Showing posts with label ಶ್ರೀಭಾಗವತ ಮಹಿಮೆ ಬಣ್ಣಿಸಲಳವೇ others. Show all posts
Showing posts with label ಶ್ರೀಭಾಗವತ ಮಹಿಮೆ ಬಣ್ಣಿಸಲಳವೇ others. Show all posts

Friday, 27 December 2019

ಶ್ರೀಭಾಗವತ ಮಹಿಮೆ ಬಣ್ಣಿಸಲಳವೇ others

ಶ್ರೀ ಭಾಗವತ ಮಹಿಮೆ ಬಣ್ಣಿಸಲಳವೇ ||pa||

ಈ ಭವಶರಧಿಗೆ ಸುನಾವೆಯಂತಿಹುದಯ್ಯ||a.pa||

ವೇದ ಶಾಸ್ತ್ರಾದಿ ಅನೇಕ ಧರ್ಮಗಳಲ್ಲಿ
ಈ ದೇಹ ಸಾಧನವಾದ ಸದ್ಧರ್ಮಗಳು
ಆ ಪರಾಶರ ಸೂನು ಶ್ರೀ ಮನ್ನಾರಾಯಣ
ಆಪದ್ಬಾಂಧವನಲ್ಲದಿನ್ನಿಲ್ಲವೆಂಬುವಾ||1||

ಪ್ರಥಮ ಸ್ಕಂದದಲಿ ಶ್ರೀ ಪರಮಾತ್ಮನ ಸುಜ್ಞಾನಕೆ
ಪಥವೆ ಭಕ್ತಿ ವೈರಾಗ್ಯದ ವಿವರಣೆಯು
ಮತ್ತೆ ಶಾಪದಲಿ ನಾರದನ ವಿಷಯವ ಪೇಳ್ವ ||2||

ದ್ವಿತೀಯ ಸ್ಕಂದÀದಿ ಪರೀಕ್ಷಿತ ಶುಕ ಸಂವಾದ
ಶ್ರೀಹರಿಯ ಅವತಾರಗಳ ವರ್ಣನೆಗಳು
ಮತ್ತೆ ಮಹದಾದಿ ತತ್ವ ಸೃಷ್ಟಿಕ್ರಮ
ಇತ್ಯಾದಿ ಪುಣ್ಯಚರಿತಗಳನು ಪೇಳ್ವ ||3||

ಆ ಬೊಮ್ಮಂಡದಿಂದೆ ಚತುರ್ಮುಖನ ಸೃಷ್ಟಿಯು
ವಿಭಾಗವ ಪೇಳ್ವ ಸೂಕ್ಷ್ಮ ಪರಮಾಣು
ಅಬ್ದಾದಿ ಕಾಲಗಳು ವ್ಯಷ್ಟಿ ಭೂತೋತ್ಪತ್ತಿ
ಶ್ರೀ ವರಹ ರೂಪದಿ ತೋರಿದ ಮಹಿಮೆಯಾ ||4||

ವರಹಾವತಾರದೀ ಧರಣೀಯ ತಂದಂಥ
ಪುರುಷ ಸ್ತ್ರೀಯರ ಸೃಷ್ಟಿ ಸರ್ವಸೃಷ್ಟಿಯು ಮತ್ತೆ
ಸ್ವಾಯಂಭುಮನು ಶತರೂಪೆಯರ ಚರಿತೆ
ಶ್ರೀ ಕಪಿಲ ದೇವಹೂತಿಯ ಸಂವಾದವ ಪೇಳ್ವ ||5||

ಚತುರ ಸ್ಕಂದದಿ ನವಬ್ರಹ್ಮರ ಉತ್ಪತ್ತಿ
ದಕ್ಷಾಧ್ವರಭಂಗ ಭಕ್ತಧ್ರುವಚರಿತೆ
ಉಚಿತವಾದ ಪೃಥು ಸಾರ್ವಭೌಮರಿಂದ
ಪ್ರಾಚೀನ ಬರ್ಹಿಷರ ವೃತ್ತಾಂತವನು ಪೇಳ್ವ ||6||

ಪಂಚಮ ಸ್ಕಂದದಿ ಪ್ರಿಯವ್ರತ ನಾಭಿ ನೃಪರ
ಋಷಭ ಚರಿತೆಗಳು ಪುತ್ರ ಭರತನ ಕಥೆಯು
ಅಚಲಲೋಕ ದ್ವೀಪಾದ್ರಿ ನದ ನದಿಗಳ ಸೃಷ್ಟಿ
ಜ್ಯೋತಿಶ್ಚಕ್ರ ನರಕ ಪಾತಾಳಗಳ ಪೇಳ್ವ ||7||

ಷಷ್ಠ ಸ್ಕಂದದೊಳು ದಕ್ಷ ಜನ್ಮವು
ಅವರ ಕನ್ಯೆಯರಿಂದ ದೇವ ಮಾನವ ದಾನವ
ದುಷ್ಟಮೃಗ ಪಕ್ಷೀ ಪನ್ನಗಾದಿ ಜನನವು
ವೃತ್ರನ ಜನನ ಮರಣಗಳೆಲ್ಲ ಪೇಳ್ವ ||8||

ಸಪ್ತಮ ಸ್ಕಂದದಿ ದಿತಿಪುತ್ರರ ಜನನ
ಹಿರಣ್ಯಕಶಿಪುವಿನ ದುರುಳತನವು
ಮತ್ತೆ ಧೀವರನಾದ ಪ್ರಹ್ಲಾದರಾಯನಿಂ ವ-
ರ್ಣಿತಮಾದ ಶ್ರೀಹರಿಯ ಮಹಿಮೆಯ ಪೇಳ್ವ ||9||

ಅಷ್ಟಮ ಸ್ಕಂದದಿ ಮನ್ವಂತರ ವಿವರವು
ಗಜರಾಜನಿಗೆ ಮೋಕ್ಷ ಮನ್ವಂತರ ಅವತಾರ
ದಿಟ್ಟ ಕಮಠ ಮತ್ಸ್ಯನರಹರಿ ವಾಮನ
ಹಯವದನನವತಾರ ಸುಧೆಯಿತ್ತ ಮಹಿಮೆಯ||10||

ನವಮ ಸ್ಕಂದದಿ ನೃಪವಂಶಾನು ಚರಿತವು
ಇಕ್ಷಾ ್ವಕುಸುತ ಸುದ್ಯುಮ್ನರಾಜನ
ಜನನ ದಿವಾಕರ ವಂಶಾನು ಕಥನಗಳು
ಇಳೋಪಾಖ್ಯಾನವ ತಾರೋಪಾಖ್ಯಾನವ ಪೇಳ್ವ ||11||

ಸೂರ್ಯವಂಶ ಶಶಾದರಾಜನ ವೃತ್ತ ಸುಕನ್ಯ
ಶರ್ಯಾತಿ ಕಾಕುಸ್ಥ ಖಟ್ವಾಂಗ ಧೀರ ಮಾಂ-
ಧಾತೃ ಸೌಭರಿ ಸಗರರ ಚರಿತೆ ಪರಮಾತ್ಮ
ರಘುರಾಮನ ಚರಿತೆಗಳನು ಪೇಳ್ವ||12||

ಮತ್ತೆ ನಿಮಿಯ ದೇಹತ್ಯಾಗದ ವಿಷಯವು
ಜನಕನೃಪ ಭೃಗುರಾಮನ ಚರಿತವು
ಉತ್ತಮ ಚಂದ್ರವಂಶದ ನಹುಷಾಸುತ ಯ-
ಯಾತಿ ಶಂತನುಯದು ಚರಿತೆಗಳುಳ್ಳ ||13||

ದಶಮ ಸ್ಕಂದದಿ ಹರಿ ಯದುವಂಶದಿ ಜನಿಸಿ
ಶಿಶುಲೀಲೆಗಳ ತೋರಿ ಅಸುರಿ ಪೂತನಿ ಕೊಂದು
ಅಸುರ ಶಕಟ ತೃಣ ಬಕ ವತ್ಸ ಮೊದಲಾದ
ಅಸುರಭಂಜಕ ಹರಿಯು ಮೆರೆದ ಮಹಿಮೆಯ ಪೇಳ್ವ ||14||

ಮಾಯಾ ಮಹಿಮಧೇನು ಪ್ರಲಂಬಕರಾ ಕೊಂದು
ಕಾಡುಕಿಚ್ಚಿನಿಂದ ಗೋಪಾಲರ ಕಾಯ್ದ
ನೋಯಿಸಿ ಕಾಳಿಯ ಬಾಯ ಬಿಡಿಸಿ
ಕಾಳಿಮರ್ದನ ಕೃಷ್ಣ ನಾಡಿದ||15||

ಗೋಪಸ್ತ್ರೀಯರ ಚರಿತ ಗೋವರ್ಧನೋದ್ಧಾರಣ
ಶಂಖಚೂಡವಧೆ ಅರಿಷ್ಟಕೇಶಿಯ ನಿಧನ
ಭೂಪನೆದುರಿನಲ್ಲಿ ಜಟ್ಟಿಮುಷ್ಟಿಕರ ಕೊಂದು
ಕಂಸವಧೆಯ ಮಾಡಿ ಗುರುಸುತನನು ತೋರ್ದ ||16||

ಜರೆಯ ಸೇನೆಯ ಜಯಿಸಿ ಕಾಲಯವನರ ಕೊಂದು
ಪಾರಿಜಾತವ ತಂದು ಸಿರಿ ರುಕ್ಮಿಣಿಯ ಪಡೆದು
ಹರಿಸಿ ಬಾಣನ ತೋಳ ನರಕಾಸುರನ ಗೆದ್ದು
ಸೆರೆಯ ಬಿಡಿಸಿ ರಾಜಕನ್ಯೆಯರನು ಕಾಯ್ದ ||17||

ಶಿಶುಪಾಲ ದಂತವಕ್ತ್ರ ಪೌಂಡ್ರಕ ಸಾಲ್ವ ಶಂಬರ
ದ್ವಿವಿಧ ಮುರಾಸುರರೆಲ್ಲರ ನಾಶಪಡಿಸಿ
ಕಾಶೀಪುರವ ದಹನ ಮಾಡಿ ಪಾಂಡವರನ್ನು ಕಾಯ್ದ
ಪರಮ ಮಹಿಮೆಯ ಪೇಳ್ವ ||18||

ಭೂಭಾರನಿಳುಹಲು ಕುರು ಪಾಂಡವರೊಳು
ಕ್ರೂರಯುದ್ಧವ ಕುರುಕ್ಷೇತ್ರದಿ ಮಾಡಿಸಿ
ಅಭಯದಾಯಕ ಪಾಂಡುನಂದನರಿಂದ
ಸದ್ಧವರ್i ಸ್ಥಾಪಿಸಿದ ಶ್ರೀಕೃಷ್ಣಚರಿತೆಯ ಪೇಳ್ವ ||19||

ಏಕಾದಶ ಸ್ಕಂದÀದಿ ಯಾದವರೆಲ್ಲರು
ಭೂಸುರ ಶಾಪದಿ ಯುದ್ಧವನೆ ಮಾಡಿ
ಏಕನಾಗಿದ್ದ ಉದ್ಧವನಿಗೆ ಬೋಧಿಸಿ
ಲೋಕಾವನೈದು ನಿಜಧಾಮಕ್ಕೆ ತೆರಳಿದ ||20||

ದ್ವಾದಶಸ್ಕಂದದೊಳು ಯುಗಭೇದ ಪ್ರಳಯಗಳು
ನಿತ್ಯನೈಮಿತ್ತಿಕ ಪ್ರಾಕೃತಗಳ ಸೃಷ್ಟಿ
ವೇದ ವಿಭಾಗವು ಹರಿರಾತನ ಅಂತ್ಯ
ಮಾರ್ಕಂಡೇಯ ಚರಿತ ಸೂರ್ಯಗಣಗಳ ಪೇಳ್ವ ||21||

ಹರಿಲೀಲೆ ಅವತಾರಚರಿತೆಯ ಕೇಳುತ
ಮರೆ ವೆಯಿಂದಾಗಲಿ ರುಜೆಯಿಂದಾಗಲಿ
ಹರಿಯೇನಮಃ ಎಂದುಚ್ಚರಿಸಿದ ಮಾತ್ರದಿ
ದುರಿತಪಾಪವು ನಾಶವಾಗಿ ಪೋಗುವುದಯ್ಯ ||22||

ಹರಿಯ ಸ್ಮರಣೆಯ ಮಾಡಿದರು ಕೇಳಿದರು
ಬಿರುಗಾಳಿಗೆ ಸಿಕ್ಕು ಮೋಡ ಓಡುವಂತೆ
ದುರಿತವ್ಯಾಧಿಗಳು ತ್ವರಿತದಿ ಓಡುವುವು
ಹರಿಸಂಬಂಧವಲ್ಲದ ಮಾತೆಲ್ಲವೂ ವ್ಯರ್ಥವೋ ||23||

ಯಾಮ ಯಾಮಕೆ ಈ ಭಾಗವತವ ಪಠಿಸೆ
ಭಾಗವತದ ಸಪ್ತಾಹದ ಪುಣ್ಯಫಲವು
ಭಾವ ಭಕುತಿಯು ಹುಟ್ಟಿ ಶ್ರೀ ವೇಂಕಟೇಶನ
ಪಾವನವಾದ ಶ್ರೀಪಾದವ ಸೇರುವ||24||
********