Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ
ಸಾಧನ ಸುಳಾದಿ
(ಮಡಿ ಸುಳಾದಿ)
ರಾಗ ಕಾಂಬೋಧಿ
ಧ್ರುವತಾಳ
ಮಡಿ ಮಾಡಲಿಬೇಕು ಒಳ್ಳೆ ನಡತೆ ಕಲಿಯಬೇಕು
ದೆಡಹಿ ಮುಗ್ಗುತ ನೀರ ಮಡುವಿನಲ್ಲಿಗೆ ಪೋಗಿ
ಬುಡಗುಳ್ಳಿಯಂತೆ ಮಿಂದು ಗುಡು ಗುಡು ಗುಟ್ಟುತಲಿ
ನುಡಿವೆ ಮಂತ್ರಂಗಳು ಕಡುವೇಗ ಪಟ್ಟಿನಾಮ
ಬಡದು ಮುದ್ರಿಯು ಪಚ್ಚಿ
ಜಡದೇಹ ತೊಳೆದು ನಾ ಮಡಿವಂತನೆನಿಸುವೆ
ಬಡಿವಾರ ತನದಲ್ಲಿ ಒಡಲೊಳು ಕಾಮಕ್ರೋಧ
ಅಡಿಗಡಿಗೆ ಮಲಮೂತ್ರ ಜಡಿತ ರಕ್ತ ಮಾಂಸ
ಕಡುಘೋರ ಇಂದ್ರಿಯಂಗಳು ಕೊಡದೊಳು ಮದ್ಯ ತುಂಬಿ
ಮಡಕಿಗೆ ಮಾಲೆ ಹಾಕಿ ಜಡಿತವಾಗಿ ಪರಿಮಳ ದ್ರವ್ಯವು ಪೂಸಿ
ನಡುಬೀದಿಯೊಳಗಿಟ್ಟು ಬೆಡಗು ತೋರಿಸಿದಂತೆ
ಮಡಿ ಮಾಡಿದರದು ಮಡಿ ಎನಿಸುವದೆ
ಕಂಡಕಡೆಯಲ್ಲಿ ವ್ಯಾಪ್ತ ಗೋಪಾಲವಿಟ್ಠಲನೆಂದು
ಧೃಡವಾಗಿ ತಿಳಿದೊಂದು ನುಡಿ ಮಾತ್ರ ನುಡಿದವ
ಮಡಿವಂತ ಮಡಿವಂತನೊ ॥ 1 ॥
ಮಟ್ಟತಾಳ
ಮಡುವಿನೊಳಗಿದ್ದ ಕರಿರಾಜನ ನೋಡು
ಧೃಡಛಲ ಭಕುತ ಪ್ರಲ್ಹಾದನ ನೋಡು
ಅಡವಿಯೊಳಗೆ ನಡೆದ ಧ್ರುವರಾಯನ ನೋಡು
ಪೊಡವಿಯ ಮೇಲೆ ದ್ರೌಪದಿಯ ದೃಷ್ಟಾಂತ ನೋಡು
ಕಡುಪಾತಕಿಯಾದ ಅಜಮಿಳನ ನೋಡು
ನಡು ರಣದೊಳಗೆ ನುಡಿದ ನರನ ನೋಡು
ಮೃಡನ ಭಾಗ್ಯವ ನೋಡು ಜಡೆ ನಾರದನ ನೋಡು
ಎಡೆಯ ಕೊಂಡೋಡಿದ ಹನುಮಂತನ ನೋಡು
ಕಡೆ ಮೊದಲಿಲ್ಲದ ಮುನಿಗಳನ ನೋಡು
ಕಡಲಶಯನ ಗೋಪಾಲವಿಟ್ಠಲನ್ನ
ನುಡಿದವರಲ್ಲದೆ ಮಡಿ ಮಾಡಿದವರಾರೊ ॥ 2 ॥
ತ್ರಿವಿಡಿತಾಳ
ಗುರುಮುಖ ವಿರಬೇಕು ಹರಿದೈವ ವೆನಬೇಕು
ಅರಿಗಳ ಗೆಲೆಬೇಕು ವರಜ್ಞಾನ ವಿರಬೇಕು
ಪರಧನ ಪರಸತಿ ಉರಿಯಂತೆ ನೋಡಬೇಕು
ಹರಿಕಥಾಶ್ರವಣವು ನಿರುತ ಕೇಳಲಿ ಬೇಕು
ಹಿರಿಯರ ಚರಣಕ್ಕೆ ಎರಗೆ ಬೇಕಾವಾಗ
ಪರ ಉಪಕಾರವು ಇರಬೇಕು ಪ್ರತಿಕ್ಷಣ
ಹರಿ ಸಚ್ಚರಾಚರ ಪ್ರೇರಕ ನೆಂದರಿಯಬೇಕು
ಪರಮೇಷ್ಟಿ ಶಿವ ಸುರರು ಹರಿ ಭೃತ್ಯರೆನಬೇಕು
ಹರಿಗೆ ಜೀವಗೆ ಭೇದವೆಂದು ತಿಳಿಯಬೇಕು
ಗುರುಮಧ್ವಮತವೆ ಸಿದ್ಧಾಂತ ವೆಂದೆನಬೇಕು
ಪರಮಾಣು ಸ್ಥೂಲದಿ ಹರಿ ವ್ಯಾಪ್ತ ನೆನಬೇಕು
ಪರರು ತನ್ನವರು ಸಮರೆಂದೆನಲಿ ಬೇಕು
ಹಿರಿದು ಹಿಗ್ಗದೆ ತಾ ಅಸ್ವತಂತ್ರ ನೆನಬೇಕು
ಹರಿ ಸರ್ವ ಬಹಿರ ಅಂತರ ವ್ಯಾಪ್ತ ನೆನಬೇಕು ಈ
ಪರಿ ತಿಳಿದದ್ದೆ ಮಡಿ ಅವನೆ ಮುಕ್ತಿಯೋಗ್ಯ
ಹರಿಯು ಪ್ರೇರಿಸದಿರೆ ಆವದಾಗದು ಒಂದು
ಸಿರಿಯ ರಮಣ ಗೋಪಾಲವಿಟ್ಠಲ ನಿನ್ನ
ಕರುಣಕ್ಕೆ ಪಾತ್ರನಾದವನೆ ಇದನರಿವಾ ॥ 3 ॥
ಅಟ್ಟತಾಳ
ನಿತ್ಯ ಸಂಸಾರಿಗೆ ಅತ್ಯಂತ ದೂರವು
ಮತ್ತೆ ದೈತ್ಯರಿಗೆ ಸ್ವಪ್ನದಲ್ಲಿ ನಾಸ್ತಿ
ಸತ್ವ ಜೀವರಿಗೆ ಹರಿ ಕರುಣವ ಮಾಡಿ
ತತ್ವಾಭಿಮಾನಿ ದೇವತೆಗಳಿಗೆ ಪೇಳಿ
ಉತ್ತಮವಾದ ಕರ್ಮಗಳನೆ ಮಾಡಿಸಿ
ಮತ್ತವರಲಿ ತಾ ನಿಂತು ಮಾಡಿಸಿದಘ
ಕಿತ್ತಿ ಒಗೆದು ದೋಷ ಕಲಿಯಾಧೀನವ ಮಾಡಿ
ಸತ್ಯಲೋಕಾಧಿಪನ ಕಲ್ಪಾಂತರದಲ್ಲಿ
ಸತ್ವ ಜೀವರು ವಿರಜೆಯಲಿ ಬೊಮ್ಮನ ಸಹ
ಮುಕ್ತಿ ನೈದುವರು ಶಕ್ತ್ಯಾನುಸಾರ ವಿಧ
ಮುಕ್ತಿದಾಯಕ ಗೋಪಾಲವಿಟ್ಠಲ ನಿನ್ನ
ಚಿತ್ತ ಬಂದಂತೆ ವಿಚಿತ್ರ ಚರಿತನೆ ॥ 4 ॥
ಆದಿತಾಳ
ಎತ್ತ ಪೋದರೆ ಏನು ಎಲ್ಲಿ ನಿಂತರೆ ಏನು
ಚಿತ್ತ ಬಂದಂತೆ ಜಿಗಿದಾಡಿದರೇನು
ಚಿತ್ತದಲ್ಲಿ ಹರಿಯ ಕಾಂಬುವ ಭಕುತರಿಗೆ
ಚಿತ್ತ ಬಂದಂತೆ ಬಂದಂತೆ ಸಂಚಾರವಯ್ಯಾ
ಮತ್ತೆ ಇತರ ಜನರವರಿಗೆ ಸರಿಯೆ
ಮತ್ತೆ ವ್ಯಾಘ್ರವ ನೋಡಿ ನರಿ ಮೈಸುಟ್ಪುಕೊಂಡಂತೆ ನಿನ್ನ
ಚಿತ್ತಕೆ ಬಂದವರಿಗೆ ಆರ ಗಣನೆ ಏನೋ
ಉತ್ತಮೋತ್ತಮ ನಮ್ಮ ಗೋಪಾಲವಿಟ್ಠಲನ್ನ
ಚಿತ್ತಾನುಸಾರ ನಡೆವನೆ ಧನ್ಯನೊ
ಜತೆ
ಆವಾವ ಕರ್ಮಗಳು ದೇವಗರ್ಪಿತವೆಂದ
ಜೀವರೇ ಧನ್ಯರೊ ಗೋಪಾಲವಿಟ್ಠಲ ॥
******
ಮಡಿ ಮಾಡಲಿ ಬೇಕು ಒಳ್ಳೆ ನಡತೆ ಕಲಿಯಬೇಕು....
ಮಡಿ ಸುಳಾದಿ ,
ಶ್ರೀ ಗೋಪಾಲದಾಸರ ರಚನೆ , ರಾಗ ಕಾಂಬೋಧಿ