ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)
ಪ್ರಮೇಯ ಸುಳಾದಿ
ರಾಗ ಸಾರಂಗ
ಧ್ರುವತಾಳ
ಬಾರದ ಮೊದಲಿನ್ನು ವಿಷಯ ಬಾರದ ಚಿಂತೆ
ಭರದಿಂದ ಮರದೆನೊ ಹರಿಯೆ ನಿನ್ನ
ಬೆರದ ವಿಷಯದ ಕಾಲದಲ್ಲಿ ಸಂಭೋಗ -
ಪರನಾಗಿ ಮರದೆನೊ ಹರಿಯೆ ನಾ ನಿನ್ನ
ಜರಿಯು ಆದ ಬಳಿಕ ನಿರುತ ಅದರ ಶೋಕಾ -
ತುರನಾಗಿ ಮರದೆನೊ ಹರಿಯೆ ನಿನ್ನ
ಮೂರು ಸಮಯದಲ್ಲಿ ಹೀಗೆನ್ನ ಮರಿಸಲು
ಆರು ತೋರಿಸಬೇಕು ಖರೆ ಸ್ಮೃತಿ ಸಮಯ
ತರಳನ್ನ ಆಲಾಪ ಮನಕೆ ತಂದೀಗಲು
ಕರುಣಿಸೊ ವಾಸುದೇವವಿಟ್ಠಲ ಸ್ವಾಮಿ ॥ 1 ॥
ಮಟ್ಟತಾಳ
ಸ್ಮೃತಿಯಿಲ್ಲ ಸ್ಮೃತಿಯಿಲ್ಲ ಇನಿತೆಂಬ ಸ್ಮೃತಿಮಾತ್ರ
ಮತಿಯಲ್ಲಿ ನಟ್ಟಿದೆ ಇದಲ್ಲದಿನ್ನೊಂದು
ಗತಿಯಿಲ್ಲದೆನಗಿನ್ನು ಇದನೆ ಸಾಧನ ಮಾಡಿ
ಪತಿ ವಾಸುದೇವವಿಟ್ಠಲ ಸ್ಮೃತಿ ಕೊಡು ಎನಗೀಗ ॥ 2 ॥
ತ್ರಿವಿಡಿತಾಳ
ಹಾನಿ ಲಾಭಗಳಿಗೆ ಚಪಲ ಚಿತ್ತನಾಗಿ
ಆನು ಮತ್ತಗಳ ಕಾರಣ ತಿಳಿವೆ
ನೀ ನಿದಾನ ನಿಖಿಳಕೆ ಎಂದು ಮರದಿನೊ
ಏನೊ ಮೋಹನ ಶಕುತಿ ನಿನಗೆ ಎನ್ನಲ್ಲಿ
ಆನು ಬೇಡಿಕೊಂಬೆ ಎಂದಿಗಾದರು ಇಂಥ
ಹೀನ ವಿಸ್ಮೃತಿ ವಲ್ಲೆ ವಾಸುದೇವವಿಟ್ಠಲ ॥ 3 ॥
ಅಟ್ಟತಾಳ
ಮರಹುವ ವೈರಾಗ್ಯ ಮರಹುವ ಸೌಭಾಗ್ಯ
ಮರಹುವ ಭೋಗ ಮರಹುವ ತ್ಯಾಗ
ಪರಿಪರಿ ಇತ್ತರು ಹರಿಯೆ ನಾನೊಲ್ಲೆ ನಿನ್ನ
ಚರಣದ ಸ್ಮೃತಿಯಿಂದ ಚಿರದ ಸಾಧನ ಕೊಡು
ಪರವಿಲ್ಲ ಎನಗಿನ್ನು ವಾಸುದೇವವಿಟ್ಠಲ ॥ 4 ॥
ಆದಿತಾಳ
ನೀ ಕೊಟ್ಟದ್ದದೆ ಲಾಭ ನೀನಿತ್ತದ್ದದೆ ಸೌಖ್ಯ
ನೀ ಮಾಡಿದದೆ ಶಿಕ್ಷ ನೀ ಕೂಡಿದದೆ ರಕ್ಷ
ನೀನೆ ಪರಗತಿ ನೀನೆ ಪರಮಾತ್ಮಾ
ನಿನಗಿಂದಾರಿಂದಾರೊ ವಾಸುದೇವವಿಟ್ಠಲ ॥ 5 ॥
ಜತೆ
ಆನೊಂದನರಿಯೆನು ದೀನರ ಪಾಲಕ
ನೀನೆಂದು ಮೊರೆಹೊಕ್ಕೆ ವಾಸುದೇವವಿಟ್ಠಲ ॥
*****