Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಪ್ರಾರ್ಥನಾ ಭಾಗ ಸುಳಾದಿ
( ಆಪತ್ತು ಪರಿಹಾರ , ವಿಷನಿವಾರಣ ವಿಷಯಕ ಪ್ರಾರ್ಥನಾ . ವಿಷವೆಂದರೆ ಸಂಚಿತ - ಆಗಾಮಿ ಕರ್ಮಗಳು .)
ರಾಗ ನಾಟ
ಧ್ರುವತಾಳ
ಸೇರಿದೆನೊ ಬಂದು ಸಂಕಟದಲ್ಲಿ ನೊಂದು
ತಾರಿ ತುಟಿಯಾರಿ ದಾನವಾರಿ
ಘೋರವಾದವತಿ ಕ್ರೂರರು ಒಳಗೆ ಐ -
ವಾರು ಒಂದಾಗಿ, ಮೆದ್ದಾನು ಚನ್ನಾಗಿ
ನೂರಿ ನೂರಿ ಬೇರು ಒಲ್ಲನೆಂದರೆ ಮೂರು
ಭಾರಿ ಕೂಡಿಸಿದರು ಒಂದೊಂದು ಶೇರು
ಪೂರಾತನ ನಾಮ ವಿಜಯವಿಠ್ಠಲ ಪ್ರೇಮ
ಆರೈದು ಸಲಹುವವರ ಕಾಣೆ ಬಲ್ಲವರ ॥ 1 ॥
ಮಟ್ಟತಾಳ
ವಿಷಪಾನಗಳಲ್ಲಿ ನಸುಗುಂದಿದೆ ನವದು
ಮುಸುಕಿತು ರೋಗ ಕಾಣಿಸಲಾರದೆ ಉ -
ಬ್ಬಸ ಬಡುತಲಿಪ್ಪೆ
ಅಶ್ವತ್ಥನಾಮಕನೆ ವಿಜಯವಿಠ್ಠಲನೆ ಎನ್ನ
ಅಸುವನು ನಿರ್ವಹಿಸಲಾರೆನೋ ಇನ್ನೂ ॥ 2 ॥
ರೂಪಕತಾಳ
ಎಂದಿಗಾದರು ಒಮ್ಮೆ , ಪುಣ್ಯವಂತರಿಂದ
ಒಂದು ದಿವಸಾಮೃತವ ಪಾನವನು ಮಾಡೆ
ಬಿಂದುಮಾತುರ ಕಾಯಕ ಯಾಗಗೊಡದೆ
ಮುಂದುಗೆಡಿಸುತಿದೆ ಮುನಿದು ಮುನಿದು ನಿತ್ಯ
ಬೆಂದು ಹಸಿಮರ ತುದಿಯಲ್ಲಿ ಕುದಿವಂತೆ
ಕಂದಿ ಕುಂದಿಸಿ ಎನ್ನ ತಿಕ್ಕಿಮುಕ್ಕುತಲಿವೆ
ತಂದುಕೊಂಬೆನೆ, ಜೀರಣಕೆನಲು, ಸುವರ್ಣ
ಬಿಂದು ವಿಜಯವಿಠ್ಠಲ ನೆಂದೆಂದಿಗೆ ಎ -
ನ್ನಿಂದಾಗದು ದೇವ ॥ 3 ॥
ಝಂಪಿತಾಳ
ವಿದ್ಯ ಒಂದು ಇಲ್ಲ ಮುದ್ದೆ ಘಳಿಸಿದಾದಿಲ್ಲ
ಉದ್ದಿನಷ್ಟು ಸೇವೆ ಮಾಡುವನು ಅಲ್ಲ
ಉದ್ದಕ್ಕೆ ನಿನಗಡ್ಡ ಬಿದ್ದು ದೈನ್ಯದಲಿ, ಪಾ -
ದದ್ವಯಕ ಎರಗುವೆನು ಉದಧಿಶಯನ
ಉದ್ಧಾರವನು ಮಾಡು ಕ್ಷುದ್ರರಿಕ್ಕಿದ ವಿಷದ
ಮದ್ದು ಪರಿಹರಿಸುವದು ಮಧುಸೂದನ
ಸದ್ಗತಾನಾಮ ಶ್ರೀವಿಜಯವಿಠ್ಠಲರೇಯ
ಹೊದ್ದಿದೆನು ಎನ್ನ ಅವಿದ್ಯ ಮಾಡದಿರು ॥ 4 ॥
ತ್ರಿವಿಡಿತಾಳ
ಘನ ವೈದ್ಯ ನೀನೆ ಒಬ್ಬನೆ ಎಂದು ಸ್ಮೃತಿಯಿಂದ
ಅನಿಮಿಷಾವಳಿ ಮುನಿಸನಕಾದ್ಯರು
ವಿನಯದಲಿ ಪೇಳಲರ್ಜುನ ಮಿಕ್ಕರವರು ಆ -
ರ್ಜನೆ ಮಾಡಿ ವಿಷಪಾನವನು ಪರಿಹಾರದಿಂದ
ತನು ಶುದ್ಧರಾದರೆಂಬೋದು ಮನಕೆ
ಧನವಂತ್ರಿ ವೈದ್ಯನೆ ನಿನಗೆ ತೋರಿತು ಕಾಣೊ
ಪುನರ್ವಸುನಾಮ ಸಿರಿ ವಿಜಯವಿಠ್ಠಲ ಎನ್ನ
ಗಣನೆ ಮಾಡುವದು ಸುಜನರ ತರುವಾಯ ॥ 5 ॥
ಅಟ್ಟತಾಳ
ನಾರಾಯಣನೆಂಬ ವೀರವೈದ್ಯನ ಕಂಡೆ
ಕಾರುಣ್ಯದಲಿ ತನ್ನ ಚರಣಾಂಬಿಲಿ ಚಿಂ -
ತಾರುತುನ ಮಾತ್ರೆ ಅರದು ಪೂರ್ಣವಾಗಿ
ಕಾರಕೊಟ್ಟನು ನೋಡು ಕರದು ಸಮೀಪಕ್ಕೆ
ಶಾರೀರವೆ ಉಂಟು, ಎದಿಗೆ ಹತ್ತಿದ ಮದ್ದು
ಕಾರಿಸಿತು ಬಹು ವ್ಯಾಪ್ತವಾಗಿದ್ದರು
ಪೂರಾಯಿತೆ ನಾಮಾ ವಿಜಯವಿಠ್ಠಲ ಮುಂದೆ
ಪೋರೆವ , ದುರುಳರು ಸೇರದಂತೆ ಒಲಿದು ॥ 6 ॥
ಆದಿತಾಳ
ಮುಂದಾದರು ದುರುಳ ಇಂದ್ರಿಗಳಿಂದ ಬಪ್ಪ
ವೃಂದ ರೋಗಗಳಿಗೆ ಇಂದು ತನ್ನಯ ದಯವೆಂಬೊ
ಸಿಂಧೂರ ಮಾತ್ರಿಯನ್ನು ತಂದು ಲೇಪಿಸಿದ, ಗೋ -
ವಿಂದ ವಿಜಯವಿಠ್ಠಲ ಬಂದು ಎನ್ನ ನಾಲಿಗ್ಗೆ ॥ 7 ॥
ಜತೆ
ಬಹು ದಿನದಲಿ ಇದ್ದ ಭವರೋಗ ಹಿಂಗಿತು
ಸಹಿ ವಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ ॥
********