ಗೋದಾವರಿ ಎನಗೆ ಶ್ರೀಧರನ ತೋರೆ ಪ.
ನೀ ದಯದಿ ಸಲಹೆನ್ನ ಮಾಧವಗೆ ಪ್ರಿಯೆ ಅ.ಪ.
ಸ್ವಚ್ಛವರ್ಣಳೆ ಬಹು ಹೆಚ್ಚಾಗಿ ಪರಿಯುವಳೆ
ಮುಚ್ಚಿರುವ ಮಲಗಳನು ದೂರಮಾಡೆ
ಅಚ್ಯುತನ ಪದವೀವ ಹೆಚ್ಚಿನಾ e್ಞÁನವನು
ಸ್ವಚ್ಛತನದಲಿ ಕೊಟ್ಟು ಮೆಚ್ಚಿ ಎನ್ನನು ಸಲಹೆ 1
ಧರೆಯ ಜನರು ನಿನ್ನೊಳ್ ಬರುತ ಮಲಗಳ ತೊಳೆಯೆ
ಅರಿತು ಅದನು ಮನದಿ ಪರಿಹರಿಸಿಕೊಳಲು
ಪರಮ ಭಾಗವತರ ವರ ಮಂದಿರಕೆ ಪೋಗಿ
ವರಹ ವೆಂಕಟಗಿರಿಯೊಳ್ ಸ್ಥಿರವಾಗಿ ನಿಂತೆ 2
ಬರುತ ದಾರಿಯೊಳೆನಗೆ ಸ್ವಪ್ನದಲಿ ತೋರಿದೆ
ವರ ದಿವ್ಯರೂಪವನು ನಾರಿಮಣಿಯೆ
ಸರಿಗೆ ಕಂಕಣ ಮುತ್ತಿನಾ ಬುಗುಡಿಯನೆ ಧರಿಸಿ
ವರ ಮುತ್ತೈದೆಯರಿಬ್ಬರಂದದಲಿ ತೋರಿದೆ 3
ಮುಕ್ಕೋಟಿ ಗಂಧರ್ವ ದೇವರ್ಕಳೂ ಬರುತಿರಲು
ಅಕ್ಕರದಿ ತಂಗಿಯನೆ ಒಡಗೂಡುತ
ಲಕ್ಕುಮಿ ಸ್ವಾಮಿ ಶ್ರೀ ಪುಷ್ಕರಣಿ ಸಾರಿರಲು
ಉಕ್ಕುವೋ ಉಲ್ಲಾಸದಿಂದ ತೆರಳಿದೆಯೆ 4
ಜಿಷ್ಣು ಸಖನ ದಿವ್ಯ ಪಟ್ಟಣವ ಸೇರಲು
ಕೃಷ್ಣವೇಣಿಯ ಒಡಗೂಡಿ
ವಿಷ್ಣುಪಾದೋದ್ಭವೆಗೆ ಸರಿಯೆನಿಸಿ ಗೋಪಾಲ
ಕೃಷ್ಣವಿಠ್ಠಲನ ಬಹುನಿಷ್ಠೆಯಿಂ ಧ್ಯಾನಿಸುವೆ 5
****