ಸ್ವಾತಂತ್ರ್ಯವೆನಗುಂಟೆ ಸರ್ವಾಂತರ್ಯಾಮಿ ಪ
ನಿಂತು ನೀ ನಡೆಸುವಿಯೊ ಜೀವಾಂತರ್ಯಾಮಿ ಅ.ಪ
ಜೀವ ಸ್ವರೂಪದಲಿ ಜೀವನಾಕಾರದೊಳಿದ್ದು
ಜೀವನ ಅನಾದಿಕರ್ಮ ಜೀವರಿಗೆ ಪ್ರೇರಿಸಿ
ಜೀವಕೆ ಚೇತನ ಕೊಟ್ಟು ಜೀವಕ್ರಿಯೆಗಳನ-
ಭಿವ್ಯಕ್ತಿ ಮಾಡಿ ಸತತ ಪೊರೆಯುವ ಕರುಣಿ 1
ದತ್ತಸ್ವಾತಂತ್ಯ ತನಗಿತ್ತಿಹನು ದೇವನೆಂದು-
ನ್ಮತ್ತತನದಿ ತಾ ಕರ್ತನೆಂದೆನಿಸಿ ಸುತ್ತಲಹ
ನಿತ್ಯ ಅವಸ್ಥೆಗಳ ಪರಿಹರಕೆ
ಶಕ್ತನಾಗನು ಏಕೆ ಆಪತ್ತುಗಳು ಬರಲು 2
ಬಾರದಿರೆ ಸೃಷ್ಟಿಗೆ ಕಾರ್ಯವಿಲ್ಲದೆ ಜೀವ
ಪೂರ್ಣವಾಗಿ ತಾ ಜಡನಂತಿಹಾ
ಕರಣದಲಿ ಶ್ರೀರಮಣ ಸೇರಿ ಚೇತನ ಕೊಟ್ಟು
ಕ್ರೀಡೆಗೋಸುಗ ಬಿಡುವ ಸರ್ವ ಜೀವರನಾ 3
ಎನ್ನ ಅನಾದಿಕರ್ಮ ಎನ್ನದೆಂದಿಗು ಸರಿಯೆ
ನಿನ್ನದಲ್ಲಾ ಸ್ವಾಮಿ ಎನ್ನನುಭವಕೆ ಕೊಡುವೆ
ಮುನ್ನ ಪ್ರಳಯದಿ ನಿನ್ನ ಘನ್ನೊಡಲೊಳಿಂಬಿಟ್ಟೆ
ಎನ್ನ ಕರ್ಮಗ್ರಂಥಿ ಎನ್ನಿಂದ ಬಿಡಿಸೊ 4
ಲಿಂಗದೇಹಕ್ಕಾಗಿ ತ್ರಿಗುಣ ಅಂಗಿಯ ಕೊಟ್ಟೆ
ಅಂಗಬೇಕೆಂದಿತ್ತೆ ಅನಿರುದ್ಧ ಲಿಂಗಾ
ಅಂಗಕಾರ್ಯಕೆ ಎನಗೆ ಸ್ಥೂಲಾಂಗಗಳ ಕೊಟ್ಟು
ಅಂಗೋಪಾಂಗದಲಿ ನೀನ್ಹಾಂಗೇ ಮೆರೆವೆ 5
ವಿಷಯಗಳಿಂದ್ರಿಯಕೆ ವಿಷಮವಾಗಿಹವೋ ದೇವ
ಹೃಷೀಕಪನೆ ನಿನಗೆ ಇದು ಸಂತೋಷವೇನೊ
ತೃಷಿಹಸಿವು ಕೊಡದೆ ದುರ್ವಿಷಯಗಳಿಗೆ ಬಿಡದೆ
ಈಷಣತ್ರಯ ಹರಿಸಿ ಪೋಷಿಸೋ ದೇವಾ 6
ತರುಛಾಯ ವೃತ್ತಿಯು ತರಣಿ ಬಿಟ್ಟಿಪ್ಪುದೆ
ತರಣಿಕಿರಣನನುಸರಿಸಿ ವೃತ್ತಿಯಹುದೊ
ಕರಣನಿಯಾಮಕ ನೀನೆ ಕಾರ್ಯವ ನಡೆಸಲು ದೇವ
ತ್ವರಿತದಲಿ ಸ್ಥೂಲದಲಿ ಕಾರ್ಯಾಭಿವ್ಯಕ್ತಿಯೊ 7
ನೀನಿತ್ತ ಸ್ವಾತಂತ್ರ್ಯಕಾರ್ಯ ಮುಕ್ತಿಯಲ್ಲಿ
ನಾನತ್ತು ಫಲವೇನೊ ಸ್ಥಿತಿಕಾಲದಿ ನೀನಿಲ್ಲದಿನ್ನಿಲ್ಲ
ತ್ರಿಗುಣ ಬದ್ಧರ ಕಾರ್ಯ ನೀ ಚಲಿಸೆ
ಪ್ರತಿಬಿಂಬ ಕಾರ್ಯವಹುದೋ 8
ಹೆಚ್ಚು ಮಾತೇನು ಜೀವನಿಚ್ಛೆಯನನುಸರಿಸಿ
ಅಚ್ಯುತ ತಾನೆ ಸ್ವೇಚ್ಛಚರಿಸಿ
ನಿಚ್ಚದಲಿ ಲಿಂಗಾನಿರುದ್ಧದಿ ತಾನಿದ್ದು
ಎಚ್ಚರಿಸಿ ಸ್ಥೂಲದಿಂದೆಚ್ಚರದಿ ನಡೆವುದೊ 9
ನಿನ್ನ ಸಂಕಲ್ಪವಲ್ಲದಿನ್ನಿಲ್ಲ ಅನ್ಯಥಾಗುವುದುಂಟೆ
ಎಂದೆಂದಿಗೂ ಘನ್ನ ಮಹಿಮನೆ ಎನ್ನ
ಯತ್ನವಾವುದೋ ಕಾಣೆ ಎನ್ನ ಭ್ರಾಮಕತ್ರಯವ
ಇನ್ನು ಹರಿಸೋದೇವಾ 10
ಶ್ರೀದನಿಂ ದತ್ತಸ್ವಾತಂತ್ರ್ಯ ಸಮ್ಮತವೇನು
ಅಧೀನ ಸ್ವಾತಂತ್ರ್ಯಕಾರ್ಯದಲ್ಲಿ ಮೋದನಾಮಕ ನೀನೆ
ಆದರಿಸಿ ಸಲಹಯ್ಯ ಮೋದತೀರ್ಥಾ-
ರಾಧ್ಯ ಶ್ರೀ ವೇಂಕಟೇಶಾ11
*****