by ಕಾಖಂಡಕಿ ಕೃಷ್ಣರಾಯರು
ರಾಗ : ಭೈರವಿ ತಾಳ : ದಾದರಾ
ಹೋಗಲಿ ಬ್ಯಾಡವೋ ಕೃಷ್ಣಾ ಹೋಗಲಿ ಬ್ಯಾಡವೋ
ಗೋ ಗೋಪಾಲರ ಗೋಪಿಯರೆಲ್ಲರ ತೊರೆದು ಪ್ರೀತಿಯ ಜರೆದು ॥ಪ॥
ಚಿಕ್ಕತನಂಡಿ ನಿನ್ನಂಘ್ರಿಗೆ ಸೋತೆವು ಮಾನವ ಒಪ್ಪಿಸಿ ತನುವಾ
ಠಕ್ಕಿಸಿ ಗಂಡರ ಮಕ್ಕಳ ಶೀಲದಿ ಕೆಟ್ಟು ಲಜ್ಜಿಯ ಬಿಟ್ಟು
ಅಕ್ಕರದಲಿ ಕೊಳಲ ಧ್ವನಿಗೆ ಮರುಳಾಗಿ ನೆರೆದೇವು ಬಾಗಿ
ನಿಕ್ಕರುಣಿಪ ತ್ಯಜಿಸೆಮ್ಮನು ಮಥುರೆಗೆ ಪೋಪುದುಚಿತವೆ ಭೂಪಾ ।।೧।।
ರಾಸಕ್ರೀಡೆಗೆ ಇಬ್ಬರ ನಡುವಣ ನಿಂದೇ ಬಹು ರೂಪಿಂದೇ
ಆ ಸತಿಯರ ಹೆಗಲಿಗಿರಿಸುತ ಕೈಯವ ಕುಣಿದೇ ಪಾಡುತ ನಲಿದೆ
ಆಶೆಯ ಪೂರಿಸೆ ಬಾಲೆರಾನೀ ಷಣ್ಮಾಸಾದೋರಿದೆ ಈಶಾ
ಬ್ಯಾಸರವಾಯಿತೆ ನಮ್ಮೊಳು ಸಾರಂಗ ಪಾಣಿ ದೀನಾಭಿಮಾನೀ ।।೨।।
ಏನೆಂದೇಳಲಿ ಚಿತ್ಸುಖದಾಟವು ಇಂದೇ ಒಂದೆರಡೆಂದೇ
ನೀನಿಲ್ಲದ ಗೋಕುಲವಾರಣ್ಯದ ಪರಿಯ ಎಂಬುದರಿಯಾ
ನಾ ನಡು ದಾರಿಗೆ ಬೀಳುವೆ ರಥದಿಂ ತುಳಿಸು ಜೀವನಗ ಗಳಿಸು
ಶ್ರೀನಿಧಿ ಗುರು ಮಹಿಪತಿಪ್ರಭು ಬಿಡದಿರು ಕೈಯ್ಯ ವಿಧಿಸ್ಮರರೈಯಾ ।।೩।।
***