ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸನಾಗುವೆನು ಹರಿಯೇ ನಿಮ್ಮ ಪ
ದಂಡಿಗೆ ಹಿಡಿದು ಊಧ್ರ್ವ| ಪೌಂಡ್ರ ತುಳಸೀಮಾಲೆಯಿಂದಾ ಪುಂಡಲೀಕ ವರದ ಶ್ರೀ| ಪಾಂಡುರಂಗ ವಿಠಲನೆಂಬಾ 1
ಲಜ್ಜೆಯಳಿದು ನೃತ್ಯ| ಹೆಜ್ಜೆಗೊಮ್ಮೆ ತೋರಿಸುತ| ಗರ್ಜಿಸುತ ಹರಿನಾಮ| ಸಜ್ಜನರ ಒಲಿಸುವಾ 2
ಹಲವು ಪುಷ್ಪ ತುಲಸಿಯಿಂದಾ| ನಳಿನಾಂಘ್ರಿಯಪೂಜೆಮಾಡಿ| ನಲಿದು ನವವಿಧ ಭಕ್ತಿ| ಕಲೆಗಳಾ ತೋರಿಸುವಾ3
ಎನ್ನ ತನುಮನಧನ- ವನ್ನು ನಿನಗರ್ಪಿಸುತ| ಅನ್ಯಯಾರ ಭಜಿಸಿದೆ| ನಿನ್ನವನೆಂದೆನಿಸುವಾ 4
ತಂದೆ ಮಹಿಪತಿ ನಿಜ| ಸಾರಥಿ ನಿನ್ನ| ಹೊಂದಿದ ಭಕ್ತರ ಪುಣ್ಯ| ಮಂದಿರದಿ ಜನಿಸುವಾ 5
***