ಇತ್ತೆ ಏತಕ್ಕೆ ಈ ನರಜನ್ಮವ
ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ ಪ.
ಬಂಧುಬಳಗವ ಕಾಣೆ ಇಂದಿರೇಶನೆ ಭವದಿ
ಬೆಂದು ನೊಂದೆನೊ ನಾನು ಸಿಂಧುಶಯನ
ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು
ಮಂದಮತಿಗೆ ಇನ್ನು ಮುಂದೆ ಗತಿ ಏನೊ 1
ಕಾಣದಲೆ ನಿನ್ನನು ಕಾತರಿಸುತಿದೆ ಮನವು
ತ್ರಾಣಗೆಡÀುತಲಿ ಇಹುದೊ ಇಂದ್ರಿಯಗಳೆಲ್ಲ
ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ
ಜಾಣತನವಿದು ಸರಿಯೆ ಫಣಿಶಾಯಿಶಯನ 2
ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ
ಮಾಧವನೆ ಕರುಣದಲಿ ಕಾಯಬೇಕೊ
ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ
ಛೇದಿಸೊ ಅe್ಞÁನ ಹೇ ದಯಾನಿಧಿಯೆ 3
ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ
ಸರ್ವರನು ಪೊರೆಯುವನೆ ಸರ್ವರಾಧೀಶ
ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ
ಸರ್ವ ಸಾಕ್ಷಿಯೆ ಸತತ ಆನಂದವೀಯೊ 4
ಆನಂದಗಿರಿನಿಲಯ ಆನಂದಕಂದನೆ
ಆನಂದ ಗೋಪಾಲಕೃಷ್ಣವಿಠ್ಠಲಾ
ಆನಂದನಿಲಯ ಶ್ರೀ ಗುರುಗಳಂತರ್ಯಾಮಿ
ನೀನಿಂದು ಸರ್ವತ್ರ ಕಾಯಬೇಕಯ್ಯ 5
***