ಸೇರಿ ಸುಖಿಸುತಿರು ಮನುಜಾ ಗುರು
ಮಾರುತಸುತನ ಶುಭ ಚರಣ ಸರೋಜ ಪ
ನೂರು ಯೋಜನಮಿರ್ದ ಉದಧಿ ದಾಂಟಿ
ಧಾರುಣಿಜಳಿಗೆ ಮುದ್ರಿಕೆಯಿತ್ತು ಜವದಿ
ಶ್ರೀ ರಘುವರಗೆ ವಿನಯದಿ ಕ್ಷೇಮ
ವಾರುತಿಯನು ಪೇಳಿದವನಂಘ್ರಿ ಮುದದಿ 1
ಇಂದು ಕುಲದಿ ಪಾಂಡು ನೃಪನ ಪುತ್ರ
ನೆಂದು ಕರಿಸಿ ದುಷ್ಟ ಕೌರವಾಂತಕನ
ನಂದ ನಂದನನೊಲಿಸಿದನ ದೃಪದ
ನಂದಿನಿಯಳಿಗೆ ಪುಷ್ಪವ ತಂದಿತ್ತವನ 2
ಮಧ್ಯಗೇಹ ನೆಂಬೊದ್ವಿಜನ ಗೃಹದಿ
ಮಧ್ವಾಭಿದಾನದಿ ಜನಿಸಿ ಮಾಯ್ಗಳನ
ಗೆದ್ದು ಸಚ್ಛಾಸ್ತ್ರ ರಚಿಸಿದನ ಸುಪ್ರ
ಸಿದ್ಧ ಸಿದ್ಧ ಕಾರ್ಪರ ನರಹರಿಗತಿ ಪ್ರಿಯನ 3
****