ಇಂದೇಕೆ ಈ ಪರಿ ನಿರ್ದಯಗೈದಿರಿ
ತಂದೆ ಶ್ರೀ ಗುರುವೆ ಪೇಳಿ ಪ.
ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ
ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ.
ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ
ಅತಿಶಯಾನಂದವ ಪಡುತಲಿದ್ದೆ
ಮತಿವಂತರೇ ಇಂದು ಅತಿಶಯದ ನಿಮ್ಮ
ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1
ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ
ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ
ಒಲ್ಲೆನು ನಾನೊಂದು ಇಹಪರ ಸೌಖ್ಯವು
ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2
ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು
ಘನಮನಕಿನ್ನೀಗ ಬರಲಿಲ್ಲವೆ
ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ
ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3
ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ
ಸರಸಿಜಾಕ್ಷನ ತೋರಿ ಹರುಷವಿತ್ತು
ದುರಿತವ ತೊಲಗಿಸಿ ಕರಕರಗೊಳಿಸದೆ
ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4
ತಡಮಾಡದೆ ಭವಕಡಲ ದಾಟಿಸಿ ಈಗ
ಮೃಡಸಖನನು ತೋರಿ ದೃಢ ಮನದಿ
ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ
ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
****