Showing posts with label ಹರಿನಾಮ ಪ್ರಹ್ಲಾದನ್ನ vijaya vittala ankita suladi ಹರಿನಾಮ ಸುಳಾದಿ HARINAMA PRAHLADANNA HARINAMA SULADI. Show all posts
Showing posts with label ಹರಿನಾಮ ಪ್ರಹ್ಲಾದನ್ನ vijaya vittala ankita suladi ಹರಿನಾಮ ಸುಳಾದಿ HARINAMA PRAHLADANNA HARINAMA SULADI. Show all posts

Saturday, 13 February 2021

ಹರಿನಾಮ ಪ್ರಹ್ಲಾದನ್ನ vijaya vittala ankita suladi ಹರಿನಾಮ ಸುಳಾದಿ HARINAMA PRAHLADANNA HARINAMA SULADI


Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ  ಹರಿನಾಮ ಸುಳಾದಿ 

(ಹರಿನಾಮಸ್ಮರಣೆಯಿಂದ ಉದ್ಧೃತರಾದ ಪ್ರಹ್ಲಾದ , ಗಜೇಂದ್ರ, ಅಜಾಮಿಳ ಮುಂತಾದವರ ಹೆಸರನ್ನು ಈ ಸುಳಾದಿಯ ಧ್ರುವತಾಳದಲ್ಲಿ ದಾಸರಾಯರು ತಿಳಿಸಿದ್ದಾರೆ. ಪರಿಶುದ್ಧನಾಗಿ ಹರಿನಾಮವನ್ನು ಎಳ್ಳಿನಿತಾದರೂ ಮನದಲ್ಲಿಟ್ಟರೆ ಯಾವ ಭಯವೂ ಇಲ್ಲ. ಸರ್ವದಾ ಜಯವು ಎಂಬ ಮಾತು ಸ್ಫುಟವಾಗಿ ಮೂಡಿಬಂದಿದೆ.

ಹರಿನಾಮವೇ ನಮ್ಮ ವಶವಾದಾಗ ಮರೆತು ಕೆಡಬಾರದು. ಪರಮಾತ್ಮನ ಸ್ಮರಣೆಯಿಂದ ರೋಗ ನಾಶವಾಗುವುದು. ದುರಿತ ದೂರಾಗುವುದು. ಮಹಾ ಪ್ರತಿಬಂಧಕಗಳು ಹರಿದು ಎಂದೆಂದಿಗೂ ಹರುಷವಾಗುವುದು ಎಂಬ ಆಪ್ತವಾಕ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ.) 


 ರಾಗ ಕಾಂಬೋಧಿ 


 ಧ್ರುವತಾಳ 


ಹರಿನಾಮ ಪ್ರಹ್ಲಾದನ್ನ ಮೊರೆ ಕೇಳಿ ಒದಗಿತು

ಹರಿನಾಮ ಗಜೇಂದ್ರನ್ನ ಆಪತ್ತು ಹರಿಸಿತು

ಹರಿನಾಮ ಅಜಾಮಿಳನ ಪಾತಕ ಕೆಡಿಸಿತು

ಹರಿನಾಮ ನಾರದನ ನೀಚಯೋನಿ ಬಿಡಿಸಿತು

ಹರಿನಾಮ ಭೀಷ್ಮನ್ನ ಪಂಥವ ಗೆಲಿಸಿತು

ಹರಿನಾಮ ಅಂಬರೀಷನ್ನ ವ್ರತವೆ ಸಂರಕ್ಷಿಸಿತು

ಹರಿನಾಮ ವಿಭೀಷಣನ್ನ ಪಟ್ಟದಲ್ಲಿಟ್ಟಿತು

ಹರಿನಾಮ ದ್ರೌಪದಿಯ ಮಾನವೆ ಪಾಲಿಸಿತು

ಹರಿನಾಮ ಧ್ರುವನ್ನ ತಪಸಿಗೆ ಒಲಿಯಿತು

ಹರಿನಾಮ ಅಹಲ್ಯಾ ಶಾಪವ ಹಿಂಗಿಸಿತು

ಹರಿನಾಮ ಬಲಿನೃಪನ ಇಂದ್ರನ್ನ ಮಾಡಿತು

ಹರಿನಾಮ ಕುಚೇಲನ ದಾರಿದ್ರ ಕಳೆಯಿತು

ಹರಿನಾಮ ವಿದುರನ್ನ ಕ್ಷೀರಕ್ಕೆ ಹಿಗ್ಗಿತು

ಹರಿನಾಮ ದೇವಕಿಯ ಬಂಧನ ಬಿಡಿಸಿತು

ಹರಿನಾಮ ಪಾರ್ಥನ್ನ ಜೀವವೆ ಉಳಿಸಿತು

ಹರಿನಾಮ ಜನಕನ್ನ ದೃಢಮಾಡಿ ನೋಡಿತು

ಹರಿನಾಮ ಪುಂಡರೀಕನ ಭಕ್ತಿಗೆ ಮೆಚ್ಚಿತು

ಹರಿನಾಮ ಗುರುಪುತ್ರನ್ನ ತಿರುಗಿ ಬದುಕಿಸಿತು

ಹರಿನಾಮ ವಾಲ್ಮೀಕನ್ನ ಮುನಿಪನೆಂದೆನಿಸಿತು

ಹರಿನಾಮ ಭೂಮಿಯ ಉದ್ಧಾರ ಗೈಸಿತು

ಹರಿನಾಮ ಪರಿಪರಿ ಭಕ್ತರೊಡನಾಡಿತು

ಹರಿನಾಮ ಒಂದಿರಲು ಅನ್ಯ ಉಪಾಯವೇ

ಹರಿನಾಮ ಸಮಸ್ತ ಭಯನಿವಾರಣವಯ್ಯಾ

ಹರಿನಾಮ ಮನಸಿಗೆ ನಿರ್ಮಲ ಕಾರಣ

ಹರಿನಾಮ ಸರ್ವ ದೇವತಿಗಳಿಂದಧಿಕವೋ

ಹರಿನಾಮ ಜಗದೊಳು ಅಖಂಡವಾಗಿಪ್ಪದೊ

ಹರಿನಾಮ ಅಜಭವಾದಿಗಳಿಗೆ ಗತಿಪ್ರದಾ

ಹರಿನಾಮ ಮಹಿಮೆ ಆರು ಬಣ್ಣಿಪರಯ್ಯಾ

ಹರಿ ಹರಿ ಹರಿ ಎಂದು ನೆನೆದಡೆ ರೋಗಂಗಳು

ಉರುಳಿ ಪೋಗುವವು ನೀನು ಕೇಳೊ ಎಲೋಕೇಳೋ

ಹರಿನಾಮ ಸಕಳ ಪ್ರಾಯಶ್ಚಿತ್ತಕ್ಕೆ ಮೊದಲು

ಹರಿನಾಮವಿರಲಾಗಿ ಮತ್ತೊಂದಪೇಕ್ಷವೇ

ಹರಿನಾಮ ನಿಜಸ್ವಾಮಿ ವಿಜಯವಿಟ್ಠಲನಂಘ್ರಿ 

ಪರಿಶುದ್ಧನಾಗಿ ಎಳ್ಳನಿತು ಮನದಲ್ಲಿಡೊ ॥ 1 ॥ 


 ಮಟ್ಟತಾಳ 


ಹರಿನಾಮವೇ ನಮ್ಮ ಮನ ವಶವಾಗಿರಲು

ಮರೆದು ಪಾಮರನಾಗಿ ಕೆಟ್ಟುಪೋಗುವದ್ಯಾಕೆ

ಹರಿನಾಮವೇ ನಿತ್ಯ ಎದುರಿಲಿ ನಿಡಿದಾ

ಗುರುತಿನಂತಿರಲಾಗಿ ಬೆಸನೆ ಮಾಡುವದ್ಯಾಕೆ

ಮರುಳೆ ಮಾತನು ಕೇಳೊ ಅನಂತರ ಕ್ಲೇಶವನ್ನು

ಇರಗೊಡದಿರು ನಿನಗೆ ತಿಳಿಪುವೆನು ಇನ್ನು

ಮುರಮರ್ದನ ನಮ್ಮ ವಿಜಯವಿಟ್ಠಲನ್ನ 

ಸ್ಮರಣಿ ಮಾಡಲು ಬಂದ ರೋಗವೆ ವಿನಾಶ ॥ 2 ॥ 


 ತ್ರಿವಿಡಿತಾಳ 


ಹರಿನಾಮವೆಂಬೋದು ದುರಿತ ಕಾನನ ಸಂ -

ಹರಿಸುವ ಪ್ರಳಯಾಗ್ನಿ ಸೋಲಿಸುತಿಪ್ಪುದು

ಹರಿನಾಮ ನೆನೆದವರ ಕುಲಕೋಟಿ ಉದ್ದಾರ

ಹರಿನಾಮ ನಂಬಿದರೆ ಕೇಡಿಲ್ಲ ಕೇಡಿಲ್ಲಾ

ಹರಿನಾಮ ಜಗದೊಳು ಅಖಂಡವಾಗಿ ನಿಂ -

ದಿರದೆ ವ್ಯಾಪಿಸಿಕೊಂಡು ಇಪ್ಪದಿದಕೋ

ಹರಿನಾಮವೇ ಮಹಾ ಪ್ರತಿಬಂಧಗಳ ಕಳೆದು

ಪೊರೆಯುತ್ತಲಿರೆ ನಮಗೆ ಚಿಂತೆ ಯಾಕೆ

ನರದೇಹಕ್ಕೆ ಬಂದ ಭಣಗು ಉಪದ್ರವ

ಪರಿಹರಿಸಿ ಬಿಡುವದು ಸೋಜಿಗವೇ

ವರದೊರದು ಜ್ಞಾನಿಗಳು ಪೇಳುವ ಕಥೆ ಕೇಳಿ

ಸ್ಥಿರಮಾಡುವದು ಚಿತ್ತ ಸುಖವೆ ಉಂಟೋ

ತಿರುಗಿ ಬಾರದು ವ್ಯಾಧಿ ಪೋಯಿತೆಂದು ತಿಳಿ

ಹರಿನಾಮದ ಶೌರ್ಯ ಸತತದಲ್ಲಿ

ಜ್ವರತಾಪ ನಿವಾರಿಸಿ ವಿಜಯವಿಟ್ಠಲ ಸಜ್ಜ -

ನರ ಮಾತನು ಪುಸಿಯಾಗಗೊಡ ನಿಜವೋ ॥ 3 ॥ 


 ಅಟ್ಟತಾಳ 


ಹರಿನಾಮ ಇದ್ದಲ್ಲಿ ಹರುಷವೇ ಎಂದಿಗೂ

ಸುರರಾದಿಗಳು ಬಲ್ಲರು ಬಹು ಕಾಲದಿ

ನಿರಯಾದೊಳಿದ್ದರೂ ಕಡೆಹಾಕುವದು ಅ -

ದರಿಂದ ಪಾಲಿಸಿ ಪರಮ ಪ್ರೀತಿಯಿಂದ

ನಿರುತ ಜ್ಞಾನ ಭಕ್ತಿ ವೈರಾಗ್ಯ ಕೊಡುವದು

ಬರಿದಾಗದು ಕಾಣೊ ತುಂಬಿದ ಭಂಡಾರ

ಪಿರಿದಾಗಿ ಎಂತೆಂಥ ರಾಯ ರಾಯರನೆಲ್ಲ

ಅರೆಕ್ಷಣದಲ್ಲೀಗ ಕಾಯಿತು ಕಾಯಿತು

ಧರಣಿಪಾಲಕ ರಂಗ ವಿಜಯವಿಟ್ಠಲರೇಯಾ 

ಹೊರಗೆ ಒಳಗೆ ಇದ್ದು ಆನಂದ ಬಡಿಸುವ ನಿಜವೋ ॥ 4 ॥ 


 ಆದಿತಾಳ 


ಒಂದೊಂದು ಹರಿನಾಮ ನೆನಿಸಿದರೆ ನಮಗೆ

ಸಂಧಿ ಸಂಧಿಯಲಿದ್ದ ರೋಗಗಳೆ ಸಂಹಾರ

ಕುಂದು ಎಣಿಸದಿರು ಕುಚ್ಛಿತ ಯೋಚನೆ ಬಿಡು

ಪೊಂದು ತಿರುಗಿ ಪೊಂದು ಹರಿನಾಮ ಸ್ಮರಣೆಯನ್ನು

ನಿಂದಲ್ಲಿ ಕುಳಿತಲ್ಲಿ ನಡೆದಾಡುವಲ್ಲಿ

ಮಂದಮತಿಯಲ್ಲಿ ಮದಡನಾಗಿದ್ದಲ್ಲಿ

ಸಂದೇಹ ಬಡದಲೆ ಸರ್ವೋತ್ತಮನ ಮನ -

ದಿಂದ ತೊಲಗಲೀಯದೆ ಮುಂದುಗೆಡೆದೆ ನೆನೆಸೊ

ಮಂದರಧರ ನಮ್ಮ ವಿಜಯವಿಟ್ಠಲರೇಯಾ 

ಬಂದು ಭಕ್ತಿಗೆ ಒಲಿದು ಮನೋಭೀಷ್ಟವ ಕೊಡುವನು ॥ 5 ॥ 


 ಜತೆ 


ಇತ್ತಾ ಮುಂದಾಗಿ ನಮಗೆ ಮುನ್ನಾವಭಯ ನಮಗಿಲ್ಲ

ಚಿತ್ತಜಪಿತ ವಿಜಯವಿಟ್ಠಲನೇ ಗತಿ ಎನ್ನೋ ॥

******