Showing posts with label ಆದಿತತ್ವದ ಸಾರ ತಿಳಿಯದೆ ಭೇದಾಭೇದ mahipati. Show all posts
Showing posts with label ಆದಿತತ್ವದ ಸಾರ ತಿಳಿಯದೆ ಭೇದಾಭೇದ mahipati. Show all posts

Thursday, 12 December 2019

ಆದಿತತ್ವದ ಸಾರ ತಿಳಿಯದೆ ಭೇದಾಭೇದ ankita mahipati

ಭೈರವಿರಾಗ ದಾದರಾ ತಾಳ

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ||

ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ
ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ
ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ
ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧||

ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ
ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ
ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ
ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨||

ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ಕಂತುಪಿತನಾರ್ಚನೆಯನರಿಯದ ತಂತ್ರಮಂತ್ರಗಳ್ಯಾತಕೆ
ಸಂತತ ಚಿಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ
ಪಂಥವರಿಯದೆ ಪರಮಯೋಗದಾನಂತವ್ರತವಿದುವ್ಯಾತಕೆ ||೩||

ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆ ಏತಕೆ
ಗುಹ್ಯ ಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ
ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡನಿದ್ಯಾತಕೆ
ಮಹಾವಾಕ್ಯದಿತ್ಯರ್ಥವರಿಯದೆ ಸಾಯಸ ಬರುವದ್ಯಾತಕೆ ||೪||

ಭಾಗ್ಯ ಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ
ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥ ಸಾಧನ
ಭೋಗ್ಯಭೋಗದ ಸಾರ ಸುಖವಿದು ಯೋಗಿ ಮಾನಸ ಜೀವನ
ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೊ ಸನಾತನ ||೫||
*********