Showing posts with label ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ others. Show all posts
Showing posts with label ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ others. Show all posts

Friday, 27 December 2019

ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ others

ಸಾವೇರಿ ರಾಗ ತ್ರಿವಿಡೆ ತಾಳ

ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ
ಕಷ್ಟ ಬಂದೊದಗಿ ದುಃಖಿಪ ಸಮಯಕಲ್ಲದೆ||ಪ||

ಸತಿಯು ಸುತ ಗೃಹಾದಿಗಳೆಂಬಿರುವ ಸಾಧನದಿ
ಮತಿಗೆಟ್ಟು ಮೋಹವನು ಬೆರೆಸಿಕೊಳುತ
ಗತಿಯ ಕಾಣದೆ ಕಡೆಗೆ ಅತಿದುಃಖವೆಂಬ ಸಂ-
ತತಿಯೊಳಡಗಲು ಮತ್ತೆ ಮತಿ ಬರುವುದಲ್ಲದೆ ||೧||

ಸಾಧು ಸಜ್ಜನರುಗಳು ದಯದೊಳಗೆ ಅರಹುತ್ತಿಹ
ಬೋಧೆಗಳಿಗನುಸರಿಸದಂತೆ ನಡೆದು
ಹಾದಿ ತಪ್ಪಿ ಕುಣಿಯಲಿ ಬಿದ್ದ ಇಭದಂತೆ
ಆದಿತ್ಯ ಸುತ ಬಾಧಿಸುವ ಸಮಯಕಲ್ಲದೆ ||೨||

ಬರಿದೆ ಮಾಯ ಭ್ರಮೆಯೊಳು ಮೆರೆದು ನಿನ್ನಲಿ ನೀನು
ಕರಗದೆಯೆ ಅರಿತಿರುವ ಪರಿಯ ಕೇಳು
ಪರಕೆ ಪರತರನಾದ ವರದ ಸಿರಿ ನಿತ್ಯಾತ್ಮ
ಚರಣ ಸ್ಮರಿಸುತ್ತಿರು ನರಕಕೊಳಗಾಗದೆ ||೩||
*******