Showing posts with label ಎಷ್ಟು ಕೂಗಲು ದಯ ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ gopalakrishna vittala. Show all posts
Showing posts with label ಎಷ್ಟು ಕೂಗಲು ದಯ ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ gopalakrishna vittala. Show all posts

Sunday, 1 August 2021

ಎಷ್ಟು ಕೂಗಲು ದಯ ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ankita gopalakrishna vittala

ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ

ಬೆಟ್ಟದೊಡೆಯ ಹರಿಯೆ ಪ.


ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ

ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ.


ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ

ಮೊರೆಬೀಳಲಿನ್ನಾರಿಗೆ

ಕರೆಕರೆಗೊಳಿಪುದು ತರವಲ್ಲ ಕೇಳಿನ್ನು

ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ

ಸರಿಯೆ ನಿನಗಿದು ಕೊರಗಿಸುವುದು

ಜರಿದು ಬಳಲುವೆ ಧರೆಯೊಳೀಗ ನಾ

ಸುರರ ರಕ್ಷಕ ಪರಮಪಾವನ

ಕರವ ಮುಗಿವೆ ದರುಶನವ ನೀಡೊ 1

ನೀನಲ್ಲದೆ ಇನ್ನು | ನಾನಾರ ಭಜಿಸಲೊ

ಗಾನವಿಲೋಲ ಹರಿ

ಕಾನನದೊಳು ಕಣ್ಣು ಕಾಣದಂತಾಗಿದೆ

ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ

ಮಾನ ಪ್ರಾಣ ಶರೀರ ನಿನ್ನದೊ

ನಾನು ಅನ್ಯರ ಭಜಿಸಲಾರೆನೊ

ಹೀನಬುದ್ಧಿಯ ಬಿಡಿಸಿ ಗುರುಗಳ

ಧ್ಯಾನವೆನಗಿತ್ತು ನೀನು ಕಾಯೊ 2

ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು

ಇನ್ನು ಕರುಣವಿಲ್ಲವೆ

ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ

ನಿನ್ನ ಮನಸು ಕರಗಲಿನ್ನೇನಗೈಯ್ಯಲೊ

ಎನ್ನ ಯತ್ನವು ವ್ಯರ್ಥವಾಯಿತು

ಇನ್ನು ನೀ ದಯೆಗೆಯ್ಯಬೇಕೊ

ಮುನ್ನ ಮಾಡಿದ ತಪ್ಪನೆಣಿಸದೆ

ಎನ್ನ ದೃಷ್ಟಿಗೆ ನಿನ್ನ ತೋರೊ 3

ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ

ಮಥಿಸಿ ಶರಧಿ ಅಮೃತ ಸುರರಿಗಿತ್ತೆ

ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ

ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ

ಕ್ಷಿತಿಯನಾಳ್ವರ ಹತವಗೈಸಿದೆ

ಕ್ಷಿತಿಸುತೆಯ ಪ್ರೇಮದಲಿ ತಂದೆ

ಹಿತದಿ ಪಾಂಡವ ಸುತರ ಕಾಯ್ದೆ

ವ್ರತವ ಕೆಡಿಸಿ ಕಲಿಹತವಗೈದೆ 4

ಇಂತು ಎಲ್ಲರ ಕಾಯ್ದ | ಕಂತು ಜನಕನೆ ನಿನಗೆ

ನ್ನಂತರ ತಿಳಿಯದೇನೋ

ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ

ಶಾಂತರೂಪವ ಎನ್ನ ಅಂತರಂಗದಿ ತೋರೊ

ಚಿಂತಿತಾರ್ಥ ಪಂಥಗಾರನೆ

ಎಂತು ದಿನಗಳು ಸಂದು ಹೋದುವೊ

ಇಂತು ನಿರ್ದಯವೇಕೊ ಇನ್ನು

ಸಂತತಾನಂದನಂತಶಯನ 5

****