Showing posts with label ಹರಿಯೇ ಉದ್ಧರಿಸೆನ್ನ gurushreesha vittala ankita suladi ಹರಿ ಪ್ರಾರ್ಥನಾ ಸುಳಾದಿ HARIYE UDDHARISENNA HARI PRARTHANA SULADI. Show all posts
Showing posts with label ಹರಿಯೇ ಉದ್ಧರಿಸೆನ್ನ gurushreesha vittala ankita suladi ಹರಿ ಪ್ರಾರ್ಥನಾ ಸುಳಾದಿ HARIYE UDDHARISENNA HARI PRARTHANA SULADI. Show all posts

Monday, 11 January 2021

ಹರಿಯೇ ಉದ್ಧರಿಸೆನ್ನ gurushreesha vittala ankita suladi ಹರಿ ಪ್ರಾರ್ಥನಾ ಸುಳಾದಿ HARIYE UDDHARISENNA HARI PRARTHANA SULADI

 

Audio by Mrs. Nandini Sripad


ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತ  ಶ್ರೀಹರಿಯ ಪ್ರಾರ್ಥನಾ ಸುಳಾದಿ 


 ರಾಗ ಚಕ್ರವಾಕ 


 ಧ್ರುವತಾಳ 


ಹರಿಯೆ ಉದ್ಧರಿಸೆನ್ನ ಪರಮಪುರುಷ ಧೊರಿಯೆ

ಇರಳು ಹಗಲು ನಿನಗೆ ಮೊರೆ ಇಡುವೆನೊ

ಪರಿಪರಿ ಭವಭಯ ದುರಿತಗಳೋಡಿಸಿ

ಕರಿವರದನೆ ನಿನ್ನ ಸ್ಮರಣೆಯನ್ನು

ಮರೆಯದಂತೆ ನಿನ್ನ ಚರಣಸೇವೆಯೊಳಿಟ್ಟು

ಅರದೂರ ನಿನ್ನ ನಿಜದಾಸನೆನಿಸೊ

ಗುರುಹಿರಿಯರಲ್ಲಿ ಪರಮ ಭಕುತಿ ಇತ್ತು

ವಿರಕುತಿ ವಿಷಯದಲ್ಲಿ ಪುಟ್ಟಿಸಯ್ಯಾ

ಕರುಣಸಾಗರ ನಿನ್ನ ಮರಳೊಂದು ಬೇಡೋದಿಲ್ಲ

ದುರಿತದೂರನೆ ಇದುವೊಂದು ಮಾತ್ರ

ಕರುಣಿಸಬೇಕಯ್ಯಾ ಭಕುತವತ್ಸಲ ಸ್ವಾಮಿ

ಸರುವ ರೂಪಾತ್ಮಕ ಸರುವರೊಡಿಯಾ

ಚರಾ ಅಚರಗಳಲ್ಲಿ ಪರಿಪರಿ ನಿನ್ನ ರೂಪ

ಕುರುಹು ಕಾಂಬುವ ಸುಜ್ಞಾನದಿಂದ

ಪರಮ ಭಕುತಿ ಕೊಟ್ಟು ಗರುಡವಾಹನ ನಿನ್ನ

ಪರಮಾನಂದವಾದ ವಿಹಾರವ

ಅರಲವ ಬಿಡದಲೆ ಚಿಂತಿಸುವಂತೆ ಮಾಡೋ

 ಗುರುಶ್ರೀಶವಿಟ್ಠಲನೆ ಕಾವದೇವ ॥ 1 ॥ 


 ಮಟ್ಟತಾಳ 


ಇಂದಿರೇಶನೆ ನಿನ್ನ ಛಂದವುಳ್ಳ ರೂಪ

ನಂದದಿ ನೋಡುವಾನಂದಕಿಂತ ಭಾಗ್ಯ

ಹಿಂದೆ ಕಂಡವರಿಗಿಲ್ಲ ಹಿಂದು ಮುಂದು ಕಾಣೆ

ಮಂದನು ಇವನೆಂದು ತಂದುಕೊಳ್ಳದೆ

ಸಂದರುಶನವೀಯೋ ಸುಂದರಮೂರುತಿ

ವಂದಿಸುವೆನು ನಿನಗೆ ಗುರುಶ್ರೀಶವಿಠಲಯ್ಯಾ ॥ 2 ॥ 


 ತ್ರಿವಿಡಿತಾಳ 


ದೇವಭಕುತರ ಬಿಡದೆ ಕಾವ ಪ್ರಭು ನೀನೆಂದು

ಭಾವಶುದ್ಧದಿ ಬಿನ್ನಪವ ಮಾಡಿದೆನೊ

ಆವಾವ ಜನ್ಮಗಳ ಈವದಕ್ಕೆ ಎನಗೆ

ನೋವು ಕಾಣದು ಬಿಡದೇ ನಿತ್ಯ , ನಿನ್ನ

ಸೇವಕರೊಳು ಇಟ್ಟು ಸೇವಕನೆನಿಸಯ್ಯಾ

ಶ್ರೀವರ ಗುರುಶ್ರೀಶವಿಠಲಯ್ಯನೇ ॥ 3 ॥ 


 ಅಟ್ಟತಾಳ 


ಅಲ್ಪ ಯೋಗ್ಯತಿ ಎನ್ನದಾದಗೋಸುಗ ಸ್ವಾಮಿ

ಸ್ವಲ್ಪ ಸ್ವಲ್ಪಕೆ ನಿನಗಾಲ್ಪರಿವೆನೋ ಅಹಿ -

ತಲ್ಪ ನಿನ್ನ ಭಕ್ತರಂತೆ ನಂಬಲಾರೆ

ಕಲ್ಪ ಕಲ್ಪಗಳಲ್ಲಿ ಎನ್ನಂಥ ಜೀವರು

ಸ್ವಲ್ಪವಾದರು ಇರಬಹುದೋ ಅವರನ್ನ

ಬಲ್ಪರಿಯಲಿ ನೀನು ಸಲಹಲಿಲ್ಲವೆ ದೇವ

ಕಲ್ಪಿಸಿದವರನ್ನ ಕಡೆಹಾಯಿಸುವ ಸಂ -

ಕಲ್ಪ ನಿನ್ನದು ಎಂದು ನಂಬಿದೆ ಸತ್ಯಸಂ -

ಕಲ್ಪ ಪೋಷಿಸೊ ಗುರುಶ್ರೀಶವಿಟ್ಠಲ ಸುಖ -

ತಲ್ಪ ನಿನಗಲ್ಲದೆ ಅನ್ಯರಿಗೆ ಆಲ್ಪರಿಯೆ ॥ 4 ॥ 


 ಆದಿತಾಳ 


ಎಷ್ಟು ಪೇಳಲಿ ನಿನಗಷ್ಟು ಅರಿಕಿ ಇನ್ನು

ಗುಟ್ಟು ಏನಿದರೊಳು ಕೊಟ್ಟದ್ದು ಕೊಡು ನಿನ್ನ

ಬಿಟ್ಟು ಅನ್ಯರಿಗೆ ಎಳ್ಳಷ್ಟು ಕೇಳುವನಲ್ಲ

ಕೃಷ್ಣ ಎನಗೆ ನೀನು ಇಷ್ಟ ಮೂರುತಿ ಎನ್ನ

ದೃಷ್ಟಿಗೆ ತೋರೊ ನಿತ್ಯ ಸ್ಪಷ್ಟ ಸುಜ್ಞಾನವಿತ್ತು

ಶಿಷ್ಟರ ದಯವನ್ನು ಹುಟ್ಟಿಸೊ ಎನ್ನಲ್ಲಿ

ಭ್ರಷ್ಟನು ಇವನೆಂದು ಸಿಟ್ಟು ಮಾಡದೆ ಕಾಯೋ

ಕೊಟ್ಟಕೊನಿಗೆ ನಿನಗೆ ಬಿಟ್ಟೀತೆ ಎನ್ನ ಭಾರ

ಘಟ್ಯಾಗಿ ನಿನ್ನ ಪಾದ ಮುಟ್ಟಿ ಭಜಿಸುವೆನಯ್ಯಾ

ಕಷ್ಟದೂರನೆ ಭವದ ಕಟ್ಟು ಪರಿಹರಿಸಯ್ಯಾ

ಶಿಷ್ಟರ ಗುರುಶ್ರೀಶವಿಟ್ಠಲ ದಯವನ್ನು

ಇಟ್ಟು ಸಾಕಲಿಬೇಕು ಸೃಷ್ಟೇಶ ನಿನ್ನವರ ॥ 5 ॥ 


 ಜತೆ 


ಈಶ ನಿನ್ನ ನಿಜದಾಸರಂತಲ್ಲ ಆ -

ಭಾಸಕನಾ ಗುರುಶ್ರೀಶವಿಟ್ಠಲ ಪೊರಿಯೊ ॥

******