..
kruti by ಬೇಲೂರು ವೈಕುಂಠ ದಾಸರು belur vaikunta dasaru
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ
ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ
ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ
ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ
ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು
ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ 1
ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು
ಸಾಯಬಡಿದು ವತ್ಸನ ಧೇನುಕನ ವೃಷಭನ
ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ
ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ 2
ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ
ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ
ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ
ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ 3
ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ
ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು
ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ
ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ 4
ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ
ಚತುರ್ಮುಖಾದಿಶೇಷ ದೇವಾರಾಧ್ಯ ದೇವನು
ಕ್ಷಿತಿಗಧಿಕ ಬೇಲಾಪುರದ ಪತಿ ವೈಕುಂಠಕೇಶವನು
ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು 5
***