Audio by Mrs. Nandini Sripad
ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಸಾಧನ ಸುಳಾದಿ
ರಾಗ ನಾದನಾಮಕ್ರಿಯಾ
ಧ್ರುವತಾಳ
ಮನವೇ ಮರಿಯದಿರು ವನಜನಾಭನ ನಾಮ
ದಿನ ದಿನಕಾನಂದ ಅತಿಶಯವೊ
ಬಿನಗು ಚಿಂತಿಗಳಿಂದ ಫಲವು ಎಳ್ಳಿನಿತಿಲ್ಲ
ಗುಣವಂತನಾಗಿ ಹರಿಯ ಕೊಂಡಾಡೆಲೊ
ಬಿನಗು ಜನರ ಕೂಡ ದಿನವು ಕಳಿಯದೆ ಸ -
ಜ್ಜನರ ಸೇವಿಸು ಅತಿ ಭಕುತಿಯಿಂದ
ಗುಣಪೂರ್ಣ ಗುರುಶ್ರೀಶವಿಟ್ಠಲ ತನ್ನ ನಂಬಿದ
ಜನರ ಕೈಬಿಡದೆ ಪೋಷಿಸುತಿಪ್ಪನೊ ॥ 1 ॥
ಮಟ್ಟತಾಳ
ನಿತ್ಯದಲ್ಲಿ ಹರಿಯ ಉತ್ತಮ ಗುಣ ತಿಳಿದು
ಹೊತ್ತು ಹೊತ್ತಿಗೆ ಏಕಚಿತ್ತದಿ ಸ್ಮರಿಸದಲೆ
ಮತ್ತಾರ ಬಳಿವಿಡಿದು ಮತ್ತೆ ಸತಿಸುತರ
ಹತ್ತಿ ಹೊಂದಿದವರ ಭೃತ್ಯನು ತಾನಾಗಿ
ಎತ್ತ ನೋಡಿದರತ್ತ ವಿತ್ತಗೋಸುಗವಾಗಿ
ಉತ್ತಮಧಮರೆನದೆ ಸುತ್ತುತ ಮನೆಗಳಲ್ಲಿ
ಹೆತ್ತ ತಂದಿಯ ಗಂಟು ಇತ್ತ ಪುರುಷನಂತೆ
ಶಕ್ತಿ ಯುಕ್ತಿಗಳಿಂದ ಎತ್ತಿ ಧನವ ಯಾಚಕ -
ವೃತ್ತಿ ಮಾಡಿ ತಂದು ಉತ್ತಮರಿಗೆ ಒಂದು
ತುತ್ತು ಅನ್ನವ ಕೊಡದೆ ಹತ್ತಿಲೆ ಬಚ್ಚಿಟ್ಟು
ಹೊತ್ತುಗಳದವರನ್ನು ಉತ್ತಮರಾದವರು
ಹತ್ತಿಲೆ ಸೇರಗೊಡರೊ ಚಿತ್ತಜಪಿತ ಕಾಣೊ
ಎತ್ತಿ ನೋಡನು ಒಮ್ಮೆ ಉತ್ತಮ ಗುಣನಿಧೆ ಗುರುಶ್ರೀಶವಿಟ್ಠಲನ್ನ
ಭೃತ್ಯರಾದವರಿಗೆ ನಿತ್ಯ ಸುಖವು ಕಾಣೊ ॥ 2 ॥
ತ್ರಿವಿಡಿತಾಳ
ಎಷ್ಟು ಪೇಳಿದರೊಂದೆ ಗುಟ್ಟು ತಿಳಿಯೊ ಸಿರಿ -
ಕೃಷ್ಣನ್ನ ಮರಿಯದೆ ಘಟ್ಟ್ಯಾಗಿ ನೆರೆನಂಬೊ
ಇಷ್ಟವು ಪ್ರಾಪ್ತಿ ಅನಿಷ್ಟವು ಪರಿಹಾರ
ಪುಟ್ಟುವದೊ ಸುಖ ಅಷ್ಟು ಇಷ್ಟೆನ್ನದೆ
ಕೆಟ್ಟ ವಿಷಯದಲ್ಲೆ ಥಟ್ಟಾರೆ ಧ್ಯಾಸವು
ಪುಟ್ಟಿಸುವದು ಕಾಮ ಕ್ರೋಧಾದಿಗಳ
ನಷ್ಟವಾಗಿ ಕೃತಿ ಕೆಟ್ಟು ಪೋಪದು ಬುದ್ಧಿ
ಭ್ರಷ್ಟನೆಂದೆನಿಸುವಿ ವಿಶಿಷ್ಟರಿಂದ
ಇಷ್ಟೆ ಮಾತ್ರವು ಅಲ್ಲ ಕಟ್ಟಿ ಯಮನು ತನ್ನ
ಪಟ್ಟಣದೊಳಗಿಟ್ಟು ಕಷ್ಟವ ಬಡಿಸುವರು
ಪುಟ್ಟುವಿ ನೀಚರ ಹೊಟ್ಟಿಲಿ ಮತ್ತೆ ಮತ್ತೆ
ಕಟ್ಟಕಡಿಗೆ ಭವದ ಕಟ್ಟು ಬಿಡದೊ
ಥಟ್ಟನೆ ಗುರುಶ್ರೀಶವಿಟ್ಠಲನ ನಂಬೊ
ಬಿಟ್ಟಗಲನೊ ತನ್ನ ಸಾಕುವ ಇಹಪರದಿ ॥ 3 ॥
ಅಟ್ಟತಾಳ
ಹೆಂಡರು ಮಕ್ಕಳು ಹರಿಗೆ ತೋಂಡರು ಎಂದು
ಉಂಡದ್ದು ಉಟ್ಟದ್ದು ಅರ್ಪಿಸು ಆತಗೆ
ಕೊಂಡದ್ದು ಕೊಟ್ಟದ್ದು ನಡದಾಡುವದೆಲ್ಲ
ಥಂಡ ಥಂಡದಿ ನೀನು ಕಂಡದ್ದು ಕೇಳಿದ್ದು
ಪಾಂಡುರಂಗನ ಸೇವೆಯೆಂದು ತಿಳಿದು ನಿತ್ಯ
ಕೊಂಡಾಡು ಬಿಡದೆ ಭೂಮಂಡಲಾಧಿಪನ ನೀ
ಕಂಡದ್ದು ಹಂಬಲಿಸದೆ ಪುಂಡರಿಕಾಕ್ಷ ಶ್ರೀಗುರುಶ್ರೀಶವಿಟ್ಠಲ ಅ -
ಖಂಡ ಭಾಗ್ಯವ ನೀವ ತೊಂಡವತ್ಸಲನೊ ॥ 4 ॥
ಆದಿತಾಳ
ರಂಗನ ನಾಲಿಗೆಯಿಂದ ಶೃಂಗಾರದಲಿ ಪಾಡೊ
ಕಂಗಳಿಂದಲಿ ನೋಡೊ ಮಂಗಳಾಂಗನ ರೂಪ
ಅಂಗಕ್ಕೆ ಸಜ್ಜನರ ಅಂಗ ಸಂಗವ ಮಾಡೊ
ಡಂಗುರ ಹೊಯ್ಯೊ ಪಾಂಡುರಂಗ ಸರ್ವೇಶನೆಂದು
ಗಂಗಾ ಜನಕನ ಗುಣಗಣಂಗಳ ಕೇಳೊ ಅಂತ -
ರಂಗದಿ ಪಾಡಿ ದಯಾಪಾಂಗನ ಕರುಣವ
ಮಂಗಳಪ್ರದ ಗುರುಶ್ರೀಶವಿಟ್ಠಲ ತನ್ನ
ಹಿಂಗದೆ ಭಜಿಸೆ ಸುಖಂಗಳ ಕೊಡುವನೊ ॥ 5 ॥
ಜತೆ
ಅರಲವ ಮರಿಯದೆ ಗುರುಶ್ರೀಶವಿಟ್ಠಲನ್ನ
ಚರಣವ ಸ್ಮರಿಸಲು ಪರಮ ಪದವಿಯನೀವಾ ॥
ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ :
ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು . ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು. ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.
ಶ್ರೀ ಗುರುಶ್ರೀಶವಿಟ್ಠಲದಾಸರಿಂದ ರಚಿತವಾದ ಶ್ರೀಗುರುರಾಜರ ಸ್ತೋತ್ರಪದ " ಬಾರೊ ಗುರುರಾಘವೇಂದ್ರ " ಮತ್ತು ಶ್ರೀಶ್ರೀನಿವಾಸ ದೇವರ ನಕ್ಷತ್ರಮಾಲಿಕಾ " ಸ್ತುತಿರತ್ನಮಾಲಾ - ಶ್ರೀನಿವಾಸ ದಯಾನಿಧೆ " ಎಂಬ ಪದ ಅಬಾಲ ವೃದ್ಧರಿಗೂ ಪರಿಚಿತವಾದುದು.
********