Audio by Vidwan Sumukh Moudgalya
.ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀಕೃಷ್ಣ ಬಾಲಲೀಲಾ ಮಹಿಮಾ ಸ್ತೋತ್ರ ಸುಳಾದಿ - ೨
ರಾಗ : ಕೇದಾರಗೌಳ
ಧೃವತಾಳ
ಕಿನ್ನರ ಕಿಂಪುರುಷರು ನಭದಲಿ ಸುರ-
ಕನ್ಯೆಯರೊಡನಾಡಿ ಪಾಡುತಿರೆ
ನಿನ್ನಾಳಾಗಿ ಗೋಪರು ಕೊಂಬು ಕೊಳಲೂದಿ
ಕಿನ್ನರಿ ಮೌರಿ ತುತ್ತುರಿ ಧ್ವನಿಗೈಯ್ಯೆ
ರನ್ನದ ರತುನದಂದುಗೆ ಗೆಜ್ಜೆ ಘಲಿ ಘಲಿ
ನಿನ್ನ ಮೂರುತಿ ನಿನ್ನ ಬಾಲಲೀಲೆ
ಚನ್ನ ಮೂರುತಿ ಚನ್ನ ಕೀರುತಿ ಜಯ ಜಯ
ಎನ್ನಾಳಿದ ಪುರಂದರವಿಠ್ಠಲ ಜೀಯಾ ॥೧॥
ಮಟ್ಟತಾಳ
ಕೌಸ್ತುಭ ಕೊರಳಲಿ ಕಲ್ಲಿಯ ಕಂಬಳಿಯನಿಡುವೆ
ಕಂಜನಾಭಿಯಲ್ಲಿ ಕಲ್ಲಿಯ ಕಟ್ಟಿ ಮರೆವೆ
ಕಂಜನಾಭಿಯಲ್ಲಿ ಕಮಲೆಯ ನೂಪುರಗತಿ
ಕ್ರಮಗತಿಗಳನೊಪ್ಪುವೆ
ಕಂಜನಾಭಿಯಲ್ಲಿ ಬಾಲಲೀಲೆಯ
ನಿನಗೇನು ಪಿರಿಯವೋ ಪುರಂದರವಿಠ್ಠಲ ॥೨॥
ಆದಿತಾಳ
ನೀಲಮುತ್ತಿನ ದಂಡೆ ನೀಲಿ ಗುಂಜಿಯ ದಂಡೆ
ಮೇಲು ಮಂದಾರ ತುಲಸಿಯ ಪೂವಿನ ದಂಡೆ
ಬಾಲಕರೊಡನಾಡುವ ದಂಡೆ ಮೇಲು
ಮೇಲುದಿ ಬಪ್ಪ ಖಳರ ಮುಖವ ದಂಡೆ
ಭಾಳಲೋಚನ ಪುರಂದರವಿಠ್ಠಲರೇಯಾ
ಮೌಳಿ ಕಂದರ ಬಾಲ ಶಿಬಿರಲೊಪ್ಪಿರು
"ಸ್ವತೋಮಹೀಯಾನ್ ಗುಣಭರಿತ
ಪುರಂದರವಿಠ್ಠಲರೇಯ ಅಣೋರಣೀಯಾನ್"॥೩॥
ರೂಪಕತಾಳ
ನಿನ್ನವನೆಂಬೆನೀ ಕೈವಿಡಿಯಾದೆ
ತನ್ನಯ ತನ್ನ ಸಾಧನ ಸಾಗಿಸದೆ
ನಿನ್ನಾಳುತನ ಸಿರಿ ಪುರಂದರವಿಠ್ಠಲರೇಯ
ನಿನ್ನಾಳುತನ ॥೪॥
ತ್ರಿವಿಡಿತಾಳ
ಶ್ರುತಿಯ ತತಿಯ ಗತಿಯ ಗರುವನ ನೆಲೆಯ
ಕಂಡ ಕರ್ಮಠಗಳು ಬಲ್ಲರೆ ಜಗತ್ಪತಿಯ ನೆಲಿಯಾ
ಯತಿಯ ತತಿಯ ಪುರಂದರವಿಠ್ಠಲರೇಯನ
ಕಂಡ ಕರ್ಮಠಗಳು ॥೫॥
ಅಟ್ಟತಾಳ
ವೇದಗಳೆಂಬ ದಾವಣೆಯಲ್ಲಿ
ನಾಮಗಳೆಂಬ ಮೂರು ನೇಣುಗಳಿಂದ
ಜೇವರುಗಳೆಂಬ ಎತ್ತುಗಳನೆ ಕಟ್ಟಿ
ಕರ್ಮವೆಂಬ ಹೇರ ಹೇರಿಸಿ ಆಡುವನು
ಪುರಂದರವಿಠ್ಠಲರೇಯ ನೆಂಬ ಒಬ್ಬನೆ
ದೊಡ್ಡ ವ್ಯವಹಾರಿ ಕಾಣಿರೋ ॥೭॥
ಏಕತಾಳ
ಸಚರಾಚರವ ಪ್ರೇರಿಸುವರಾರಯ್ಯ
ಜಗದಂತ್ರ ವಾಹಕರಾರಯ್ಯಾ
ಪುರಂದರವಿಠ್ಠಲರಾಯ ನಲ್ಲದೆ
ಸ್ವತಂತ್ರರಾರಯ್ಯಾ ॥೮॥
ಜತೆ
ನಿನ್ನನೆ ನಂಬಿದೆ ಮನ್ನಿಸಯ್ಯಾ
ಪುರಂದರವಿಠ್ಠಲರೇಯಾ ನಿನ್ನನೆ ನಂಬಿದೆ ॥೯॥
****