ಪಾಲಿಸೊ ಪಂಕಜನೇತ್ರ ರಘು
ಕುಲಾಂಬುಧಿ ಚಂದ್ರ ಶ್ರೀ ರಾಮಚಂದ್ರ ll ಪ ll
ಒಂದೇ ಭಾಷಣ ನಿನಗೊಂದೇ ಮಾರ್ಗ ಸಾಕು
ಒಂದೇ ಸ್ಥಾನದೊಳಾಶ್ರಿತರನೇ ನಿಲ್ಲಿಸುವಿ
ಒಂದೇ ಬಾರಿಯೆ ಕೊಟ್ಟುದ್ಧರಿಸುವೆ ಭೃತ್ಯರ
ಒಂದೇ ಪತ್ನಿಯು ನಿನಗೆಂಬುದು ಬಿರುದು ll 1 ll
ನಿನ್ನ ತಮ್ಮನು ನಿನ್ನ ರಾಣಿಯ ಭೃತ್ಯನು
ನಿನ್ನಂಥ ಭಾಗ್ಯ ಮತ್ತೆಲ್ಲಿ ತೋರುವುದು
ಘನ್ನ ಮಹಿಮ ನೀನು ಮಲತಾಯಿ ನುಡಿಯಲು
ತನ್ನ ರಾಜ್ಯಗಳನ್ನು ತಮ್ಮನಿಗೊಪ್ಪಿಸಿದೆ ll 2 ll
ಭರತನು ನಿನ್ನಡಿಗಾಗಿ ಬೇಡಿದರೂ ನೀ
ಹರುಷದಿಂದಲಿ ಕಾಲಾಂತರವ ಪೇಳಿರುವಿ
ಮರಳಿ ರಾಜ್ಯದಿ ಬಂದು ರಾಜೇಶ ಹಯಮುಖ
ಕರುಣಿಸಿ ಪಟ್ಟಾಭಿಷಿಕ್ತನಾಗಿರುವಿ ll 3 ll
***