Showing posts with label ಕೃಷ್ಣಾ ಕಮಲನಾಭಾ vijaya vittala ankita suladi ಕೃಷ್ಣಾವತಾರ ಸ್ತೋತ್ರ ಸುಳಾದಿ KRISHNA KAMALANAABHA KRISHNAVATARA STOTRA SULADI. Show all posts
Showing posts with label ಕೃಷ್ಣಾ ಕಮಲನಾಭಾ vijaya vittala ankita suladi ಕೃಷ್ಣಾವತಾರ ಸ್ತೋತ್ರ ಸುಳಾದಿ KRISHNA KAMALANAABHA KRISHNAVATARA STOTRA SULADI. Show all posts

Sunday 8 December 2019

ಕೃಷ್ಣಾ ಕಮಲನಾಭಾ vijaya vittala ankita suladi ಕೃಷ್ಣಾವತಾರ ಸ್ತೋತ್ರ ಸುಳಾದಿ KRISHNA KAMALANAABHA KRISHNAVATARA STOTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ   ಶ್ರೀ ದಶಮಸ್ಕಂಧ ಭಾಗವತ 
 ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ 

 ರಾಗ ಸಾರಂಗ 

 ಧ್ರುವತಾಳ 

ಕೃಷ್ಣಾ ಕಮಲನಾಭಾ ಕ್ರೀಡಾವಿನೋದ ಸರ್ವೋ -
ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾ
ಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾ
ಅಷ್ಟ ಮಹಿಷಿ ರಮಣಾ ಶಾಮವರ್ನಾ
ಸೃಷ್ಟಿ ಸಂಹಾರ ಕರ್ತಾ ನಿರ್ದೋಷ ಗುಣವಾರಿಧಿ
ಶ್ರೇಷ್ಠಜನಕ ಸ್ವಾತಂತ್ರ ಪುರುಷಾ
ದುಷ್ಟದಾನವ ಹರಣಾ ದುಃಖನಿವಾರಣಾ
ಇಷ್ಟಾರ್ಥ ಪಾಲಿಸುವ ವಿಶ್ವಾ ಮನೋ - 
ಭೀಷ್ಟವೇ ಭುಜಗಶಯ್ಯ ಸಕಲರಿಗೆ ಬ -
ಲಿಷ್ಟನೇ ಭವದೂರ ಅನಂತ ಕಾಲ ಧ -
ರ್ಮಿಷ್ಟನೇ ವೈಕುಂಠರಮಣ ಗೋಪಾಲನಾಥ
ನಿಷ್ಠಜನರ ಪಾತ್ರ ಮಿತ್ರ ಕೋಟಿ ತೇಜ
ತೃಷ್ಟಸಂತತ ಸಾರ್ವಭೌಮಾ ಬಲು ಪ್ರ -
ತಿಷ್ಟ ಉಂಟಾದ ದೈವ ಸರ್ವರೊಳಗೆ ಪ್ರ -
ವಿಷ್ಟನಾಗಿ ನಾನಾ ಚರಿತೆ ನಡಿಸುವ ಮಾಯಾ
ಕಷ್ಟ ದಾರಿದ್ರರಹಿತಾ ಕರುಣಿ ದಾನಿಗಳರಸ
ವಿಷ್ಣು ವಿಶ್ವರೂಪ ಲೋಕವಿಲಕ್ಷಣ
ವೃಷ್ಣಿಕುಲೋದ್ಭವ ವಿಜಯವಿಠ್ಠಲ ಎನ್ನಾ
ರಿಷ್ಟ ಪೋಗಾಡು ದಿವ್ಯದೃಷ್ಟಿಯಿಂದಲಿ ನೋಡು ॥ 1 ॥

 ಮಟ್ಟತಾಳ 

ಧರಣಿಯೊಳಗೆ ಮಹಾದುರುಳರು ಉದುಭವಿಸಿ
ನಿರುತ ಧರ್ಮಕೆ ಕೇಡು ತರುತಿರಲಾಗಿ ನಿ -
ರ್ಜರ ಸಮುದಾಯವು ನೆರೆದು ಯೋಚಿಸಿ ತಾ -
ಮರಸ ಸುತನ ಬಳಿಗೆ ಹರಿದು ಪೋಗಲು ನಿನಗೆ
ಅರುಹಲು ಕೇಳುತ್ತಲೇ ಕರುಣದಿಂದಲಿ ಆದರಿಸಿ 
ಸುರರಿಗೆಲ್ಲಾ ಧರಣಿಯೊಳಗೆ ಅವ -
ತರಿಸಿ ಮುಂದಾಗಿ ಸಂಚರಿಸುತ್ತಲಿರು ಎಂದು 
ಪರಮಾನುಗ್ರಹ ಮಾಡಿ ಪೊರೆದಾ ಪ್ರೀತಿ ದೈವಾ 
ನರಲೀಲೆ ತೋರಿ ವಿಜಯವಿಠ್ಠಲ 
ನರಹರಿ ರೂಪಧರಿಸಿದ ಪರಮ ಮಂಗಳ ಮೂರ್ತಿ ॥ 2 ॥

 ರೂಪಕತಾಳ 

ಅಸುರ ಕಂಸನು ತಾಮಸ ಬುದ್ಧಿಯಲ್ಲಿ ವ್ಯ-
ಖ್ಖಸನಾಗಿ ರೋಷದಲ್ಲಿ ವಸುದೇವ ದೇವಕಿಯ
ಮಸದು ಮತ್ಸರಿಸಿ ಇಡಿಸಿದೆ ನಿಗಳವ ಬಂ -
ಧಿಸಿ ಸೆರೆಮನೆಯಲ್ಲಿ ಅಸೂಯವ ಬಡುತಲೆ
ಕುಸುಮನಾಭನೇ ಜನಿಸುವೆನೆಂದು ಮಾ -
ನಿಸ ವೇಷವನು ತಾಳಿ ಕುಶಲದಿಂದಲಿ ಆ -
ವಸುದೇವ ದೇವಕಿ ಬಸುರಿಲಿ ಉದುಭವಿಸಿ ಚಕ್ರಾಗದಾಬ್ಜ
ಬಿಸಿಜ ಚನ್ನಾಗಿ ಧರಿಸಿದ ಚತುರಹಸ್ತಾ
ದಿಶೆಗೆ ರವಿಯಂತೆ ರಂಜಿಸುವ ಸ್ವಪ್ರಕಾಶ
ಹಸುಳೆಯಾಗಿ ತೋರಿಸಿದ ಪರಜ್ಯೋತಿ
ವಸುಧಿ ಭಾರಹರಣ ವಿಜಯವಿಠ್ಠಲ ನೀನೆ
ಶಿಶುವಾಗಿ ಕಣ್ಣಿಗೆ ಕಾಣಿಸಿ ಕೊಂಡೆ ಈರ್ವರಿಗೆ ॥ 3 ॥

 ಝಂಪೆತಾಳ 

ಮಧುರಾ ಪುರದಲಿ ಜನಿಸಿ ವೇಗದಿ ಯಮುನಾ
ನದಿದಾಟುವಾಗ ಉರಗನು ಸೇವೆಯನು ಮಾಡೆ
ಒದಗಿ ತಂದು ನಿನ್ನ ಯಶೋದಾದೇವಿಯ
ಬದಿಯಲ್ಲಿ ಇಟ್ಟು ದುರ್ಗಾದೇವಿಯ ಒಯ್ಯೇ
ಅದರಿಂದ ಕಂಸಗೆ ಖೇದ ವೆಗ್ಗಳಿಸೆ ಕ -
ರೆದು ಪೂತನಿಯನಟ್ಟೀ ಅವಳ ಅಸು ಹೀರಿದೆ
ಒದೆದೆ ಶಕಟನ ವನಕ್ಕೆ ಪೋದಲ್ಲಿ ಕಾಲಿಲೀ
ಮುದದಿಂದಲಿ ಬಲು ಜಾರ ಚೋರನೆನಿಸಿದೆ
ಮದುವೆ ಇಲ್ಲದೆ ಬಹು ಮಕ್ಕಳನ್ನು ಪಡೆದೇ
ಗದೆ ಬಿಲ್ಲು ಗಜಗು ಚಂಡಾಟದಲಿ ಮೆರೆದೇ
ಎದುರಾದ ಹಯ ವೃಷಭ ಬಕ ಧೇನುಕ ವತ್ಸ
ಮೊದಲಾದ ಖಳರಮರ್ದಿಸಿ ಯಮುಳಾರ್ಜುನರ
ಪದದಲ್ಲಿ ಶಾಪವನು ಕಳೆದು ಕಿಚ್ಚನೇ ನುಂಗಿ
ಹೃದದೊಳಗೆ ಇದ್ದ ಕಾಳಿಂಗನ ತುಳಿದು ಕಾಯ್ದೆ
ಸದರವಿಲ್ಲದೆ ಗಿರಿಗೆ ಹಾಕಿದನ್ನವನ್ನುಂಡು
ತುದಿಬೆರಳಿಂದೇಳು ದಿವಸ ಗಿರಿಯಧರಿಸಿ
ತ್ರಿದಶನಾಯಕನ ಭಂಗಿಸಿದೆ ಆ ಕ್ಷಣದಲೀ
ಕ್ಷುಧಿಗೆ ಅಂಬಲಿ ಕುಡಿದು ಗೋವಳರನಟ್ಟಿ ಯಾ -
ಗದ ಅನ್ನಸತಿಯರಿಂದಲಿ ತರಿಸಿ ಭುಂಜಿಸಿದೇ
ಪದುಮಗರ್ಭಗೆ ಬೆಡಗು ತೋರಿದ ಮಹದೈವ
ಪದುಮಲೋಚನ ನಮ್ಮ ವಿಜಯವಿಠ್ಠಲರೇಯಾ 
ಮದನಾಟದಲ್ಲಿ ಗೋಪಿಯರ ಕೂಡ ನಲಿದಾ ॥ 4 ॥

 ತ್ರಿವಿಡಿತಾಳ 

ಕರೆಯ ಬಂದ ಅಕ್ರೂರ ಭಕುತನ್ನ ಮನ್ನಿಸಿ
ಮರಳೆ ನಾರಿಯರ ಒಡಂಬಡಿಸಿ
ಬರುತ ಉದಕದೊಳು ರೂಪವ ತೋರಿ
ಕರಿಯ ಸೀಳಿದ ರಜಕನ ಸಹಿತ
ಶರಾಸನ ಮುರಿದು ಗೋಮಕ್ಕಳೊಡನುಂಡೆ
ಹರುಷದಿಂದಲಿ ಮಾಲೆ ಕೊಡಲು ಧರಿಸಿಕೊಂಡೆ
ಕುರೂಪಿಯ ತಿದ್ದಿ ದಿವ್ಯಾಂಗನಿಯ ಮಾಡಿ
ತರಳನಾಗಿ ಪೋಗಿ ಸೊಕ್ಕಿದಾನಿಯ ಕೊಂದೆ
ವರಿಸಿದೆ ಮಲ್ಲರ ಕಾಳಗದೊಳಗೆ ನಿಂದು
ಹರಿದು ಕಂಸನ ಪಿಡಿದು ಅವನಿಗೆ ಈಡಾಡಿ
ಉರದ ಮೇಲೆ ಕುಣಿದು ಅವನ ಮರ್ದಿಸಿ ಮುಂದೆ
ಸೆರೆಬಿದ್ದ ಜನನಿ ಜನಕರ ಬಿಡಿಸಿದೆ
ಮೆರೆದೆ ಬಾಲನಾಗಿ ಸೋಜಿಗವನೆ ತೋರಿ
ಪರಮಜ್ಞಾನಿ ನೀನೆ ಸಾಂದೀಪನಲಿ ಓದಿ
ಗುರುಪುತ್ರ ಮೃತವಾಗಿರಲು ತಂದಿತ್ತೆ
ಸಿರಿರುಗ್ಮಿಣಿ ಸತ್ಯಭಾಮೆಯರ ಮಿಕ್ಕಾದಷ್ಟ -
ತರುಣಿಯರ ಮದುವ್ಯಾದಿ ಚರಿತೆ ತೋರಿ
ಭರದಿಂದ ಜರಾಸಂಧ ಕಾಲ ಯವ ಶಿಶುಪಾಲ
ನರಕ ಹಂಸ ಡಿಬಿಕ ಸಾಲ್ವ ಪೌಂಡ್ರಿಕ
ದುರುಳಾಶ್ರಯಗಳ ದಂತವಕ್ತ್ರ ಬಲುದೈತ್ಯರ
ಒರಿಸಿದೆ ಅವರವರ ದುರುಳಾತೀಯನು ನೋಡಿ
ಕರುಣದಿಂದಲಿ ಮುಚುಕುಂದನ್ನ ಪಾಲಿಸೀ
ಪರಿಪರಿ ಬಗೆಯಿಂದ ಶರಧಿಯೊಳಗೆ ನಲಿದೆ
ಹರನಲ್ಲಿ ಸಂತಾನ ಬೇಡಿ ತಪವ ಮಾಡಿದೆ
ಹಿರಿದೋ ನಿನ್ನ ಮಹಿಮೆ ಪೊಗಳಾಲಳವೇ
ಅರಸು ಉಗ್ರಸೇನಗೆ ಒಲಿದ ವಿಜಯವಿಠ್ಠಲ 
ಸರಿಸರಿ ಬಂದಂತೆ ಲೀಲೆ ಮಾಡಿದ ದೇವ ॥ 5 ॥

 ಅಟ್ಟತಾಳ 

ದ್ವಾರಕಾಪುರದಲ್ಲಿ ನಾರಿಯರ ಕೂಡ
ವಾರವಾರಕೆ ವಿಹಾರಮಾಡಿದ ದೇವಾ
ನಾರದನು ಒಂದು ಪಾರಿಜಾತವ ತರೇ
ಕಾರುಣ್ಯದಲಿ ಪೋಗಿ ನಾರಿಯ ಸಂಗಡ
ಪಾರಿಜಾತವೃಕ್ಷ ಬೇರರಸಿ ತಂದೆ
ದಾರಿದ್ರತನದಲ್ಲಿ ಧಾರುಣಿಸುರ ನಿನ್ನ
ಸಾರಲು ಭಾಗ್ಯ ಅಪಾರವಾಗಿಯಿತ್ತೆ 
ಆರು ಹತ್ತುಸಾವಿರ ಸತಿಯರಲ್ಲಿ
ಈರೈದುಸುತರು ಕುಮಾರಿ ಒಬ್ಬಳ ವಿ -
ಸ್ತಾರದಿಂದಲಿ ಪೆತ್ತ ಮೀರಿದಾ ದೈವವೇ
ವಾರಿಧಿಯೊಳು ಪೋಗಿ ಕಿರೀಟಿಗೋಸುಗ 
ಧಾರುಣಿಸುರನ ಕುಮಾರರ ಕರದಿತ್ತೇ
ಭೂರಿ ದಕ್ಷಿಣದಿಂದಾಧ್ವರವ ಮಾಡಿದ
ಕೋರಿದವರ ಮನಸಾರ ವರವನೀವಾ
ವಾರಿಜಧರ ನಮ್ಮ ವಿಜಯವಿಠ್ಠಲರೇಯಾ 
ತೋರಿದೆ ಸುರಮುನಿ ನಾರದಗೆ ಬೆಡಗು ॥ 6 ॥

 ಆದಿತಾಳ 

ಏಕಮೇವನು ನೀನು ಲೋಕದೊಳಗೆ ಬಲು
ಪ್ರಾಕೃತ ಚರಿತೆ ಅನೇಕ ಬಗೆಯಲಿ ತೋರಿ
ಆ ಕಂದರ್ಪ ಪಿನಾಕಿಯ ಭಕುತನ್ನ
ಸೂಕುಮಾರಿಗೆ ಸೋತು ತಾಕಿ ಸೆರೆ ಬಿದ್ದಿರಲು
ಪಾಕಶಾಸನನ ಸುಧಾಕಲಶ ತಂದವನ್ನ
ನೀ ಕರುಣದಿಂದಲೇರಿ ರಾಕಾಬ್ಜನಂತೆ ಪೊಳೆವ
ನಾಕ ಜನರ ನೋಡಿಸಿ ಶ್ರೀಕಂಠನ ಹಿಂದು ಮಾಡಿ
ಭೂಕಂಪಿಸುವ ಬಲೀಕುಮಾರನ ಕರಗ -
ಳಾ ಕಡಿದು ಮೊಮ್ಮಗನ ಜೋಕೆಯಿಂದಲಿ ಬಿಡಿಸಿ
ಲೋಕ ಮೂರರೊಳಗೆ ಸಾಕಾರನೆನಿಸಿದೆ
ಸಾಕುಮಾಡಿದೆ ಯದುಕುಲವನ್ನು ವ -
ನೀಕೆ ನೆವದಿಂದ ಲೋಕೇಶ ತಲೆದೂಗೆ
ಸಾಕಿದೆ ಭೂಮಿಯ ತೂಕಾ ಇಳುಹಿ ವೇಗ
ವಾಕು ಉದ್ಧವಗೆ ವಿವೇಕ ಮಾರ್ಗವ ಪೇಳಿ
ಈ ಕೃಷ್ಣಾವತಾರ ಸಾಕುಮಾಡಿ ಒಂ -
ದು ಕಳೇವರ ಇಟ್ಟು ಈ ಕುಂಭಿಣಿಗೆ ತೋರಿದ
ಆ ಕಪಟನಾಟಕ ಶ್ರೀಕಾಂತ ತಾ -
ಳಂಕ ತಮ್ಮ ವಿಜಯವಿಠ್ಠಲಾ 
ಸೋಂಕಿದಾಕ್ಷಣ ತೊಂಡೆ ಭೂಕಾಂತವಾಗಿದೆ ॥ 7 ॥

 ಜತೆ 

ಪಾರ್ಥಸಾರಥಿ ಕುರುವಂಶ ಘಾತಕನೆ ಮು -
ಕ್ತಾರ್ಥ ಎನ್ನ ದೊರೆ ವಿಜಯವಿಠ್ಠಲರೇಯಾ ॥
*********