Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ
ಸತ್ವಾದಿ ಗುಣತ್ರಯ ವಿಭಾಗ 24 ತತ್ವಗಳು ಅಭಿಮಾನಿ ದೇವತೆಗಳು ಪರಮಾಣು ಪುಂಜಗಳಲ್ಲಿ ಸಹ ಶ್ರೀಲಕ್ಷ್ಮೀದೇವೇರು ಮತ್ತು ಸಮಸ್ತ ದೇವತೆಗಳ ಉಪಾಸನಾ ಕ್ರಮ ಸುಳಾದಿ
ರಾಗ : ಅಭೇರಿ
ಧ್ರುವತಾಳ
ನಿತ್ಯ ಮೂಲಪ್ರಕೃತಿ ಅಭಿಮಾನಿ ಶ್ರೀ ಭೂದುರ್ಗಾ
ಸತ್ಯವಾಗಿಪ್ಪಳು ಅಪ್ರಾಕೃತಗಳು
ಸತ್ವ ರಾಜಸ ತಮೊ ಮೂರು ಗುಣ ಮಿಳಿತ
ತತ್ವೇಶರಲ್ಲಿ ಇಲ್ಲ ನಿಧಾನಿಸು
ಅತ್ಯಂತವಾಗಿ ವಿಷ್ಣು ಬ್ರಹ್ಮ ರುದ್ರಾಭಿಧಾನ
ಕರ್ತೃ ಭಗವಂತ ನಿಯಾಮಕಾ
ಇತ್ತ ಲಾಲಿಸುವದು ಕಾರಣದಿಂದ ಮುಂ-
ದತ್ತ ಬರಲು ಕಾರ್ಯ ಗುಣತ್ರಯವೊ
ಸತ್ವಗುಣಕೆ ವಾಸುದೇವ ಹಯವದನ ಮಿಕ್ಕ
ಮೂರ್ತಿಗಳೆನ್ನು ರಜೋಗುಣ ಪ್ರ-
ವರ್ತಕ ಜಾಮದಗ್ನಿ ಮಿಗಿಲಾದ ರೂಪ ತಮ ಪ್ರ-
ವರ್ತಕ ರೂಪಂಗಳು ವರಹಾದಿಯು
ಸುತ್ತಿಸುವ ಮೂರು ಗುಣ ಬಹುಪರಿ ಪೊಳ-
ವುತ್ತಲಿವೆ ಸೂಕ್ಷ್ಮ ಮದ್ಧ್ಯ ಸ್ಥೂಲಾ
ಪ್ರತ್ಯೇಕ ಪ್ರತ್ಯೇಕ ಇದಕಭಿಮಾನಿಗಳು
ತತ್ವೇಶರು ಉಂಟಾನಂತ ರೂಪಾ
ಎತ್ತ ನೋಡಿದರತ್ತ ನೀಚಾಭಿಮಾನಿಗಳಿಗೆ
ಸೋತ್ತಮ ಜೀವಿಗಳು ಪ್ರೇರಕರೊ
ಹತ್ತೆರಡು ನಾಲ್ಕು ತತ್ವಾಂತರದಲಿ ಗುಣ ಪರಮಾಣು
ಪೂರ್ತಿಯಾಗಿವೆ ನೋಡಿ ಕ್ರಮದಿಂದಲಿ
ಇತ್ತಂಡ ಇಲ್ಲಿ ಇನಿತು ಬೆರೆತಿಪ್ಪ ಯೋಗವಕ್ಕು
ತತ್ವಾದಿ ಗುಣಕೆ ಸರ್ವರು ಅಭಿಮನ್ಯರು
ತತ್ವಂಗಳ ಲೆಖ್ಖ ಅವ್ಯಕ್ತ ಮಹಾನಹಂ
ತತ್ವ ಮನಸು ಜ್ಞಾನಕರ್ಮೇಂದ್ರಿಯು
ಹತ್ತು ಇವು ಕಾಣೋ ಇದರ ತರುವಾಯ ತ-
ನ್ಮಾತ್ರಗಳೈದು ಇಷ್ಟೇ ಭೂತಂಗಳು ನಿ-
ಮಿತ್ತವಾಗಿಪ್ಪುವು ಎಲ್ಲ ಕೂಡಿಸಿ ಯಿ-
ಪ್ಪತ್ತು ನಾಲ್ಕು ತತ್ವ ಪ್ರಸಿದ್ಧವೊ
ಸತ್ವ ಸತ್ವ ಸತ್ವರಾಜಸ ಸತ್ವ ತಮ
ಮತ್ತೆ ರಾಜಸ ಸತ್ವ ರಜೋರಾಜಸ ವೃತ್ತಿ
ರಾಜಸ ತಮ ತಮ
ಸತ್ವ ತಮರಾಜಸ ತಮತವು ಈ ಬಗೆ ಗುಣದ ಸ್ಥಿತಿಯು
ಉತ್ತಮೋತ್ತಮರೆಲ್ಲ ವಿವರಿಸಿ ವಿಸ್ತರಿಸಿ
ಆರ್ತ ದೂರಾಗುವರು ತ್ರಯ ಭಾಗದೀ
ಆತ್ಮದೊಳಗೆ ತಿಳಿದು ಉಪಾಸನೆ ಮಾಡುವರು
ವೃತ್ತಿ ನಿವೃತ್ತಿ ಮಾರ್ಗವನುಸರಿಸಿ
ತತ್ವ ತಾತ್ವಿಕರ ಉಪಾಸನೆ ಮಾಡುವರು
ಅತ್ಯಣು ಆರಂಭಿಸಿ ಮೂಲ ತನಕಾ
ಸತ್ವಾದಿ ಗುಣಂಗಳು ಉನ್ನ ತೋನ್ನತ ತಿಳಿದು
ನಿತ್ಯ ಧ್ಯಾನ ಸ್ಮರಣೆ ಮಾಡು ಮನುಜಾ
ಸತ್ಯಲೋಕೇಶನೊಬ್ಬ ರುಜುಮಾರ್ಗದವನೊ ತಾ-
ರತಮ್ಯವೇ ಉಂಟು ಉಳಿದ ಜನಕೆ
ಪೃಥ್ವಿ ಆರಂಭಿಸಿ ಗುಣತ್ರಯದ ಉಪಾಸನೆ
ತತ್ತತ್ತದಾಕಾರ ಅವಾಂತರ ವ್ಯಾಪ್ತಿ
ಆತ್ಮ ಮೊದಲಾದ ಹರಿಯೋಪಾಸ್ತಿ
ಪ್ರತ್ಯಕ್ಷಾಗಮ ಅನುಮಾನದಿಂದ ಗ್ರಹಿಸಿ
ಸತ್ವಾದಿ ಗುಣ ಶೂನ್ಯ ವಿಜಯವಿಠಲ ತನ್ನ
ಭೃತ್ಯರಿಗೆ ಇಂತು ಪ್ರೇರಿಸುವನು ದಯದಿ ॥೧॥
ಮಟ್ಟತಾಳ
ಮೂಲಾವತಾರ ಅಂಶಿ ಅಂಶ ಸರ್ವ
ಕಾಲ ಪ್ರಕೃತಿ ಕರ್ಮ ಶ್ರುತಿ ಅವ್ಯಾಕೃತ
ಜಾಲ ಚೇತನ ರಾಶಿ ಸೃಜ್ಯಾಸೃಜ್ಯಾದಲಿ
ಮೂಲಶ್ರುತಿ ಭಾಗವತ ರಾಮಾಯಣ
ವಾಲಯ ಪಂಚರಾತ್ರ ಬ್ರಹ್ಮತರ್ಕ ಯೋಗಶಾಸ್ತ್ರ
ಮೇಲೆ ಭಾರತ ಭಾಗವತ ಪುರಾಣಗಳು
ಮೇಲುಶಾಖ ಕರ್ಮ ಭೇದಾಷ್ಟಕ ಅಧ್ಯಯನ
ಕೇಳಿ ಸಮಸ್ತ ಸಚ್ಛಾಸ್ತ್ರ ನಿರ್ಣಾಯಕ ಸ-
ಮ್ಮೇಳ ಬ್ರಹ್ಮ ಮೀಮಾಂಸ ಮಿಗಿಲಾದ
ಕಾಲ ಕಾಲಕೆ ನುಡಿವ ಪ್ರಣವ ಮಂತ್ರಗಳೊಡನೆ
ಶೀಲ ಗುಣ ರನ್ನ ಮಹಲಕುಮಿದೇವಿ
ಆಲಸವಿಲ್ಲದಲೆ ಒಂದೊಂದರೊಳಗಾನಂತಾ
ಮಾಲಾಕಾರಾದಲ್ಲಿ ವೇದೋಕ್ತದಲ್ಲಿ ವೇದಾನುಕ್ತದಲ್ಲಿ ವಿ-
ಶಾಲ ಜ್ಞಾನದಿಂದ ಸದಾ ಅತಿರೋಹಿತದಿ
ಆಲೋಚನೆಯಿಂದ ಗುಣ ರೂಪ ಕ್ರಿಯ
ಜಾಲ ಸಮೂಹದಲ್ಲಿ ಧ್ಯಾನ ಮಾಡುವಳು ಕರು-
ಣಾಳುಗಳ ಒಡತಿ ತಾಳಿ ಭಕುತಿ ರಸವ ಸರ್ವಪ್ರಕಾರದಲ್ಲಿ
ಊಳಿಗ ಕೈಕೊಂಡು ನಾನಾ ರೂಪವ ಧರಿಸಿ
ಸಾಲವಿಡುವುದು ಎಣಿಸಿ ಅಂತಗಾಣದೆ ರಮಾ
ತೇಲುತ್ತ ತೇಲುತ್ತಲಿ ಮಹಾನಂದವಾದ
ಕೀಲಾಲ ನಿಧಿಯೊಳಗೆ ಬೆರಗಾಗಿ ನಿಂದಿಹಳು
ಪಾಲಸಾಗರಶಾಯಿ ವಿಜಯವಿಠ್ಠಲರೇಯನ
ಕಾಲುಗರ ಕಾಂತಿ ಎಣಿಸಿ ಗುಣಿಸುತಲಿ॥೨॥
ತ್ರಿವಿಡಿತಾಳ
ಆನಂದ ಗುಣ ಪೂರ್ಣ ಉತ್ಕೃಷ್ಟ ಆಖಿಲೇಶಾ
ಅನಂತ ಶಕ್ತ್ಯಾತ್ಮ ಸಮಸ್ತ ಪ್ರೇರಕ
ಜ್ಞಾನಮಯ ಶರೀರ ಸತ್ಸುಖ ವಾರಿಧಿ
ನಾನಾ ರೂಪಾತ್ಮಕ ನಿರ್ಭೇದ ಕಲ್ಯಾಣ
ಅನಂತ ಶಿರಸಾ ಪಾದಾದಿ ರೋಮ ಪೂರ್ಣ
ನಾನಾ ಮಹಿಮೆ ಸ್ವಯಂ ಪ್ರಕಾಶ ಪ್ರತಿರಹಿತಾ
ಹಾನಿ ವೃದ್ಧಿ ವರ್ಜಿತ ಸರ್ವೋಪಾಸ್ಯನೆಂದು
ಶ್ರೀ ನಾರಿ ಭಜಿಸುವಳು ಸರ್ವದಾ ಮನದಲ್ಲಿ
ಧ್ಯಾನ ಮಾಡುವಳು ನವವಿಧ ಭಕುತಿಯಿಂದಲಿ
ಅನಂತಾನಂತ ಕಾಲದಲ್ಲಿ ಬಿಡದೆ
ಏನೆಂಬೆ ಇದರಂತೆ ಉಪಕ್ರಮೋಪ ಸಂಹಾರ
ತಾ ನೆನೆದು ಶ್ರೀ ಹರಿಯ ಮೆಚ್ಚು ಮಾಡಿ
ಅನಾದಿ ಕಾಲದಿಂದಲಿ ಸುಖ ಪೂರ್ಣಳು
ನಾನಾ ರೂಪದಿಂದ ಪ್ರಕೃತಿ ಭಿನ್ನ
ಗೌಣವೆಸರಿ ಸರ್ವಜೀವರು ಲಕುಮಿಗೆ
ಎಣಿಕೆ ಗೈವುದು ಬ್ರಹ್ಮವಿಡಿದೂ
ಮಾಣದೆ ಚತುರಾಸ್ಯ ಗುಣ ರೂಪ ಕ್ರಿಯಾದಲ್ಲಿ
ಧ್ಯಾನಮಾಡುವ ಜ್ಞಾನ ಪೂರ್ಣನಾಗಿ
ಆ ನಿಟಿಲ ನೇತ್ರಾದಿ ಸುರರು ತಮ ಯೋಗ್ಯೋಪಾ
ಸನೆ ಮಾಡುವರಯ್ಯಾ ಒಂದೊಂದುಪಸಂಹಾರ
ಪ್ರಾಣ ನಾಯಕ ನಮ್ಮ ವಿಜಯವಿಠ್ಠಲ ನಂಘ್ರಿ
ರೇಣು ಕಾಣದಲೆ ಸರ್ವರು ಅಪೇಕ್ಷಿಸುವರು॥೩॥
ಅಟ್ಟತಾಳ
ಹರಿ ಗುರುವೆ ಸರ್ವ ಶ್ರೀ ದೇವಿ ಉಪಾಸ್ಯ
ಪಿತ ಗುರುವೆ ನಿಖಿಳ ಪ್ರಾದುರ್ಭಾವನೆಂದು
ಪಿತಾ ಮಹನುಪಾಸ್ಯ ಮತ್ತೆ ಕೆಲವುಂಟು
ಪಿತಾಮಹಾ ಗುರೋರ್ಗುರುತ್ವೇನ ಸರೋಪಾಸ್ಯ
ಪಿತಾಮಹಾ ಮೂಲಗುರುವೆ ಸನಾತನ
ಅಚ್ಯುತ ವಿರಹಿತ ದೈವ ಗುಣಪೂರ್ಣ ಅಪರಿ-
ಮಿತನೆಂದು ಸರ್ವ ಜನರೋಪಾಸ್ಯ ಭಾ-
ರತಿ ಮಿಕ್ಕ ದೇವತಿ ಸ್ತ್ರೀಯುಪಾಸ್ಯ
ಸತತ ಶ್ವಶುರನೆಂದು ಭಾವಿಸುತಿಪ್ಪರು
ಅತಿಶಯ ಜಾರತ್ವ ಉಪಾಸ್ಯ ಅಪ್ಸರ ಉ-
ನ್ನತ ಸ್ತ್ರೀಯರು ಪಿಂಗಲಾದ್ಯರಿಗೆ ನಿಜ
ಪ್ರತಿಯಿಲ್ಲದೋಪಾಸ್ಯ ಭೂತಿತ್ವೇನ ಮಾ-
ರುತ ಮಿಗಿಲಾಗಿದ್ದ ದೇವತಾ ಉಪಾಸ್ಯ ದಿತಿ
ಸುತರು ಅಭೂತಿತ್ವೇನ ಉನ್ಮತ್ತಾ ಹಿತನುಪಾಸ್ಯ
ಸುತನೆಂದು ಪರಬೊಮ್ಮನೆಂದು ದೇವಕಿ ಸತ್ಯ-
ವತಿ ಮಿಗಿಲಾದ ನಾರಿ ಜನೋಪಾಸ್ಯ
ಸ್ಥಿತಿ ಈ ಪ್ರಕಾರವು ತೃಣಜೀವ ಮೊದಲಾಗಿ
ಚತುರಾನನ ದೇವ ಪರಿಯಂತ ಪರಮ ಖ್ಯಾತ
ಆತ್ಮನೆಂದು ಉಪಾಸ್ಯ ಸಿದ್ಧವಯ್ಯಾ
ಚತುರನಾಗಿ ಒಂದರೊಳನಂತ
ತತು ತತು ಜ್ಞಾನವಾರ್ಧಿಕರು ಮಾಳ್ಪರು
ಪತಿತ ಪಾವನ ಸ್ವಾಮಿ ವಿಜಯವಿಠ್ಠಲ ಶಾ-
ಶ್ವಿತ ಲೋಕ ಕೊಡುವನು ತಿಳಿಸಿ ಕೊಟ್ಟು ತಾನೆ॥೪॥
ಆದಿತಾಳ
ಚತುರ್ದಶ ಭುವನಕ್ಕೆ ಬ್ರಹ್ಮ ರುದ್ರಾದಿಗಳು
ಪತಿಳಾಗಿಪ್ಪರೆಂದು ಪೇಳಿಕೊಂಡರೇನಹುದೊ
ಮತಿಯಲ್ಲ ಕೇಳು ಮನುಜ ಸರ್ವರು ಪತಿಯೆಂದು
ಶ್ರುತಿಯಲ್ಲಿ ಪೇಳಿದರು ಪುಸಿಯಲ್ಲ ಆಮಾತು
ಕ್ಷಿತಿಯೊಳಗೆ ಒಂದು ವೈಚಿತ್ರಕವಾದ
ರಥ ಉಂಟಾದರದಕೆ ಬಹು ಜನ ಕುಳಿತಿದ್ದರು
ರಥಿಕನೊಂಬೊ ಪೆಸರು ಆರಿಗೆ ಬಪ್ಪದೆಲವೊ
ಗತಿ ತಪ್ಪದಂತೆ ಸರ್ವರನು ಪಾಲಿಸುತಲಿಹ
ರಥದ ಮ್ಯಾಲಿದ್ದಂತೆ ಸರ್ವ ಜನಕೆ ಮುಖ್ಯ
ಪತಿ ಶಬ್ದ ಬರುವದೆ ಬಲು ಧಾವಂತಗೊಂಡರೆ
ಕೃತಕಾರ್ಯ ಹರಿಯೊಬ್ಬ ಸರ್ವ ನಿಯಾಮಕ
ಹಿತ ಸ್ವತಂತ್ರನೆನ್ನು ಬ್ರಹ್ಮಾದಿಬಮುಕ್ತಗಣ
ತುತಿಸಿ ಕೊಂಡಾಡುತ ಸ್ವಯೋಗ್ಯತಾ ಸ್ಥಾನ
ಗತಿ ನೀನೆಯೆಂದು ಧ್ಯಾನಂಗತರಾಗಿ ಬಾಳುವರು
ಶತ ಸಹಸ್ರ ಅನಂತ ರೂಪ ವಿಜಯವಿಟ್ಠಲ
ಇತರಾಪೇಕ್ಷೆಯ ಮಾಡಗೊಡನು ನಂಬಿದವನಾ॥೫॥
ಜತೆ
ಪರಮಾಣು ಪ್ರದೇಶದಲ್ಲಿ ಮನಸು ನಿಲಿಸಿ
ಗುರುಕೃಪೆಯಲಿ ವಿಜಯವಿಟ್ಠಲನ್ನ ಧ್ಯಾನಿಸು॥೬॥
****