈಃ ಶಶಧರಜ್ಯೋತಿರ್ವಿಶುದ್ಧಾಂಬುಜಂ/
ಹಂಸೇತ್ಯಕ್ಷರಯುಗ್ಮಕಂ ದ್ವಯದಲಂ ರಕ್ತಾಭಮಾತ್ರಾಂಬುಜಮ್ //
ತಸ್ಮಾದೂರ್ಧಗತಂ ಪ್ರಭಾಸಿತಮಿದಂ ಪದ್ಮಂ ಸಹಸ್ರಚ್ಛದಂ /
ಸತ್ಯಾನಂದಮಯಂ ಸದಾ ಶಿವಮಯಂ ಜ್ಯೋತಿರ್ಮಯಂ ಶಾಶ್ವತಮ್ //-(ಗರುಡಪುರಾಣ)
     ಕಂಬದಾಕಾರದಲ್ಲಿರುವ ಈ ಆರು ಚಕ್ರಗಳು ತೆಕ್ಕೆ ಗಾತರ ಹೂವುಗಳು ಅಂದರೆ ಒಳ್ಳೆ ಅರಳಿದ ಹೂವುಗಳಂತೆ ಬೇರೆ ಬೇರೆ ವರ್ಣದ ಹೂವುಗಳನ್ನು ಹೊಂದಿರುತ್ತವೆ-
 ಆಧಾರ ಚಕ್ರವು ಅಗ್ನಿಸಾಮನ ವರ್ಣದಿದ್ದು ನಾಲ್ಕು ಅಕ್ಷರಗಳು(ವ , ಶ , ಷ , ಸ ) 
ಸ್ವಾಧಿಷ್ಠಾನ ಚಕ್ರವು ಸೂರ್ಯಸಮಾನ ವರ್ಣ ಷಟ್ದಲ (ಬ , ಭ. ಮ , ಯ , ರ , ಲ ) 
ಮಣಿಪೂರಕ - ರಕ್ತವರ್ಣ - 10 ದಲ ( ಡ , ಢ , ಣ , ತ , ಥ , ದ , ಧ , ನ , ಪ , ಫ )
ಅನಾಹತ -ಸುವರ್ಣಮಯ-12 ದಲ ( ಕ , ಖ , ಗ , ಘ , ಚ , ಛ , ಜ , ಝ , ಞ , ಟ , ಠ) 
ವಿಶುದ್ಧ - ಚಂದ್ರನಂತೆ ಪ್ರಕಾಶಮಾನವಾಗಿದ್ದು ಹದಿನಾರು ಸ್ವರಗಳ ಸಹಿತ ಇರ್ತ್ತದೆ . 
ಆಜ್ಞಾ - ರಕ್ತ ವರ್ಣ - ಹಂಸ ಎನ್ನುವ ಎರಡು ದಳದ್ದಿರುತ್ತದೆ . 
    ಇದನ್ನೇ ದಾಸರಾಯರು ಇಲ್ಲಿ ತೆಕ್ಕೆ ಗಾತರ ಹೂವು ಅಂದಿದ್ದಾರೆ . 
ಈ ಎಲ್ಲ ಚಕ್ರಗಳ ಮೇಲೆ ಅತ್ಯಂತ ಪ್ರಬಲವಾದ ದೊಡ್ಡ ಗಾತ್ರದ ಸಹಸ್ರದಳ ಕಮಲ ಇರುತ್ತದೆ ಇದನ್ನೇ ಆನೆ ಗಾತ್ರದ ಕಾಯಿ ಎಂದಿದ್ದಾರೆ... ಈ ಸಹಸ್ರದಳ ಕಮಲದಲ್ಲಿ ಸತ್ಯಂ ಜ್ಞಾನಂ ಅನಂತಂ ಬ್ರಹ್ಮ ಎಂದು ಉಪನಿಷತ್ತುನಲ್ಲಿ ಹೇಳಿದಂತೆ ಫಲರೂಪಿಯಾದ, ಸತ್ಯಮಯನಾದ, ಜ್ಞಾನಮಯನಾದ, ಆನಂದಮಯನಾದ, ಅನಂತಕಲ್ಯಾಣಗುಣ ಪರಿಪೂರ್ಣನಾದ ಶ್ರೀಮನ್ನಾರಾಯಣದೇವರು ವಾಸವಾಗಿದ್ದಾರೆ.... ಶ್ರೀಮನ್ನಾರಾಯಣ ದೇವರಿಗೆ ಸಮರಾದವರಾಗಲೀ ಅಥವಾ ಅಧಿಕರಾದವರಾಗಲೀ ಯಾರ್ಯಾರೂ ಇಲ್ಲದಿರುವದರಿಂದ ಒಂಟೆ ಗಾತರ ಹಣ್ಣು ಅಂತಾರೆ ದಾಸಾರ್ಯರು....
ಇದರ ವಿತರಣೆಯನ್ನು ಹರಿಕಥಾಮೃತ ಸಾರ ಪಾಠದ ಸಮಯ ಶ್ರೀ ಹಂಪಿಹೊಳಿ ಆಚಾರ್ಯರು ನಮಗೆ ತಿಳಿಸಿದ್ದಾರೆ...

ಕಾಲಿಲ್ಲದಾತನು ಹತ್ತಿದನಾ ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ

    ಶ್ರೀಶ್ವೇತಾಶ್ವತರ ಶ್ರುತಿಯಲ್ಲಿ ಭಗವಂತನನ್ನು ಪ್ರಾಕೃತ ಇಂದ್ರಿಯಗಳಿಂದ ರಹಿತನಾದವನು ಪರಮಾತ್ಮ ಎಂದು ಸ್ತುತಿಸಲಾಗಿದೆ -
  ಅಪಾಣಿ ಪಾದೋ ಜವನೋ ಗೃಹೀತಾ 
    ಪ್ರಾಕೃತ ಪಾಣಿ, ಪಾದ, ಕಣ್ಣು ಇಲ್ಲದಿದ್ದರೂ ದಿವ್ಯ ಅಪ್ರಾಕೃತ ಇಂದ್ರಿಯಗಳಿರುವವನು ಈ ಪರಮಾತ್ಮ ಹೀಗಾಗಿ  ಈ ಪರಮಾತ್ಮನನ್ನೇ ಇಲ್ಲಿ ಕಾಲಿಲ್ಲದಾತನು ಅಂತಾಯಿದ್ದಾರೆ.....
   ಈ ಪರಮಾತ್ಮನು ತನಗೆ ಏನೂ ಪ್ರಯೋಜನವಿಲ್ಲದಿದ್ದರೂ ಸಹ ಈ ಜೀವನಿಗೆ ಸಾಧನ ಶರೀರವಾದ ಈ ಮನುಷ್ಯಜನ್ಮವನ್ನು ಕರುಣಿಸಿ, ಈ ಮನುಷ್ಯದೇಹದಲ್ಲಿರುವ ಇಂತಹ ಅದ್ಭುತವಾದ ಮರವನ್ನು ಹತ್ತಿದನು ಯಾಕೆ ? ಮನುಷ್ಯನಿಂದ ಸಾಧನೆ ಮಾಡಿಸಲು. ಇಂತಹ ಮರವನ್ನು ಹತ್ತಲು ಆತನೊಬ್ಬನೇ ಸಮರ್ಥನು. ಆತನು ಇಂತಹಾ ಮರವನ್ನು ಹತ್ತಿದರೇ ತಾನೇ ಮನುಷ್ಯರು ಸಾಧನ ಮಾಡಲು ಸಾಧ್ಯ ? ಹೀಗಾಗಿ ಪರಮಾತ್ಮನು ಇಂತಹಾ ಮರವನ್ನು ಹತ್ತಿ ಅಲ್ಲಿರುವ ಹಣ್ಣು ಅಂದರೇ ತನ್ನ ಜ್ಞಾನವನ್ನು ಕರುಣಿಸುವ ಶ್ರೀಮದ್ಭಾಗವತಮ್ ಎನ್ನುವ ಹಣ್ಣು. ಇಂತಹ ಅದ್ಭುತವಾದ ರಸಭರಿತವಾದ ಹಣ್ಣನ್ನು ವೇದವೆಂಬ ಬೃಹತ್ತಾದ ಮರದಿಂದ ಶ್ರೀವೇದವ್ಯಾಸ ರೂಪಿಯಾದ ಭಗವಂತನು ನಮಗಾಗಿ ಕೆಳಗಡೆ ಉದುರಿಸದ್ದಾನೆ. ಅದನ್ನೇ ದಾಸರಾಯರು ಇಲ್ಲಿ ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ಎಂದಿದ್ದಾರೆ . ಇದನ್ನೇ ಭಾಗವತದಲ್ಲಿ -
    ನಿಗಮಕಲ್ಪತರೋರ್ಗಲಿತಂ ಫಲಂ ಅಂದಿದ್ದಾರೆ....
ಈ ಅರ್ಥ ವಿವರಣೆಯನ್ನು ಈಗಾಗಲೇ ಒಂದು ವರ್ಷದಿಂದ  ನಮ್ಮ  ವಿಶ್ವನಂದಿನಿಯ ಉಪನ್ಯಾಸ ಮಾಲಿಕೆಯಲ್ಲಿ ನಮ್ಮ  ಶ್ರೀ ಗುರುಗಳು ವಿಷ್ಣುದಾಸಾ ನಾಗೇಂದ್ರಾಚಾರ್ಯರಿಂದ  ನಮ್ಮ  ನಾದನೀರಾಜನದ ದಾಸ ಬಳಗರು ಕೇಳಿಕೊಂಡು ಬರ್ತಾಇದ್ದೇವೆ....

 ನೆತ್ತಿಲ್ಲದಾತನು ಹೊತ್ತನಾ ಹಣ್ಣನು ಚಂದಮಾಮ
ತಳವಿಲ್ಲದಾ ಗೋಡೆಯಲಿಳಿಸಿದನಾ ಹಣ್ಣ ಚಂದಮಾಮ 
                ನೆತ್ತಿ ಇಲ್ಲದವನು ಅಂದರೇ ವಾಯುದೇವರು , ಅಂದರೇ ಗಾಳಿಯ ರೂಪದಿಂದ ಸಂಚರಿಸುವವರಾದ್ದರಿಂದ ಮಾತ್ರ ಇಲ್ಲಿ ನೆತ್ತಿ ಇಲ್ಲದವನು ಅಂದಿದ್ದಾರೆ. ಪರ ಜ್ಞಾನವನ್ನು ಸರಿಯಾಗಿ ತಿಳಿದುಕೊಂಡು ಸಮೀಚೀನವಾದ ಜ್ಞಾನವನ್ನು ನೀಡುವವರು ವಾಯುದೇವರೊಬ್ಬರೇನೇ. ಹಾಗೂ ಪರಮಾತ್ಮನ ಆಜ್ಞೆಯನ್ನು ತಮ್ಮ ನೆತ್ತಿಯಮೇಲೆ ಭಕ್ತಿಯಿಂದ ಧಾರಣ ಮಾಡಿ ಅದನ್ನು ಸಮರ್ಥವಾಗಿ ಪೂರೈಸುವವರು  ಅಂದರೆಏವಾಯುದೇವರೊಬ್ಬರೇನೇ ಆದ್ದರಿಂದ ಅವರೇ ಈ ಭಗವಂತನ ಜ್ಞಾನ ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊತ್ತು ಭೂಲೋಕದಲ್ಲಿ ಅವತಾರತ್ರಯದಲ್ಲಿ ಸಮರ್ಥವಂತವಾಗಿ ಪ್ರಸಾರ ಮಾಡಿದ್ದಾರೆ ಇದನ್ನೇ ಶ್ರೀಹರಿ ವಾಯುಸ್ತುತಿಯಲ್ಲಿ - ಆಜ್ಞಾಮನ್ನೈರಧಾರ್ಯಾಂ ಶಿರಸಿ ಎಂದು ವರ್ಣಿಸಿದ್ದಾರೆ....

          ವಾಯುದೇವರು ಪರಮಾತ್ಮನ ಆಜ್ಞೆಯಂತೆ ಈ ಜ್ಞಾನವೆಂಬ ಹಣ್ಣನ್ನು ತಳವಿಲ್ಲದ ಅಂದರೇ ಆಧಾರವಿಲ್ಲದ, ಅಂದರೇ  ಸ್ಥಿರವಲ್ಲದ ಈ ಮನುಷ್ಯ ದೇಹವೆಂಬ ಗೋಡೆಯಲ್ಲಿ ಇರಿಸಿದರು.  ಎನ್ನುವುದನ್ನು ತಳವಿಲ್ಲದಾ ಗೋಡೆಯಲಿರಿಸಿದನಾ ಹಣ್ಣ ಚಂದಮಾಮಾ ಅಂತಿದ್ದಾರೆ....

ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ
    ಶ್ರೀಮದ್ವೇದವ್ಯಾಸದೇವರಿಂದ   ಪ್ರಣೀತವಾದ ಸಚ್ಛಾಸ್ತ್ರ ಎನ್ನುವ ಹಣ್ಣನ್ನು ಈ ಮನುಷ್ಯನೆಂಬ ತಳವಿಲ್ಲದ (ಆಧಾರವಿಲ್ಲದ) ಗೋಡಯಲ್ಲಿ ಇರಿಸಿದಾಗ ಈ ಮನುಷ್ಯ ಅದನ್ನು ಸವಿಯುವ ಸರಿಯಾದ ಮಾರ್ಗ ಯಾವುದು? ಭಗವಂತನ ಪ್ರೀತಿಸಂಪಾದನೆಯ ಮಾರ್ಗ ಯಾವುದು ?         ಎನ್ನುವದನ್ನು ಕಂಡುಕೊಳ್ಳಲಾರದೇ ಮಾರ್ಗ ತಪ್ಪಿ, ಕೇವಲ ಲೌಕಿಕ ಆಶೆ ಆಕಾಂಕ್ಷೆಗಳನ್ನು ಇಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅನ್ಯ ಮಾರ್ಗಗಳನ್ನೇ ಹಿಡಿದು ನಡೆಯುತ್ತಿದ್ದಾರೆ... ಶ್ರೀಕನಕದಾಸರ ಈ ಅಭಿಪ್ರಾಯವನ್ನೇ ಶ್ರೀಮದ್ಭಾಗವತದಲ್ಲಿ -
   ಪುಂಸೋ ವರ್ಷ ಶತಂ ಹ್ಯಾಯುಃ ತದರ್ಧಂ ಚ ಅಜಿತಾತ್ಮನಃ/
ನಿಷ್ಫಲಂ ಯದಸೌರಾತ್ರ್ಯಾಂ ಶತೇಂಧಂ ಪ್ರಾಪಿತಸ್ತಮಃ //
ಮುಗ್ಧಸ್ಯ ಬಾಲ್ಯ ಕೌಮಾರೇ ಕ್ರೀಡತೋಯಾತಿವಿಂಶತಿಃ /
ಜರಯಾಗ್ರಸ್ತದೇಹಸ್ಯ ಯಾತ್ಯಕಲ್ಪಸ್ಯವಿಂಶತಿಃ //
ದಾರಾಪೂರೇಣ ಕಾಮೇನ ಮೋಹೇನ ಬಲೀಯಸಾ /
ಶೇಷಂ ಗೃಹೇಷು ಸಕ್ತಸ್ಯ ಪ್ರಮತ್ತಸ್ಯಾಪಯಾತಿ ಹಿ//
ಸ್ನೇಹಪಾಶೈಧೃಢೈರ್ಬದ್ಧಮುತ್ಸಹೇತ ವಿಮೋಚಿತಮ್ //
   ಎಂದು ತಿಳಿಸಿದ್ದಾರೆ ... ಉದಾಹರಣೆಗೆ  ದಿನ ಬೆಳಗಾದರೇ ನಮ್ಮ  ಸಮೂಹದಲ್ಲಿ ಶ್ರೀ ವಿಷ್ಣುದಾಸಾ ನಾಗೇಂದ್ರಾಚಾರ್ಯರ ಭಾಗವತ ಹಾಗೂ ಸಂಜೆಯ ಸಮಯ ಶ್ರೀ ಕೊರ್ಲಹಳ್ಳಿ ವೆಂಕಟೇಶಾಚಾರ್ಯರ ಉಪನ್ಯಾಸ ಮಾಲಿಕೆಗಳು, ಶ್ರೀ ಸಮೀರಾಚಾರ್ಯರ ವ್ಯಾಸಗದ್ಯದ ಲೇಖನಗಳು ಬರ್ತವೆ.. ಮನೆಯನ್ನು ಬಿಟ್ಟು ಎಲ್ಲಿಗೂ ಹೋಗದೇ ನಮಗೆ ಅಮೃತ ಫಲ ಮನೆಯಲ್ಲೇ ಸಿಗುತ್ತದೆ.... ಆದರೇ ಇದರಲ್ಲಿ  ಎಷ್ಟು ಜನರು ಆ ಉಪನ್ಯಾಸಗಳು ಕೇಳುವವರಿದ್ದಾರೆ?.... ಅಂದರೇ ಯಾವುದೇ ವಿಷಯ ಪರಮಾತ್ಮನದು ಪಡೆಯಬೇಕಾದರೆ ಆ ಜೀವಕ್ಕೆ  ಆ ಯೋಗ್ಯತೆ ಬೇಕೇಬೇಕು... ಇಂಥಾ ಅಮೂಲ್ಯ ರತ್ನಗಳನ್ನು ಬಿಟ್ಟು ನಾವು.... ಹರಿಟೆಯಲ್ಲೇ ನಿರತರಾಗಿರ್ತೇವೆ... ಅಲ್ಲವೇ.. ಹಾಗೇ ಇದೂನೂ...

ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮಾ
              ಶ್ರೀವೇದವ್ಯಾಸದೇವರಿಂದ ಪ್ರಣೀತವಾದ ಸಚ್ಛಾಸ್ತ್ರವೆಂಬ ಹಣ್ಣನ್ನು ನಿಜವಾಗಿಯೂ ಜ್ಞಾನವೆಂಬ ಸದ್ದುಳ್ಳ ಸಂತೆಯಲ್ಲಿ ಇರಿಸಬೇಕಾಗಿತ್ತು.... ಇದರಿಂದ ನಿಜವಾದ ಜ್ಞಾನಿಗಳು ಸದುಪಯೋಗವನ್ನಾದರೂ ಪಡೆದುಕೊಳ್ಳುತ್ತಿದ್ದರು... ಆದರೇ ಇಲ್ಲಿ ಹಾಗಾಗಲಿಲ್ಲ , ಶ್ರೀವೇದವ್ಯಾಸದೇವರಿಂದ ಪ್ರಣೀತವಾದ ಸಚ್ಛಾಸ್ತ್ರಕ್ಕೆ ತಮಗೆ ಹೇಗೆ ಬೇಕೋ ಹಾಗೇ ವ್ಯಾಖ್ಯಾನಗಳನ್ನು ಮಾಡಿ ಅದನ್ನು ನಿಜವಾದ ಜ್ಞಾನಿಗಳಿಗೆ ತಿಳಿಯದಂತೆ ಅಜ್ಞಾನಿಗಳೆಂಬ ಅಂದರೇ ಆ ವ್ಯಾಖ್ಯಾನಗಳ ಬಗ್ಗೆ ವಿಮರ್ಶೆಮಾಡದ ಜನಗಳಲ್ಲಿ ಇಟ್ಟುಬಿಟ್ಟಿದ್ದಾರೆ ಇದನ್ನೇ ಶ್ರೀಮದ್ವಾಯುಸ್ತುತಿಯಲ್ಲಿ-
ದುರ್ಭಾಷ್ಯಂ ವ್ಯಸ್ಯ-ದಸ್ಯೋರ್ ಮಣಿಮತ ಉದಿತಂ ವೇದಸದ್ಯುಕ್ತಿಭಿಸ್ತ್ವಮ್ ಎಂದು ತಿಳಿಸಿದ್ದಾರೆ ..... ಮುಂದೆ------

 ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ
       ರೊಕ್ಕವಿಲ್ಲದವನು ಕೊಳ್ಳುವದು ಅಂದರೇ ಏನು? ಬಲಾತ್ಕಾರದಿಂದ ಎಳೆದುಕೊಳ್ಳುವದು ಅಲ್ವಾ? ಈ ಶ್ರೀವೇದವ್ಯಾಸದೇವರಿಂದ ಪ್ರಣೀತವಾದ ವೇದವಿಭಾಗಳನ್ನು ಬ್ರಹ್ಮಸೂತ್ರ ಹದಿನೆಂಟು ಪುರಾಣಗಳನ್ನು ಅದ್ವೈತವಾದಿಯು ವೇದಗಳಲ್ಲಿಯೇ ಇರುವ ಕೆಲವೊಂದು ವಾಕ್ಯಗಳಿಗೆ ----
ಅಹಂ ಬ್ರಹ್ಮಾಸ್ಮಿ , ತತ್ತ್ವಮಸಿ , ನೇಹನಾನಾಸ್ತಿ ಕಿಂಚ ನ, ಜೀವಾಬ್ರಹ್ಮೈನಾಪರಂ, ಬ್ರಹ್ಮ ಸತ್ಯ ಜಗನ್ಮಿಥ್ಯಾ   ಮುಂತಾದ ವಾಕ್ಯಗಳಿಗೆ ಅಪವ್ಯಾಖ್ಯಾನ ಮಾಡುವ ಮೂಲಕ ಶ್ರೇವೇದವ್ಯಾಸದೇವರಿಗೆ ಸಮ್ಮತವಲ್ಲದ, ಅವರಿಗೆ ಸಣ್ಣುದಾದ ಕೃತಜ್ಞತೆಯನ್ನೂ ಅರ್ಪಿಸದ ಈ ಅದ್ವೈತಿಯು ಒಂದು ತರಹ ರೊಕ್ಕವಿಲ್ಲದೇ ಹಣ್ಣು ಕೊಳ್ಳುವಂತೆ ವೇದಗಳಿಗೆ ಅಪವ್ಯಾಖ್ಯಾನ ಮಾಡಿದನು ಎನ್ನುವದನ್ನು ಇಲ್ಲಿ ತಿಳಿಸಿದ್ದಾರೆ.....

 ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ
    ದಾಸರು ಇಲ್ಲಿ ಈ ಸಚ್ಛಾಸ್ತ್ರವೆಂಬ ರಸಭರಿತ ಹಣ್ಣನ್ನು ತಮ್ಮ ಮನಸ್ಸಿಗೆ ಬಂದಂತೆ ವ್ಯಾಖ್ಯಾನ ಮಾಡಿದ ವಿವಿಧ ದಾರ್ಶನಿಕರನ್ನು ನಮಗೆ ಪರಿಚಯ ಮಾಡ್ತಿದ್ದಾರೆ.... 
  ಮೂಗಿಲ್ಲದವರು ಗಂಧದ ಅರ್ಥಾತ್ ವಾಸನೆಯ ಜ್ಞಾನವಿಲ್ಲದವರು... ನಿಜವಾದ ಗಂಧ ಯಾವುದು ಎಂದು ಅರಿಯದ ಬೌದ್ಧ - ಜೈನ ರೇ ಈ ಮೂಗಿಲ್ಲದವರು. ಇವರು ಭಗವಂತನ ನಿಜವಾದ ಸ್ವರೂಪದ ಗಂಧವನ್ನು ಮುಚ್ಚಿಟ್ಟು , ವೇದ ಸುಳ್ಳು , ಕರ್ಮಗಳು ನಿರುಪಯುಕ್ತವಾದವು ಅಂತೆಲ್ಲಾ ವೇದವಿರುದ್ಧವಾದ ಮತವನ್ನೇ ಪ್ರಚಾರ ಮಾಡಿ,  ಪರಮಾತ್ಮನ  ಅನಂತ ಕಲ್ಯಾಣಗುಣಗಳ ಗಂಧವೂ ಜನರ ಮನಸ್ಸಿಗೆ ತಾಕಲಾರದಂತೆ ಮಾಡಿದವರಾದ್ದರಿಂದ ದಾಸರು ನಿರೀಶ್ವರವಾದಿಗಳನ್ನು ಮೂಗಿಲ್ಲದವರು ಅಂದಿದ್ದಾರೆ.....

 ಕಣ್ಣಿಲ್ಲದಾತನು ಕೆಂಪಾದ ಹಣ್ಣೆಂದ ಚಂದಮಾಮ
    ಕಣ್ಣು ಇಲ್ಲದವರಂದರೇ ಕುರುಡರು.... ಅತೀಂದ್ರಿಯಗಳಾದ ಪುಣ್ಯ-ಪಾಪ-ದೇವರು ಮೊದಲಾದವನ್ನು ವಿಚಾರ ಮಾಡುವ ದಾರ್ಶನಿಕರಿಗೆ ಶ್ರುತಿಯೇ ನಿಜವಾದ ದರ್ಶನ ಇಂಥ ಕಣ್ಣಿಲ್ಲದ ಚಾರ್ವಾಕರು, ಶ್ರುತಿ ಪ್ರಮಾಣವಲ್ಲ ಅಂತ ಶ್ರೀವೇದವ್ಯಾಸದೇವರಿಗೆ ಸಮ್ಮತವಾಗದ ಮತವನ್ನು ಪ್ರಚಾರ ಮಾಡ್ತಾ,  ಪುಣ್ಯ-ಪಾಪ- ದೇವರೂ ಇವೆಲ್ಲಾ ಯಾರೂ ಕಂಡಿಲ್ಲಾ, ಇವೆಲ್ಲಾ ಸುಳ್ಳು, ಕೇವಲ ಈ ಜನ್ಮದಲ್ಲಿ ಸುಖವನ್ನು ಅನುಭವಿಸಿ... ಈ ಜನ್ಮದಲ್ಲಿ ಸಾಲವನ್ನಾದರೂ ಮಾಡಿ ಸುಖವನ್ನು ಅನುಭವಿಸುವದೇ ನಿಜವಾದ ಧರ್ಮ ಋಣಂ ಕೃತ್ವಾ ಘೃತಂ ಪಿಬೇತ್ ನಿಜವಾದ ಅಂದರೇ ಕೆಂಪಾದ ಅಂದರೇ ಪಕ್ವವಾದ ಹಣ್ಣು ಅಂದ್ರೆ ಇದೇ ಇದರ ಹೊರತಾಗಿ ಯಾವ ಪುಣ್ಯವೂ ಇಲ್ಲ ಪಾಪವೂ ಇಲ್ಲ ದೇವರೂ ಇಲ್ಲಾ.. ಎಂದು ಕೇವಲ ಲೌಕಿಕ ಸುಖವನ್ನು ಅನುಭವಿಸುವ ಮತವನ್ನು ಪ್ರಚಾರ ಮಾಡಿದ ಚಾರ್ವಾಕರನ್ನು ಕಂಡು ದಾಸಾರ್ಯರು ಇಂಥವರನ್ನೇ ಇಲ್ಲಿ ಕಣ್ಣಿಲ್ಲದಾತನು ಅಂದಿದ್ದಾರೆ.....

 ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ
      ನಾವು ಯಾವುದೇ ಆಹಾರವನ್ನು ನುಂಗಬೇಕಾದರೆ ಮೊದಲು ಬಾಯಲ್ಲಿ ಹಾಕಿಕೊಂಡು ಚನ್ನಾಗಿ ನುರಿಸಿದ , ಅಗೆದನಂತರ ಅದು ಅಂಗುಳಿನ ಮುಖಾಂತರ ಹೊಟ್ಟೆ ಸೇರುತ್ತದೆ ಅಲ್ವಾ ? ಅಂದರೆ ಯಾವುದೇ ಆಹಾರವು ನಮ್ಮ ಉದರ ಸೇರಬೇಕಾದರೆ ಅಂಗುಳ ಎನ್ನುವ ಭಾಗ ಅತ್ಯಂತ ಮಹತ್ವದ್ದು ಅದೇ ಇಲ್ಲಾ ಅಂದರೆ ಆಹಾರ ಒಳಗಡೆ ಸೇರುವುದಾದರೂ ಹೇಗೆ ? 
     ಆದರೇ ಈ ಸಚ್ಛಾಸ್ತ್ರವೆಂಬ ಹಣ್ಣನ್ನು  ಮೀಮಾಂಸಕರು ವೇದವನ್ನು ಅಪೌರುಷೇಯ ಎಂದು ಒಪ್ಪಿದರೂ ಸಹಾ ಕೇವಲ ಕರ್ಮವನ್ನೇ ಪ್ರಧಾನವಾಗಿಸಿ ವೇದದಲ್ಲಿ ಎಲ್ಲಾಕಡೆಯೂ ಪ್ರತಿಪಾದ್ಯನಾದ ಈಶ್ವರನನ್ನೇ ತಿರಸ್ಕರಿಸೊದವರು, ನಾವು ಕೇವಲ ನುರಿಸುವದರಿಂದ ಆಹಾರ ಒಳಗಡೆ ಹೋಗುವದಿಲ್ಲಾ ಅದಕ್ಕೆ ಅಂಗಳು ಹೇಗೆ ಅತ್ಯವಶ್ಯವೋ ಹಾಗೆಯೇ ಕೇವಲ ಕರ್ಮವನ್ನು ಮಾಡಿದರೆ ಸಾಕಾಗುವದಿಲ್ಲಾ ಸಕಲ ಕರ್ಮಗಳ ಪ್ರತಿಪಾದ್ಯನಾದ ಪರಮಾತ್ಮನ ಪ್ರಸನ್ನತೆ ಎನ್ನುವದು ತುಂಬಾ ಮಹತ್ವವಾದದ್ದು . ಇದನ್ನೇ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ತಮ್ಮ ಸದಾಚಾರಸ್ಮೃತಿ ಎಂಬ ಗ್ರಂಥದಲ್ಲಿ - 
   ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್/
ಸರ್ವೇ ವಿಧಿನಿಷೇಧಾಃ ಸ್ಯುಃ ಏತಯೋರೇವ ಕಿಂಕರಾಃ //
    ಸಕಲ ಕರ್ಮಗಳ ಗುರಿ, ಲಕ್ಷ್ಯ ಹರಿಸ್ಮರಣೆಯಾಗಿದೆ. ಹರಿಸ್ಮರಣೆಗೆ ಪೂರಕವಾಗಿ ನಮ್ಮ ಕರ್ಮಗಳು ಇರಬೇಕು ಅನ್ನುವುದನ್ನು ಧೃಢವಾಗಿ ತಿಳಿಸಿದ್ದಾರೆ.... 
   ಆದರೇ ಈ ಮೀಮಾಂಸಕರು ಕೇವಲ ಕರ್ಮಗಳೇ ಪ್ರಧಾನ ಅಂತ ವ್ಯಾಖ್ಯಾನ ಮಾಡಿ ವೇದಪ್ರತಿಪಾದ್ಯನಾದ ಪರಮಾತ್ಮನನ್ನೇ ದೂರಿಕರಿಸಿರುವದರಿಂದ ಅಂಥವರನ್ನು ದಾಸರು ಇಲ್ಲಿ ಅಂಗುಳಿಲ್ಲದಾತನು ಅಂದಿದ್ದಾರೆ......

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ
          ಬಾಯಿಲ್ಲದಾತ ಅಂದ್ರೇ ಹೆಚ್ಚು ಮಾತನಾಡದವನು ಅಂತ ಅರ್ಥ... ನೋಡಿ... ಈಗ ನಾವು ಸಾಧಾರಣವಾಗಿ ರೂಢಿಯಲ್ಲಿ ಯಾರಾದರೂ ಬಹಳ ಮಾತನಾಡದಿದ್ದರೆ ಏನಂತೀವಿ ? ಅಯ್ಯೋ ಅವನಿಗೆ ಬಾಯೇ ಇಲ್ಲಾ ಅಂತೀವಿ  ಅಲ್ವಾ? . ಹಾಗೇನೇ ಇಲ್ಲಿ ಬಾಯಿಲ್ಲದಾತನು ಅಂದರೇ ಲೌಕಿಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡದೇ ಕೇವಲ ಸಾಧನೆಯಲ್ಲಿ ಏಕಾಗ್ರಚಿತ್ತನಾದವನು ಅಂತ ಅರ್ಥ. ಅಂದರೆ ಮೌನಿ...ಅಂತ... ಲೌಕಿಕ ವಿಷಯಗಳಲ್ಲಿ ಮೌನಿಯಾದವನೇ ನಿಜವಾದ ಸಾಧಕ ಅಂಥವರನ್ನೇ ಮುನಿ ಎಂದು ಕರೆಯಲಾಗುವದು ಅಂತ ಶ್ರೀಮದ್ಭಾಗವತದಲ್ಲಿ ಶ್ರೀಶುಕಮುನಿಗಳ ಬಗ್ಗೆ ಹೇಳುವಾಗ ಮುನಿಗಳ ಲಕ್ಷಣಗಳನ್ನು ತಿಳಿಸಿದ್ದಾರೆ... ಇಂತಹ ಮಾತನಾಡದ ಮುನಿಗಳು ಮಾತ್ರ ಭಗವಂತನ ನಿಜವಾದ ಸ್ವರೂಪವನ್ನು ವೇದ ಶಾಸ್ತ್ರಗಳಲ್ಲಿ ತಿಳಿಸಿರುವಂತೆ ಶ್ರವಣ, ಮನನ, ಧ್ಯಾನ, ನಿದಿಧ್ಯಾಸನ, ಪ್ರಾಣಾಯಮ ಪ್ರತ್ಯಾಹಾರದಿಗಳ ಸಾಧನದಿಂದ ಪರಮಾತ್ಮನ ಪ್ರಸನ್ನತೆಯನ್ನು ಗಳಿಸಿಕೊಂಡು ಮೋಕ್ಷ ಎನ್ನುವಂಥಾ ಅಮೃತ ಫಲವನ್ನು ಹೊಂದುವರು ಅಷ್ಟೇ ಹೊರತು ಮಾತನಾಡುವ ನಮ್ಮಂತಹ ಲೌಕಿಕರು ಹೊಂದಲು ಸಾಧ್ಯವಿಲ್ಲ...  ಇದನ್ನೇ ಶ್ರೀ ಪುರಂದರದಾಸಾರ್ಯರು ತಮ್ಮ  ಬುಡುಬುಡುಕಿಯ ಮುಂಡಿಗೆಯಾದ ಜಯವದೆ ಜಯವದೆ ಈ ಮನೆತನಕೆ ಅಂತ ಭಾಗವತ್ ಸಾರವನ್ನು ತಿಳಿಸುವ ಮುಖಾಂತರ  ಶುಕವೆಂಬ್ಹಕ್ಕಿ ಉಣ್ಣೈತಪ್ಪಾ ಅಂತಾರೆ...

     ಮಯಿಸ್ಥಿತೋ ಮದಂಗೇಷು ಸ್ವತಂತ್ರೋವ್ಯಾಪ್ತವಾನ್ ಹರಿಃ/
ಸ ಸರ್ವಸ್ಯಾsತ್ಮತಂತ್ರೋಮಾಂ ಸ್ವೇಚ್ಛಯಾ ಆವರ್ತಯತ್ಮಜಃ//
ಸ್ವಾತ್ಮನಃ ತಸ್ಯಪೂಜಾಃ ಸ್ಯುಃ ಮನೋವಾಕ್ಕಾಯ ವೃತ್ತಯಃ /
ಮಮೈತಾ ಇತಿಕರ್ತಾರಂ ಉದ್ದೇಶ್ಯಂಚ ಹರಿಂ ಸ್ಮರೇತ್ //
  ಎಂಬ ಯೋಗದೀಪಿಕಾ ಗ್ರಂಥದ ಉಕ್ತಿಯಂತೆ ಸ್ವತಂತ್ರ್ಯನಾದ ಶ್ರೀಹರಿ ನನ್ನಲ್ಲಿದ್ದು, ನನ್ನ ಎಲ್ಲಾ ಅಂಗ ಅವಯವಗಳಲ್ಲಿ ವ್ಯಾಪಿಸಿಕೊಂಡಿರುವ, ಸಂಪೂರ್ಣವಾಗಿ ಆತನ ಅಧೀನನಾಗಿರುವ ನನ್ನನ್ನು ತನ್ನ ಸಂಕಲ್ಪಕ್ಕೆ ಅನುಗುಣವಾಗಿ ಪ್ರೇರೇಪಿಸುತ್ತಿರುವನು.. ನನ್ನ ಮನಸ್ಸಿನ, ಮಾತಿನ, ಇಂದ್ರಿಯಗಳ, ದೇಹದ ಎಲ್ಲಾ ವೃತ್ತಿ ಪ್ರವೃತ್ತಿಗಳೂ ಆತನ ಪೂಜೆಗಳು, ಆತನೇ ಪ್ರೇರೇಪಿಸಿದ್ದು . ಇವೆಲ್ಲವೂ ಸಹಾ ಪರಮಾತ್ಮನೇ ನನ್ನ ಉದ್ಧಾರಕ್ಕಾಗಿ ಮಾಡಿಸಿದ್ದರಿಂದ ನನ್ನ ಪ್ರತಿಯೊಂದೂ ವೃತ್ತಿಪ್ರವೃತ್ತಿಗಳು ಕರ್ತ ಶ್ರೀಹರಿಯೇ ಆಗಿದ್ದಾನೆ ಎನ್ನುವಂತಾ ಅನುಸಂಧಾನದಿಂದ ಪರಮಾತ್ಮನಲ್ಲಿ ಮನಸ್ಸನಿಟ್ಟು ಸಾಧನ ಮಾಡುವ ಸಾಧಕರನ್ನು ಕಂಡು ದಾಸರು ಇಲ್ಲಿ ಅಂತಹ ಸಾಧಕರನ್ನು ಮಾತನಾಡದವರು ಅಂದಿದ್ದಾರೆ......

ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ 
        ಈ ಪದ ಅಂದರೆ ಪ = ರಕ್ಷಕನಾದ, ದ= ಸಕಲ ಐಶ್ವರ್ಯಗಳನ್ನೂ ದಯಪಾಲಿಸುವ, ಪದ ಶಬ್ದವಾಚ್ಯನಾದ ಭಗವಂತನು ತನ್ನ ಏಕಾಂತ ಭಕ್ತರಿಗೆ ಅತಿ ಸುಲಭನಾಗಿದ್ದಾನೆ.. ಆತನು ಭಕ್ತಾಧೀನ ಭಕ್ತವತ್ಸಲ ಭಕ್ತಜನ ರಕ್ಷಕನಾಗಿದ್ದಾನೆ.. ಇದನ್ನೇ ನಮ್ಮ  ಶ್ರೀಜಗನ್ನಾಥದಾಸರು-
 ಶರಣಜನಮಂದಾರ ಶಾಶ್ವತ
ಕರುಣಿಕಮಲಾಕಾಂತ ಕಾಮದ
ಪರಮ ಪಾವನತರ ಸುಮಂಗಳಚರಿತ ಪಾರ್ಥಸಖ/
ನಿರುಪಮಾನಂದಾತ್ಮ ನಿರ್ಗತ-
ದುರಿತ ದೇವವರೇಣ್ಯನೆಂದಾ-
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ // ಎಂದು ಪರಮಾತ್ಮನ  ಕಾರುಣ್ಯಾತಿಶಯವನ್ನು ಸ್ತುತಿಮಾಡುತ್ತಾ , ಪರಮಾತ್ಮನು ತನ್ನ ಭಕ್ತರಿಗೆ ಎಷ್ಟು ಸುಲಭನು ಎನ್ನುವದನ್ನೂ ತಿಳಿಸಿದ್ದಾರೆ -
ಮಲಗಿ ಪರಮಾದರದಿ ಪಾಡಲು
ಕುಳಿತು ಕೇಳುವ ಕುಳಿತು ಮಾಡಲು
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ/
ಸುಲಭನೋ ಹರಿ ತನ್ನವರನರ-
ಘಳಿಗೆ ಬಿಟ್ಟಗಲನು ರಮಾಧವ-
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ//
     ಎಂದು ಪರಮಾತ್ಮನ  ಅಪಾರ ಕಾರುಣ್ಯಯವನ್ನು ಸ್ತುತಿಸಿದ್ದಾರೆ. ಇದನ್ನೇ ಶ್ರೀಬೃಹನ್ನಾರದೀಯ ಪುರಾಣದಲ್ಲಿ -
ಯಃ ಸ್ವಪಂಸ್ತು ಶಯನೇ ಹರಿಂ ಚಿಂತಯತೇ ನರಃ /
ಸ ಹರಿಸಂಕೀರ್ತನಂ ತಸ್ಯ ಸಂತಿಷ್ಠನ್ ಶೃಣುತೇ ಮುದಾ //
ಯಸ್ತಿಷ್ಠನ್ ಕೀರ್ತಯೇದ್ದೇವಂ ಭಕ್ತ್ಯಾ ಯುಕ್ತೋ ನರೋತ್ತಮಃ /
ಸ್ವಯಮುತ್ಥಾಯ ದೇವೇಶೋ ಭಕ್ತಸ್ಯ ಶೃಣುತೇ ಸ್ತವಮ್ /
ಯಃ ಸಮುತ್ಥಾಯ ಮತಿಮಾನ್ ಜಗದಾಧಾರಮೀಶ್ವರಮ್ /
ಕೀರ್ತಯೇದ್ವಿವಶೋ ಗೀರ್ಭಿರ್ಮಹಾಭಕ್ತಿ ಸಮನ್ವಿತಃ /
ಸ ಹರಿಃ ಶೃಣುತೇ ಸ್ತೋತ್ರಂ ನೃತ್ಯಮಾನೋsತಿಹರ್ಷಿತಃ /
ಯಃ ಪುಮಾನ್ ನೃತ್ಯಮಾನಃ ಸನ್ ವಿಲಜ್ಜೋ ಗೀಯತೇ ಯದಿ /
ಸ ಹರಿಃ ಪರಮಃ ಪ್ರೀತೋ ಪ್ರತ್ಯಕ್ಷೋ ಭವತಿ ಧ್ರುವಮ್// 
       ಅಂತ ಹೇಳಿದ ಮಾತಿನ ಅಂತರಾರ್ಥವನ್ನೇ ಶ್ರೀಕನಕದಾಸಾರ್ಯರು  ಇಲ್ಲಿ ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ಎನ್ನುವ ಸಾಲಿನಲ್ಲಿ ತುಂಬಾ ಅದ್ಭುತವಾಗಿ ತಿಳಿಸಿದ್ದಾರೆ.....

ಪರಮಾತ್ಮ ಭಕ್ತಜನರೋದ್ಧಾರ ಎನ್ನುವುದಕ್ಕೆ ಬಹಳಷ್ಟು ಹರಿದಾಸರ ಪದಗಳು ನಮಗೆ ಪರಿಚಯವೇ ಸರಿ...

 ಗುರುವಿನ ಮಹಿಮೆ ಗುರುವೇ ತಾ ಬಲ್ಲನು ಚಂದಮಾಮ 
ಮೂಢನಾದವನೇನು ಬಲ್ಲನು ಈ ಮಾತ ಚಂದಮಾಮ 

    ಪರಮಾತ್ಮನ  ಜ್ಞಾನವನ್ನು ತಿಳಿಸುವ ಸಚ್ಛಾಸ್ತ್ರಗಳಲ್ಲಿ ಸ್ವತಃ ತಾನು ಸಂಶಯರಹಿತನಾಗಿದ್ದು ಇನ್ನಿತರರ ಸಂಶಯಗಳನ್ನು ಪರಿಹರಿಸಿ ಶಿಷ್ಯರ ಚಿತ್ತವನ್ನೇ ಅಪಹರಣ ಮಾಡಿ ಆ ಪರಮಾತ್ಮನ  ಪಾದಾರವಿಂದಗಳಲ್ಲಿ ತಲ್ಲೀನಗೊಳಿಸುವವನೇ ನಿಜವಾದ ಗುರು. ಈ ಇಡೀ ಜಗತ್ತಿಗೇ ಗುರು ಎನಿಸಿರುವ ಜಗದ್ಗುರು ಎನಿಸಿರುವ ಆ ಪರಮಾತ್ಮನ  ಮಹಿಮೆಯನ್ನು ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಿಂದ ಹಿಡಿದು ಅವರ ಪರಂಪರೆಯಲ್ಲಿ ಬಂದಿರುವ ಪ್ರಾತಃಸ್ಮರಣೀಯರಾದ ಸಕಲ ಗುರುಗಳೇ ಬಲ್ಲರು ಹೊರತಾಗಿ ಇನ್ನಿತರ ಮೂಢಮತಿಗಳಿಗೆ ಜಗದ್ಗುರುವಿನ ಮಹಿಮೆ ತಿಳಿಯುವದಂತೂ ಅಸಾಧ್ಯ ಎನ್ನುತ್ತಿದ್ದಾರೆ ಶ್ರೀಕನಕದಾಸಾರ್ಯರು... ಅದಕ್ಕಾಗಿ ಸಚ್ಛಾಸ್ತ್ರಗಳಲ್ಲಿ ಶ್ರದ್ಧಾಭಕ್ತಿಯನ್ನು ಹೊಂದಿರುವ ಗುರುಗಳಿಂದ ಉಪದೇಶ ಪಡೆದುಕೊಂಡು ನಿರಂತರ ಸಾಧನೆಯಲ್ಲಿ ತೊಡಗು ಎಂಬ ಎಚ್ಚರಿಕೆಯ ಮಾತಿನಿಂದ ನಮ್ಮನ್ನು ಇಲ್ಲಿ ಎಚ್ಚರಿಸಿದ್ದಾರೆ . ಇದನ್ನೇ ತಂತ್ರಸಾರದಲ್ಲಿ - 
  ಸೋಪಾಸನಾಚ ದ್ವಿವಿಧಾ ಶಾಸ್ತ್ರಾಭ್ಯಾಸ ಸ್ವರೂಪಿಣಿ /
ಧ್ಯಾನರೂಪಾ ಪರಾಚೈವ// ಅಂತ ಎಚ್ಚರಿಸದರೆ......

 ಉಪನಿಷತ್ತುಗಳಲ್ಲಿ -
  ಸ್ವಾಧ್ಯಾಯಪ್ರವಚನಾಭ್ಯಾಂ ನ ಪ್ರಮದಿತವ್ಯಮ್ /
ತದ್ಧಿ ತಪಃ ತದ್ಧಿತಪಃ / ಸ್ವಧ್ಯಾಯ ಪ್ರವಚನೇ ಏವೇತಿ
ಸ್ವಾಧ್ಯಾಯಾನ್ ಮಾಪ್ರಮದಃ ಅಂತ ನಮ್ಮನ್ನು ಎಚ್ಚರಿಸಿದ್ದಾರೆ.....

 ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ 
ತಿಳಿದವರು ಪೇಳಿರಿ ಹಳೆಗನ್ನಡವ ಚಂದಮಾಮ 

      ಕನಕದಾಸರು ಹೇಳಿದ ಸಕಲ ಸಚ್ಛಾಸ್ತ್ರಗಳ ರಹಸ್ಯಪ್ರಮೇಯಗಳಿಂದ ಭರಿತವಾದ ಈ ಗುಟ್ಟನ್ನು ಜಗದ್ಗುರುವಾದ ಶ್ರೀಆದಿಕೇಶವ ಮಾತ್ರ ಬಲ್ಲನು... ವೇದ ಶಾಸ್ತ್ರಗಳನ್ನು ತಿಳಿದ ಜ್ಞಾನಿಗಳು ಈ ಮುಂಡಿಗೆ ಅರ್ಥವನ್ನು ಯೋಗ್ಯರಾದ ಸಜ್ಜನರಿಗೆ ಮಾತ್ರ ತಿಳಿಸಿ ಅವರನ್ನು ಸಾಧನಾ ಮಾರ್ಗದಲ್ಲಿ ತೊಡಗಿಸಿ ಎಂಬ ಕಿವಿಮಾತನ್ನೂ ಕೂಡ ಈ ಕೊನೆಯ ಸಾಲುಗಳಲ್ಲಿ ಹೇಳಿದ್ದಾರೆ. ಏಕಂದರೆ ಉಪನಿಷತ್ತಿನಲ್ಲಿ ಇಂತಹ ರಹಸ್ಯ ವಿಷಯಗಳನ್ನು ಅಶಿಷ್ಯ ಅಂದರೆ ಅಯೋಗ್ಯರಾದವರಿಗೆ ತಿಳಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ -
   ಅಶಿಷ್ಯಾಯ ನ ದೇಯಂ / ಯೋ ಯದಿ ಮೋಹಾದ್ದಾಸ್ಯತಿ / ಸ ಪಾಪೀಯಾನ್ ಭವತಿ // ಎನ್ನುವ ಉಪನಿಷತ್ತಿನ ಮಾತನ್ನೇ ಶ್ರೀಕನಕದಾಸರು ತಮ್ಮ ಈ ಪದ್ಯದ ಕೊನೆಯ ಸಾಲುಗಳಲ್ಲಿ ಮನ ಮುಟ್ಟುವಂತೆ ಅದ್ಭುತವಾದ ರೀತಿಯಲ್ಲಿ ತಿಳಿಸಿದ್ದಾರೆ.... 🙏🏽

     ನೋಡಿ.... ಹಿರಿಯ ದಾಸರ ಎಲ್ಲಾ ಪದಗಳು  ನೋಡುವವರಿಗೆ ಅಷ್ಟೇ  ಸರಳ ಹಾಗೂ ಬೇರೇಬೇರೇಯ ಅರ್ಥದಲ್ಲಿ  ಹೊಳೆಯುತ್ತವೆ... ಆದರೇ ಅದರ ಅರ್ಥ ನಮ್ಮಂತಹಾ ಪಾಮರಿರಗಂತೂ ಪರಮ ಪರಮ  ದುರ್ಲಭ.. 
ಶಾಸ್ತ್ರ, ಪುರಾಣೋಕ್ತಿಳ ಉದಾಹರಣೆ ಕೊಟ್ಟು ಹೊಂದಿಸಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಹೂರತು... ದಾಸಾರ್ಯರೆಲ್ಲರ ಅಂತರಾರ್ಥವನ್ನು ನಿಜವಾಗಿ ಅರೆಯುವುದು ಈ ಜನ್ಮಜನ್ಮಾಂತರಕ್ಕೆ ಆಗದ ವಿಷಯ...

ಒಟ್ಟಿನಲ್ಲಿ  ಈ ಪದದ ಮುಖಾಂತರ  ಶ್ರೀಕನಕದಾಸಾರ್ಯರು ಪುರಾಣರಾಜವೆಂದೆನಿಸಿರುವ ಶ್ರೀಮದ್ಭಾಗವತದ ಹಿರಿಮೆಯನ್ನು, ಮಾಹಾತ್ಮ್ಯವನ್ನು ನಮಗೆ ಇಷ್ಟು  ಅದ್ಭುತ ರೀತಿಯಲ್ಲಿ... ಶುಕವೆಂಬ ಹಕ್ಕಿ ತಿಂದ ರುಚಿಯಾದ ಹಣ್ಣು ಅಂತ ... ಆ ಹಣ್ಣನ್ನು ಪ್ರಸಾದರೂಪೇಣಾ ನಮಗೆ ನೀಡಿದ್ದಾರೆ... ಹೀಗಾಗಿ... ಇಂದಿನಿಂದಾದರೂ... ಶ್ರೀಮದ್ಭಾಗವತಾ ಶ್ರವಣಾಸಕ್ತರಾಗೋಣ ಶ್ರೀಮದ್ವೇದವ್ಯಾಸದೇವರ ಅನುಗ್ರಹ ಕಟಾಕ್ಷ  ವೀಕ್ಷಣಾ ಲಹರಿಯಲಿ ವಿಹಾರಮಾಡುವಂತೇ... ಈ ಕೃತಿಯ ಅರ್ಥಾನುಸಂಧಾನಕ್ಕೆ ಸರಿಯಾದ ಶ್ಲೋಕಗಳನ್ನು ದಯಪಾಲಿಸಿದ ಶ್ರೀ ಹಂಪಿಹೊಳಿ ಆಚಾರ್ಯರಿಗೆ ಮತ್ತೊಮ್ಮೆ ನಮಸ್ಕಾರಗಳು ತಿಳಿಸುತ್ತಾ.....

ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀರಮಣನಾದ ವೆಂಕಪ್ಪನ ಪದಪದ್ಮಗಳಲ್ಲಿ ಭಕ್ತಿಯಿಂದ ಸಮರ್ಪಣೆ ಮಾಡುತ್ತಾ... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 
*****