Showing posts with label ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ krishnavittala. Show all posts
Showing posts with label ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ krishnavittala. Show all posts

Monday, 2 August 2021

ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ankita krishnavittala

ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ಪ


ಗುಲ್ಲು ಮಾಡದೆ ಬೇಗ ನಿಲ್ಲೈಯ ಮನದಲಿ ಅ.ಪ


ಸಿರಿಕಾಂತ ನೀನಾಗಿ ತಿರುಪೆ ಬೇಡಿದೆ ಯಾಕೆ

ಪರಮ ಪುರುಷನು ಎನಿಸಿ ತುರುವ ಕಾಯ್ದೇಕೆ

ಪರಿವಾರ ಸುರರಿರಲು ಕರಡಿಕಪಿಗಳ ಸೈನ್ಯ

ನೆರವು ಯಾತಕೆ ನಿನಗೆ ಚರಿತೆ ಸೋಜಿಗವಯ್ಯಾ 1

ಅಷ್ಟಕರ್ತನಿಗೇಕೆ ಸಂತತವು ಜಪತಪವು

ಪಟ್ಟ ಮಹಿಷಿಯರಿರಲು ಕುಬ್ಜೆಕೂಡಿದೆ ಯಾಕೆ

ಉಟ್ಟು ಸೀರೆಯ ಖಳರ ವಂಚಿಸಿದ ಬಹು ಶೂರ

ನಿಷ್ಟೆಯಿಂದಲಿ ಬಲಿಯ ಬಾಗಿಲನು ಕಾಯುವನೆ 2

ಬೆಣ್ಣೆ ಕಳ್ಳರ ಗುರುವೆ ಹೆಣ್ಣು ಕದ್ದವ ನೀನು

ಮಣ್ಣು ಮಾಡಿದೆ ಕುಲವ ಯೆಂಜಲುಂಡವ ದೊರೆಯೆ

ಅಣ್ಣ ತಮ್ಮಂದಿರಲಿ ಕಲಹವನು ವÀಡ್ಡುತಲಿ

ನುಣ್ಣ ಗೆಲ್ಲರ ಮಾಡಿ ನಿಷ್ಕಪಟಿಯೆನಿಸಿದೆಯೊ 3

ಅನ್ಯರಿಗೆ ಉಪಕಾರಿ ಅನನ್ಯರಾ ಶತ್ರುವು

ಬೆನ್ನು ಬಿದ್ದವಗೆ ಭವ ಭ್ರಷ್ಟತ್ವ ನೀಡುವೆಯೊ

ನಿನ್ನಾಳ ನಿಖಿಳರಿಗು ತೊರ್ಗೊಡದ ಬಹುಗೂಢ

ಕಣ್ಣು ಕೈ ಕಾಲೆಲ್ಲ ಸಮವೇನೆ ನಿನಗಯ್ಯ 4

ದೊಡ್ಡ ದೇವನು ಎನಿಸಿ ಗುಡ್ಡವೇತಕೆ ಹೊಕ್ಕೆ

ಗಿಡ್ಡರೂಪವ ತೋರಿ ದೊಡ್ಡದಾಗುತ ಎಂದು

ಅಡ್ಡಿಯಿಲ್ಲದೆ ಬಲಿಯ ಹೆಡ್ಡನೆನಿಸಲು ಬಹುದೆ

ಗುಡ್ಡೆಯಿಲ್ಲದೆ ಚರಿಪ ವಡಲು ಬಗೆದಾ ಘೋರ 5

ಪೂಡವಿಗೊಡೆಯನು ಎನಿಸಿ ಹಡೆದ ಮಾತೆಯ ಕಡಿದೆ

ಅಡವಿ ಬೇರನು ತಿಂದೆ ಕಡಲೊಳಗೆ ಸಂಚರಿಪೆ

ಮಡದಿಯನು ಕಳಕೊಂಡು ಹುಡುಕುತಲಿ ತಿರುಗಿದೆಯೋ

ಸಡಗರದಿ ಹಯವೇರಿ ಕೆಡುಕು ಕಡಿಯುವೆಯಂತೆ 6

ನಾಮಕುಲಗೋತ್ರಗಳ ನೆಲೆಯಕಂಡವರಿಲ್ಲ

ಸಾಮಸರಿ ನಿರ್ಗುಣವು ಪೂರ್ಣಗುಣ ನೀನಂತೆ

ವಾಮನೀನಾವರಿಸಿ ವಳ ಹೊರಗೆ ಲೋಕಗಳ

ನೇಮದಿಂ ಕಾಯುವನು ಪುಡುಕಿದರು ಸಿಗೆಯೇಕೇ 7

ಮಂಗಳಾಂಗನು ಅಂತೆ ಲಿಂಗವರ್ಜಿತನಂತೆ

ಶೃಂಗಾರರಸನಂತೆ ಭಂಗರಹಿತನು ಅಂತೆ

ಲಿಂಗವೆರಡೂ ಅಂತೆ ಸಿಸ್ಸಂಗ ನೀನಾಗಿ

ಅಂಗದಲಿ ಅಂಗನೆಯ ಧರಿಸಿ ಮೆರೆಯುವೆಯೇಕೆ 8

ವೇದ ಬೋಧೆಯನಿತ್ತಗಾಧ ವರ್ಜಿತ ಮಹಿಮ

ಮೋದ ಮಯ ನೀ ನಿನ್ನ ನಾದಿನಿಯ ಬೆರೆದೇಕೆ

ಸಾಧುಗುಣಪೂರ್ಣ ಭಾನುವನು ಮರೆ ಮಾಡಿ

ಮೈದುನನ ಸಲಹಿದ್ದು ಬಹುನ್ಯಾಯ ವೇನೈಯ್ಯ 9

ಹಾಲು ಕೊಟ್ಟವಳನ್ನು ಲೀಲೆಯಿಂದಲಿ ಕೊಂದೆ

ಶೀಲಸತಿಯಳ ಬೆರದು ವ್ರತವಳಿದು ಪರವಿತ್ತೆ

ಕಾಲನಾಮಕನಾಗಿ ಜಗವೆಲ್ಲ ನುಂಗುವನೆ

ಹೇಳುವರು ಕೇಳುವರು ನಿನಗಿಲ್ಲವೇನೈಯ್ಯಾ 10

ಏನೆಂದು ವರ್ಣಿಸಲಿ ನಿನ್ನಯ ವಗತನವ

ಮಾನ್ಯ ಸತಿ ಚಂಚಲೆಯು ಮಗಳ ಮಾರ್ಗವುಡೊಂಕು

ಮಾನಾಭಿಮಾನಗಳ ಬಿಟ್ಟವರೆ ಪರಿವಾರ

ನೀನಿರದಠಾವಿಲ್ಲ ನಿನಗಿಲ್ಲ ತುದಿಮೊದಲು 11

ಸರ್ವಜ್ಞನಾದವಗೆ ಸಾಂದೀಪ ಗುರುವೇಕೆ

ಸರ್ವ ನಾಮವು ಕೂಡೆ ನಾಮಕರಣವು ಏಕೆ

ಸರ್ವಸ್ವಾಮಿಯು ಎನಿಸಿ ಸಾರಥಿಯು ಆದೇಕೆ

ಸರ್ವ ತೋಮುಖ ನೀನು ಜಗವಿಲಕ್ಷಣ ನೈಯ್ಯಾ12

ಒಬ್ಬರಲಿ ನೀಜನಿಸಿ ಮತ್ತೊಬ್ಬರಲಿ ನೀ ಬೆಳೆದೆ

ತಬ್ಬಲಿಯೆ ವಾಸ್ತವದಿ ಉಬ್ಬಿಳಿತವರ್ಜಿತವೆ

ಅಬ್ಬಬ್ಬ ಬ್ರಹ್ಮಾಂಡ ಹಬ್ಬಿ ನಡೆಸುವ ಧೀರ

ಕೊಬ್ಬಿದಾ ಖಳಗಂಜಿ ಮಧುರೆಯನು ತೊರೆದೇಕೊ 13

ಮೇದಿನಿಗೆ ನೀ ಸ್ವಾಮಿ ಮದುವಾದೆ ಮಗಳನ್ನು

ಬೈದವಗೆ ಗತಿಯಿತ್ತೆ ಭಕ್ತರಿಗೆ ಕೂಳಿಲ್ಲ

ಮೋದ ಮಯ ನುಂಡುಣಿಸಿ ನಿರ್ಲೇಪನೀ ನಿರ್ಪೆ

ವಿದುರ ನೌತಣ ಕೊಂಡೆ ಕನ್ಯೆಯಲಿ ನೀ ಬಂದೆ 14

ಜಯ ಮುನಿ ಹೃದಯದಲಿ ವಾಯುವಿನಂತರ ದಿರ್ಪ

ಶ್ರೀಯರಸ ತಾಂಡವ ಕೃಷ್ಣವಿಠಲನೆ ನೀನು

ಮಾಯಾವಿ ತೋರಗೊಡೆ ನಿಜಮರ್ಮಖಳಜನಕೆ

ಜೀಯನೆ ಮೊರೆಹೊಕ್ಕೆ ನಿನ್ನಿರವ ತೋರೈಯ್ಯಾ 15

****