ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ
ನಗಧರ ಪ್ರಿಯನೆನಿಪ ನಾಗವರದನಾ ಅ.ಪ
ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ
ಜಲಧಿ ಮಥನವನ್ನು ಗೈದ ಚೆಲುವರರಸನಾ 1
ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ
ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ 2
ಧರಣಿ ಈರಡಿಯ ಮಾಡಿ ಸುರರ ಪೊರೆದನಾ
ಧರಣಿಪಾಲಕುಲವ ತರಿದ ಪರಶುರಾಮನಾ 3
ಧರಣಿಸುತೆಯನೊಯ್ದ ಖಳನ ಶಿರವನರಿದನಾ
ತರಳತನದಿ ವೊರಳನೆಳೆದ ತರಳ ಕೃಷ್ಣನಾ 4
ತರುಣಿಯರ ವ್ರತವನಳಿದು ಪುರವಗೆಲಿದನಾ
ಹರುಷದಿಂದ ತುರಗವೇರಿ ನಲಿವ ಸುಗುಣನಾ 5
ಸುರಪುರದಿ ನಲಿವಿನಿಂದ ನೆರೆದು ನಿಂದನಾ
ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ 6
****