ರಾಗ ನಾಟಿ ಧ್ರುವತಾಳ
Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಶ್ರೀಹರಿ ಮಹಿಮಾ ಸುಳಾದಿ
ಸತ್ಯ ಸಂಕಲ್ಪ ಸಿದ್ಧ ಅನಾದಿದೈವ
ಸತ್ಯಸತ್ಯವು ನಿನ್ನ ಮಹಿಮೆ ಪ್ರತಾಪ
ಸತ್ಯವೆ ನಿನ್ನ ಗುಣ ಜ್ಞಾನ ಪರಿಪೂರ್ಣ
ಸತ್ಯವೆ ನಿನ್ನ ಚರಿತೆ ಸೂತ್ರಧಾರಕನೆ
ಸತ್ಯವೆ ನಿನ್ನ ಲೀಲೆ ಜಗವ ನಡಿಸುವದು
ಸತ್ಯವೆ ನಿನ್ನಾನಂದ ಸಕಲೈಶ್ವರ್ಯ
ಸತ್ಯವೆ ನಿನ್ನ ಕಪಟನಾಟಕ ತನವು
ಸತ್ಯವೆ ನಿನ್ನ ವ್ಯಾಪ್ತಿ ಅಣೋರಣಿಯಲ್ಲಿ
ಸತ್ಯಪರಾಕ್ರಮ ವಿಜಯವಿಟ್ಠಲ ನೀನೆ
ಸತ್ಯವಂತನಲ್ಲದೆ ಮತ್ತಾರು ವುಂಟೆ ॥ 1 ॥
ಮಟ್ಟತಾಳ
ವರಣ ಭರಿತದಲಿ ವರಣ ನಿಯಾಮಕನಾಗಿ
ವರಣಾಂತರ್ಯಾಮಿ ವರಣ ನಾಮಕದಲ್ಲಿ
ಕರಸಿಕೊಂಡೆ ಓಂಕಾರವೆಂಬೊ ಶಬ್ದಾ -
ಕ್ಷರಮೂರರಿಂದ ಪರಿಮಿತವಾಗಿ
ಪರತರ ಪರದೂರ ವಿಜಯವಿಟ್ಠಲ
ಹಿರಣ್ಯನಾಭನೆ ಸಿರಿದೇವಿಯರಸ
ಸರುವೋತ್ತಮ ಸಗುಣ ಸರ್ವೋತ್ತಮ ಸುಗುಣ ॥ 2 ॥
ತ್ರಿವಿಡಿತಾಳ
ಆರು ಅಕ್ಷರದಿಂದ ವ್ಯಾಹೃತಿಮಂತ್ರ ವಿ -
ಸ್ತಾರವನು ಮಾಡಿ ಪ್ರಕಾಶಿಸಿದೆ
ಸಾರವನು ಹರಹಿ ಚತುರವಿಂಶತಿ ಅ -
ಕ್ಷರದಿಂದಲಿ ಸಾರ ಗಾಯಿತ್ರಿ ಬೆಳಸಿ
ಬೇರಿಳಿದಂತೆ ಪುರುಷಸೂಕ್ತ ರಚಿಸಿ ಆ -
ಧಾರವೆನಿಸಿದೆ ಅನಂತಶ್ರುತಿಗೆ
ತಾರಕ ಬ್ರಹ್ಮಕೃತು ವಿಜಯವಿಟ್ಠಲ ವೇದ ಸಂಚರಿಸುತಿಪ್ಪೆ ॥ 3 ॥
ಅಟ್ಟತಾಳ
ನಾಶರಹಿತನಾಗಿ ಅಚ್ಯುತನೆನಿಸಿದೆ
ಸಾಸಿರ ಸಂಖ್ಯ ನಿಗಮ ಪ್ರತಿಪಾದ್ಯ
ಲೇಸಾಗಿ ಗೋವಿಂದನೆಂದು ಕರೆಸಿಕೊಂಡು
ಭಾಸಿತಾವಾನಂತಾನಂತ ನೆನಿಸಿದೆ
ಈಶಾದ್ಯರಿಗೆ ಈಶ ವಿಜಯವಿಟ್ಠಲನೇ ಸ -
ರ್ವೇಶ ಶುದ್ಧದೈವವೆ ಅಪ್ರತಿ ॥ 4 ॥
ಆದಿತಾಳ
ರಜೋಗುಣಾತ್ಮಕವಾದ ತ್ರಿಜಗವನ್ನು ಪುಟ್ಟಿದ ವ -
ನಜ ನಾಭಿಯಲ್ಲಿ ಪೆತ್ತು ಅಜನ ಪಡೆದ ತತ್ವ
ವೃಜದಲ್ಲಿ ಅಭಿಮಾನ್ಯರ ಸೃಜಿಸಿ ಸಂಘಟನೆಯಿಂದ
ಪ್ರಜಾಪತಿಗೆ ನೇಮಿಸಿ ನಿಜ ತ್ರಿಧಾಮದಲಿ ಪಂ -
ಕಜ ಪಾಣಿ ಸೇವೆಯಿಂದಾ ಗಜ ಕೋಟಿ ಲಾವಣ್ಯ
ಪ್ರಜಾಪತಿಯೆಂಬ ನಾಮ ವಿಜಯವಿಟ್ಠಲರೇಯ
ಅಜರಾಮರಣ ರಹಿತ ಅಜಭುಜಗಾದಿ ತಾತ
ಸುಜನರ ಮನೋವಾಸ ಕುಜನ ಶೈಲ ಕುಲಿಶ ॥ 5 ॥
ಜತೆ
ಅಂತರ ಬಹಿರದೊಳು ವ್ಯಾಪಿಸಿ ವ್ಯಕ್ತದಲ್ಲಿ
ತಂತುವರ್ಧನಾ ವಿಜಯವಿಟ್ಠಲ ನೀನದ್ಭುತ ॥
****