ಯೋಗಧರತಾತ ಕಭ ಲೋಕಪತಿ ದೇವ ಸಿರಿ l
ಯೋಗ ನಿನಪದಕೆ ಶರಣೆಂಬುವೆನೊ ಕಾಯೋ ll ಪ ll
ಯೋಗಾಂಡದೊಳ ಹೊರಗೆ ವ್ಯಾಪ್ತನೆ ಗುಣರಹಿತನೆ l
ಯೋಗಾಂಬರಧರ ಘ - ಮುಖಜನಕ l
ಯೋಗಗಾತ್ರ ಷ ದೂರ ವರ್ಗದ್ವಯ ಅವತಾರ l
ಯೋಗಪಾಣೀಸುತ ಪ್ರೀಯ ಸುಮತಿಕೊಡು ಜೀಯ ll 1 ll
ಯೋಗರಾಯಗೆ ಅದೇ ಪದವಿ ಕರುಣಿಸಿ ಕೊಟ್ಟೆ l
ಯೋಗೇಶಣಾಸ್ತ್ರ ಪಿತ ದಂತಿವರದ l
ಯೋಗದಲಿ ಮನಸು ನಿಶ್ಚೈಸೊ ಹ ಕರ್ತೃತ್ವ l
ಯೋಗಫಲ ಸ್ವೀಕರಿಸುತಿಹ ಕಂಜನಾಭ ll 2 ll
ಯೋಗನಾಗೆಯೋ ದುರ್ಮತಿಗಳಿಗೆಂದಿಗೂ ನೀನು l
ಯೋಗಿಜನವಂದ್ಯ ಹ ನಾರಿಪತಿ ನಿನ್ನ l
ಯೋಗ ಸೇವಕರೊಳಿಡೋ ಪ್ರಾಣೇಶವಿಟ್ಠಲನೇ l
ಯೋಗಹ್ರಾಸ ವಿವರ್ಜ ಘಟಜ ಕರಪೂಜ್ಯ ll 3 ll
***
(ಯೋಗಧರತಾತ - ತ್ರಿಶೂಲಧರನಾದ ಮಹಾರುದ್ರನ ತಾತ, ಶ್ರೀಹರಿ, ಶೂಲನಾಮಕ ಯೋಗ
ಕಭ ಲೋಕಪತಿ - ಕ, ವರ್ಗದ ಒಂದನೆಯ ಅಕ್ಷರ, ಭ, ವರ್ಗದ ನಾಲ್ಕನೆಯ ಅಕ್ಷರ, ಕ ಭ - 14, ಹದಿನಾಲ್ಕು, ಲೋಕಗಳ ಒಡೆಯ,
ಸಿರಿ ಯೋಗ - ಲಕ್ಷ್ಮಿಗೆ ಗಂಡ, ಇಂದು ಗಂಡ ನಾಮಕ ಯೋಗ
ಯೋಗಾಂಡ - ಬ್ರಹ್ಮಾಂಡ, ಬ್ರಹ್ಮನಾಮಕ ಯೋಗ
ಯೋಗಾಂಭಾರಧರ - ಶುಕ್ಲಾಂಬರಧರ, ಶುಕ್ಲ ನಾಮಕ ಯೋಗ
ಘ ಮುಖ ಜನಕ - ಕ, ವರ್ಗದ ನಾಲ್ಕನೆಯ ಅಕ್ಷರ, ಚತುರ್ಮುಖ ಜನಕ
ಯೋಗಗಾತ್ರ - ಶೋಭನಗಾತ್ರ, ಶೋಭನನಾಮಕ ಯೋಗ
ಷ ದೂರ - ಷ ಅವರ್ಗೀಯದಲ್ಲಿ ಆರನೆಯ ಅಕ್ಷರ, ಅರುದೂರ
ವರ್ಗದ್ವಯ ಅವತಾರ - ಎರಡು ವರ್ಗಗಳಲ್ಲಿ ಹತ್ತು ಅಕ್ಷರಗಳು, ಹತ್ತು ಅವತಾರ
ಯೋಗಪಾಣಿ ಸುತಪ್ರೀಯ - ವಜ್ರಪಾಣಿಯಾದ ಇಂದ್ರನಸುತ ಪ್ರೀಯನಾದ ಶ್ರೀಹರಿ, ವಜ್ರ ನಾಮಕ ಯೋಗ
ಯೋಗರಾಯ - ಧ್ರುವರಾಯ, ಧ್ರುವನಾಮಕ ಯೋಗ, ಅದೇ ಪದವಿ ..... ಧ್ರುವ ಸ್ಥಿರವಾದ ಪದವಿ ಕರುಣಿಸಿಕೊಟ್ಟ.
ಯೋಗೇಶ - ಸಿದ್ಧರಿಗೆ ಈಶ, ಸಿದ್ಧನಾಮಕ ಯೋಗೇಶಣಾಸ್ತ್ರಪಿತ - ಟ, ವರ್ಗ ಪಂಚಮ ಅಕ್ಷರ, ಪಂಚ ಬಾಣ ಪಿತ.
ದಂತಿವರದ - ಶ್ರೀ ಹರಿ, ಗಜೇಂದ್ರಮೋಕ್ಷ
ಯೋಗದಲಿ ಮನಸು ನಿಶ್ಚಯಿಸು - ಸುಕರ್ಮದಲ್ಲಿ ಮನಸ್ಸು ನಿಶ್ಚಯಿಸು, ಸುಕರ್ಮ ನಾಮಕ ಯೋಗ
ಹ ಕರ್ತೃತ್ವ - ಹ, ಎಂಟನೆಯ ಅಕ್ಷರ, ಅಷ್ಟ ಕರ್ತೃತ್ವ.
ಯೋಗಫಲ - ಶುಭಫಲ, ಶುಭ ಯೋಗ
ಕಂಜನಾಭ - ಪದ್ಮನಾಭ
ಯೋಗನಾಗಿಯು - ಸಾಧ್ಯನಾಗಿ, ಸಾಧ್ಯನಾಮಕಫಲ
ಯೋಗಹ್ರಾಸ ವಿವರ್ಜ - ವೃದ್ಧಿಹ್ರಾಸ ವರ್ಜಿತ, ವೃದ್ಧಿ ಯೋಗ
ಘಟಜ - ಕೊಡದಿಂದ ಹುಟ್ಟಿದವನು ಅಗಸ್ತ್ಯ, ದ್ರೋಣ)
***
ಯೋಗಧರತಾತಕಘ ಲೋಕಪತಿ ದೇವಸಿರಿ|ಯೋಗ ನಿನ ಪದಕೆ ಶರಣೆಂಬುವೆನೊ ಕಾಯೋ ಪ
ಯೋಗಾಂಡದೊಳ ಹೊರಗೆ ವ್ಯಾಪ್ತನೆ ಗುಣರಹಿತನೆ |ಯೋಗಾಂಬರ ಧರ ಘ-ಮುಖ ಜನಕ ||ಯೋಗಗಾತ್ರಷ ದೂರ ವರ್ಗದ್ವಯ ಅವತಾರ |ಯೋಗ ಪಾಣೀ ಸುತ ಪ್ರಿಯ ಸುಮತಿ ಕೊಡು ಜೀಯ 1
ಯೋಗರಾಯಗೆ ಅದೇಪದವಿಕರುಣಿಸಿ ಕೊಟ್ಟೆ |ಯೋಗೇಶಣಾಸ್ತ್ರ ಪಿತದಂತಿವರದ||ಯೋಗದಲಿ ಮನಸು ನಿಶ್ಚೈಸೊ ಹಾ ಕರ್ತೃತ್ವ |ಯೋಗಫಲ ಸ್ವೀಕರಿಸುತಿಹ ಕಂಜನಾಭ 2
ಯೋಗನಾಗೆಯೋ ದುರ್ಮತಿಗಳಿಗೆಂದಿಗೂ ನೀನು |ಯೋಗಿಜನ ವಂದ್ಯ ಹಾ ನಾರೀಪತಿ ನಿನ್ನ ||ಯೋಗ ಸೇವಕರೊಳಿಡೋ ಪ್ರಾಣೇಶ ವಿಠ್ಠಲನೇ |ಯೋಗ ಹ್ರಾಸ ವಿವರ್ಜ ಘಟಜ ಕರಪೂಜ್ಯ 3
********