ದಾಸರ ನರಸಿಂಹ | ಶ್ರೀಹರಿ
ದಾಸರ ನರಸಿಂಹ ಪ.
ಯೊಗಾ ನರಸಿಂಹ | ಕರಿಗಿರಿ
ಭೋಗಾ ನರಸಿಂಹ
ಆಗಲೆ ಸುರಿಯುವ ಮಳೆಯನು ನಿಲ್ಲಿಸಿ
ಬೇಗನೆ ಕೈಕೊಂಡ ಉತ್ಸವ ನರಸಿಂಹ 1
ಶಾಂತಾ ನರಸಿಂಹ | ಪ್ರಹ್ಲಾ-
ದಾಂತರ ನರಸಿಂಹ
ನಿಂತು ಹೆಜ್ಜೆ ಹೆಜ್ಜೆಗೆ ಆರತಿ ಕೊಂಡು
ಸಂತಸಪಡಿಸಿದ ಗುರುಗಳ ನರಸಿಂಹ 2
ಕಾಮಿತ ನರಸಿಂಹ | ಪರಮ
ಪ್ರೇಮದ ನರಸಿಂಹ
ಸ್ವಾಮಿ ತಂದೆ ಮುದ್ದು ಮೋಹನದಾಸರ
ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ 3
ಭಕ್ತರ ನರಸಿಂಹ | ಭವಭಯ
ಒತ್ತುವ ನರಸಿಂಹ
ಭಕ್ತಿ ಭಾವದಿಂದ ಭಜನೆಯ ಮಾಳ್ಪರÀ
ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ 4
ಸುಲಭ ನರಸಿಂಹ | ನೀ ಬಹು
ದುರ್ಲಭ ನರಸಿಂಹ
ಒಲಿಯುವ ಗೋಪಾಲಕೃಷ್ಣವಿಠ್ಠಲ ಹರಿ
ನೆಲಸಿ ಹೃದಯ ಮಂದಿರದಲಿ ನರಸಿಂಹ 5
****