Showing posts with label ಪರಮ ಬಲವಂತ guruvijaya vittala ankita suladi ಹರಿ ಕರುಣ ಸುಳಾದಿ PARAMA BALAVANTA HARI KARUNA SULADI. Show all posts
Showing posts with label ಪರಮ ಬಲವಂತ guruvijaya vittala ankita suladi ಹರಿ ಕರುಣ ಸುಳಾದಿ PARAMA BALAVANTA HARI KARUNA SULADI. Show all posts

Wednesday, 19 May 2021

ಪರಮ ಬಲವಂತ guruvijaya vittala ankita suladi ಹರಿ ಕರುಣ ಸುಳಾದಿ PARAMA BALAVANTA HARI KARUNA SULADI

Audio by Mrs. Nandini Sripad


ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ  ಶ್ರೀಹರಿ ಕರುಣ ಸುಳಾದಿ 

 (ಗುರುವಿಜಯವಿಟ್ಠಲ ಅಂಕಿತ)


(ಹರಿ ಪ್ರಸಾದ ಹರಿ ಕರುಣವೆ ಮುಖ್ಯ , ಗರ್ವ ಮದ ಸರ್ವಥಾ ತಾಳಲಾಗದು. ಗರ್ವ ಮಾಡಿದುದಕೆ ಹರಿಯ ಕುರುಹು ಮರದೆ. ಇತ್ಯಾದಿ ಪೂರ್ವಜನುಮ ಐತಿಹಾಸಿಕ ಪ್ರಾರ್ಥನಾ.) 


 ರಾಗ ದರ್ಬಾರಿಕಾನಡ 


 ಧ್ರುವತಾಳ 


ಪರಮ ಬಲವಂತನೆಂಬೊ ಗರ್ವ ತಾಳಿದದಕೆ

ನಿರುಪಮ ನಿರ್ಬಲನಾದೆನಿಂದು

ಸಿರಿ ಅಜ ಭವರಿಗೆ ಸಿಲುಕದ ಮಹಿಮನ್ನ

ಕರವಶನಾದ ಆಪ್ತನಂಬೊ ಮದದಿ

ಸರಿಗಾಣೆನೆನುತಲಿ ಸಥೆ ಮಾಡಿದವರೆನ್ನು

ಹರಿ ನಿನ್ನ ಕುರುಹು ಒಮ್ಮೆ ಜನುಮದೊಳಗೆ 

ಅರಸಿ ನೋಡಿದರೆ ಕಾಣದಿದ್ದವನಾದೆ

ತರಣೇಂದು ಕೋಟಿ ತೇಜ ಮಹಾರಾಜಾ

ನಿರುಪಮ ಸೌಭಾಗ್ಯವಂತನೆಂದಾದಕೆ

ದಾರಿದ್ರ ದೋಷದಿಂದ ಅಧಿಕನಾದೆ 

ನರರಿಂದ ವಂದ್ಯನೆಂದು ಮನದಿ ಹಿಗ್ಗಿದುದಕೆ

ಧರೆಯೊಳು ತೃಣಸಮನಾಗದಾದೆ

ವೀರರಾದವರು ಎದುರು ನಿಲ್ಲರೆಂಬೊ ನಿ -

ರ್ಭಾರವಾದ ಅಹಂಕಾರ ಮಾಡಿದುದಕೆ 

ಹೊರಗೆ ಒಳಗೆ ದುರುಳ ಸಂಗದೊಳಗೆ ಸಿಲ್ಕಿ

ಪರಿಶ್ರಮದಿಂದ ಬಳಲಿದೆನೋ

ಕರುಣ ಮಾಡಿದ ಬ್ರಹ್ಮಾದಿ ಸುರರೆಲ್ಲ

ಪರಿಪೂರ್ಣರೆನಿಸುವರು ಪದವಿಯಿಂದ 

ಸರಿದು ನೋಡುವಾಗ ಶ್ವಪಚರಿಂದಧಿಕವಾದ

ವರವಾದ ಕಷ್ಟತ್ವ ಐದುವರೊ

ಪರಮೇಷ್ಠಿ ನಾಮರೂಪ ಗುರುವಿಜಯವಿಟ್ಠಲರೇಯ 

ಸರಿಗಾಣೆನಯ್ಯಾ ನಿನ್ನ ಶಾಸನಕ್ಕೆ ॥ 1 ॥ 


 ಮಟ್ಟತಾಳ 


ನಿನ್ನ ಕರುಣವೆ ಜ್ಞಾನ ನಿನ್ನ ಕರುಣವೆ ಭಕುತಿ 

ನಿನ್ನ ಕರುಣ ವಿರಕುತಿ ನಿನ್ನ ಕರುಣವೆ ಧರ್ಮ

ನಿನ್ನ ಕರುಣವೆ ಧೈರ್ಯ ನಿನ್ನ ಕರುಣವೆ ಶೌರ್ಯ

ನಿನ್ನ ಕರುಣವೆ ಶುಭ ನಿನ್ನ ಕರುಣವೆ ಲಾಭ 

ನಿನ್ನ ಕರುಣವೆ ಸಕಲ ಸಂಪದವೆನಿಪದು 

ಪನ್ನಗತಲ್ಪ ಗುರುವಿಜಯವಿಟ್ಠಲರೇಯ 

ನಿನ್ನ ಕರುಣವ ತಪ್ಪಲಿದರೊಳಗೊಂದಿಲ್ಲ ॥ 2 ॥ 


 ತ್ರಿವಿಡಿತಾಳ 


ನಿನ್ನ ಕರುಣವೆ ನಿಖಿಳ ನಿಧಿಯೊ ಎನಗೆ ದೇವ

ನಿನ್ನ ಕರುಣವೆ ಸಕಲ ಸಂಭ್ರಮವೊ

ನಿನ್ನ ಕರುಣವೆ ನಿರುಪಮ ಜಯವೆನಗೆ

ನಿನ್ನ ಕರುಣವೆ ಸಾರ ಸುಖವೊ ದೇವ

ನಿನ್ನ ಕರುಣವೆ ಈಹ ಸೌಖ್ಯವೆನಿಪದು 

ನಿನ್ನ ಕರುಣಕೆ ಜನರು ಮನ್ನಿಪರೊ

ಪನ್ನಗಾರಿವಾಹ ಗುರುವಿಜಯವಿಟ್ಠಲರೇಯ 

ನಿನ್ನ ಕರುಣವೆ ತೊಲಗಲೆಂತು ಸುಖವೊ ॥ 3 ॥ 


 ಅಟ್ಟತಾಳ 


ನಿನ್ನ ಕರುಣವೆ ಸಾಧನವೆನಿಪುದು

ನಿನ್ನ ಕರುಣದಿಂದ ಸುರರು ಮನ್ನಿಸುವರು

ನಿನ್ನ ಕರುಣದಿಂದ ನರಕ ಯಾತನೆ ದೂರ

ನಿನ್ನ ಕರುಣವಿದ್ದ ಸ್ಥಳದಲ್ಲಿ ಯಮನಾಳು

ಮನ್ನಾದಿ ನಮಿಪರು ತಿರುಗಿ ನೋಡದಲೆ

ನಿನ್ನ ಕರುಣವೆ ಅಪುನರಾವರ್ತಿ

ಚಿನ್ಮಯ ಲೋಕವು ತಂದೀವದೆಂದಿಗೂ

ನಿನ್ನ ಕರುಣಕ್ಕೆ ನೀನೆ ಕ್ಷಣವಗಲದೆ ಹೃದಯ

ವನ್ನಜಾಂಡ ಮಧ್ಯದಿ ನಿರುತ ಪೊಳೆವ ದೇವ

ಚನ್ನ ಪ್ರಸನ್ನ ಶ್ರೀಗುರುವಿಜಯವಿಟ್ಠಲರೇಯ 

ನಿನ್ನ ಕರುಣವ ಜರಿಯೇ ವ್ಯತಿರೇಕವೆಲ್ಲವೂ ॥ 4 ॥ 


 ಆದಿತಾಳ 


ಇನಿತು ತಿಳಿಯದಲೆ ಭವದೊಳಗೆ ಬಂದು

ಬನ್ನ ಬಟ್ಟೆನು ನಾನು ಬಲು ವಿಧದಿಂದಲಿ

ಅನ್ನಾದಿ ಪ್ರಾರಬ್ಧ ಇದಕೆ ಸೂಚನೆ ಮಾಡಿ

ನಿನ್ನ ಇಚ್ಛೆಯಲಿಂದ ಕಲಿಕೃತ ಕಲ್ಮಷಾದಿ

ಜನ್ನಿತ ಮಮಕಾರ ಬಂದೊದಗಿದ ಕಾರಣಕೆ

ನಿನ್ನ ಕರುಣವಿಲ್ಲದಲೆ ಪೂರ್ವೋಕ್ತವಾದ ಗುಣಕ 

ಭಿನ್ನವಾದ ವ್ಯತಿರೇಕ ಅನುಭವ ಮಾಡಿಸಿದಿ

ಅನಂತ ಜನ್ಮವಾದರು ಬರಲೇಕೆ

ನಿನ್ನ ಕರುಣ ಅಗಲದಿರಲಿ ಇನ್ನೆಂದಿಗಾದರು 

ಉನ್ನತ ಮಹಿಮ ಗುರುವಿಜಯವಿಟ್ಠಲರೇಯ ಪ್ರ -

ಸನ್ನಾಗುವದು ಅವ್ಯವಧಾನದಿಂದ ॥ 5 ॥ 


 ಜತೆ 


ನಿನ್ನ ಕರುಣವೆ ಸಕಲ ಸೌಭಾಗ್ಯಪದ ಪ್ರಾಪ್ತಿ

ಭಿನ್ನ ಜೀವರ ದಾತಾ ಗುರುವಿಜಯವಿಟ್ಠಲರೇಯ ॥

******