Showing posts with label ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ namagiri. Show all posts
Showing posts with label ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ namagiri. Show all posts

Thursday 5 August 2021

ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ankita namagiri

..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಶಾರದೇಂದುಮುಖಿ ನೀರಜನಯನಳೆ

ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ


ಯಾರಯ್ಯ ಬಾಗಿಲ ಹೊರಗೆ ನಿಂತಿರುವನು

ಜಾರ ಪುರುಷನಂತೆ ತೋರುವೆ ನೀನು ಅ.ಪ


ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ

ಕಾರ ಧರಿಸಿರುವ ಹರಿಯಲೆ ಭಾಮೆ

ಮೀನನಾದರೇ ಬಲು ಮೌನದಲಿರದಂತೆ

ಮಾನವರಂತೆ ಮಾತು ಯಾವುದೋ ನಿನಗೆ 1


ಮಂದರಗಿರಿಯ ಬೆನ್ನಿಂದ ಧರಿಸಿರುವ

ಅಂದ ಕೂರ್ಮನಲ್ಲವೇನೆ ಭಾಮೆ

ಕೂರ್ಮ ನೀನಾದರೆ ಕೂಪದೊಳಿರುವುದೆ

ಧರ್ಮವೆಂಬುವುದನು ಮರೆತೆಯಾ ನೀನು 2


ನೀಲವೇಣಿಯೆ ಕೇಳೆ ಕೋಲರೂಪದಿ ಬಂದು

ಲೀಲೆಯಿಂದಲಿ ಕ್ಷಿತಿ ತಂದೆನೆ ಭಾಮೆ

ಪೋತರೂಪನೇ ನಿಜ ಧಾತ್ರಿಯ ಭೇದಿಸಿ

ಗಾತ್ರ ರಕ್ಷಣೆ ಮಾಡು ಹೋಗೆಲೊ 3


ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು

ಜಂಭದಿ ಖಳನನು ಕೊಂದೆನೇ ಭಾಮೆ

ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ

ಡಂಭದಿ ಬಾಗಿಲು ಭೇದಿಸಿ ಬಾರೊ 4


ವಾಮನನೆಂದು ವಟುರೂಪದಿ ಬಂದು ಸಾರ್ವ

ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ

ವಟುರೂಪನಾದರೆ ಕುಟಿಲಾಕ್ಷಿಯರಲಿಂಥ

ಚಾಟುವಚನಗಳು ಯಾಕೆಲೊ 5


ದುರುಳನೃಪರ ಪರಿಹರಿಸಿದ ಭೃಗುಮುನಿ

ವರಕುಲಜಾತ ಶ್ರೀ ರಾಮನೇ ಭಾಮೆ

ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು

ವನಿತೆಯರಲ್ಲಿಂಥಾ ಸರಸವೆ ನಿನಗೆ 6


ದಶರಥ ನೃಪತಿಯ ಮನೆಯೊಳವತರಿಸಿ

ದಶಶಿರರನು ಕೊಂದ ರಾಮನೆ ಭಾಮೆ

ರಾಮನಾದರೆ ಪರ ಕಾಮಿನಿಯರೊಳಿಂಥಾ

ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7


ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ

ಶೂರನಾದ ಸಿರಿ ಕೃಷ್ಣನೇ ಭಾಮೆ

ಚೋರನಾದ ಮೇಲೆ ಸೇರಿಸುವುದು ಹೇಗೆ

ಭಾರಿ ಆಭರಣಗಳಿರುವುವೊ 8


ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ

ಶುದ್ಧನಾದ ಬುದ್ಧರೂಪನೆ

ಬುದ್ಧರೂಪನೆ ನಿನ್ನ ನಡತೆಯ ಕೇಳಲು

ಶುದ್ಧಿಯು ಲೋಕಪ್ರಸಿದ್ಧವು9


ಸರಸಿಜಮುಖಿ ವರತುರಗವನೇರಿದ

ದುರುಳ ನೃಪರ ಗೆಲ್ವ ಕಲ್ಕಿಯೇ ಭಾಮೆ

ದುರುಳ ಜನರು ಇಲ್ಲಿ ಸೇರುವುದಿಲ್ಲವೊ

ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10


ಈ ಪರಿ ಸರಸವನಾಡುವ ನಾಮಗಿರಿ

ನರಹರಿ ರೂಪ ರಮಾ ರಮೇಶರು

ವಿಹರಿಪ ಬಗೆಯನು ಸ್ಮರಿಸುವ ಸುಜನರ

ಪರಮಪುರುಷ ಹರಿ ಪೊರೆವುದು ನಿಜ 11

***