ಕಾಯೊ ಕರುಣಾಕರನೆ ನೀಯನ್ನಾ
ಕಾಯೋ ಆನಾಥರಕ್ಷಕ ದಯಾಸಿಂಧೂ ಪ.
ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ
ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ.
ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ
ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ
ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 1
ತರುಳ ಕರಿಯಲು ಕಂಭದಿ ಬಂದು
ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ
ನರಮೃಗರೂಪಿನಲಿ ಪ್ರಹ್ಲಾದಗೆ
ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ 2
ಜಲದೊಳಗೆ ನೆಗಳೆಯು ಹಿಡಿದು
ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು
ನಿಲ್ಲದೆ ಬಂದೊದಗಿನೆಗಳೆಯನು
ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ 3
ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ
ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ
ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ
ದೇವರದೇವ ಶ್ರೀ ವೆಂಕಟೇಶ್ವರನೆ 4
ಶಂಖಚಕ್ರಧರ ನಿನ್ನ ಚರಣವನು ನಂಬಿದೆ
ಪಕ್ಷಿವಾಹನಸ್ವಾಮಿ ಕರುಣಾನಿಧೆ
ಹೆಳವನಕಟ್ಟೆಯೊಳು ನಿಂದು
ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ 5
****