ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ
ಪಂಕಜಾಸನಕುವರ ಮನದ
ಶಂಕ ನಾಶಗೈಸಿ ಶೇಷಪ
ರ್ಯಂಕಶಯನನ ಪಾದ
ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ
ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ
ಕಠಿಣವೆನ್ನಯ ಕುಟಿಲಮತಿಯ
ಜಟಿಲಕಳೆದು ನಿಷ್ಕುಟಿಲ ಮನದೊಳು
ವಿಠಲಮೂರ್ತಿಯ ಧೇನಿಸಲು ಹೃ
ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1
ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ
ನಿರುತ ಶ್ರೀಹರಿಚಾರುಚರಣಸ್ಮರಣೆ
ಕರುಣಿಸಿ ಪೊರೆಯೋ ಗುರುವರ
ಸುರನದೀಧರ ಪಾರ್ವತೀವರ
ಕರಿಗೊರಳ ಕೈಲಾಸಮಂದಿರ2
ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ
ಸರ್ಪಗಿರಿ ಶ್ರಿ ವೆಂಕಟೇಶಗೆ
ಸರ್ವಭಕ್ತಿ ಸಮರ್ಪಿಸಯ್ಯ
ಆಪತ್ತುಹರ ಸಂಪತ್ತುಕರ
ಶಾರ್ವರೀಕರಧರ ಶುಭಕರ 3
ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ
ಶಂಭು ಶಚಿಪತಿಬಿಂಬ ಗುರುವರ
ಸಾಂಬ ಪೊಂಬಸುರಕುವರ
ತ್ರ್ಯಂಬಕಾ ತ್ರಿಪುರಾಂತಕ
ಅಂಧಕಾಸುರ ಧ್ವಂಸಕಾ ಶುಕ 4
ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ
ನಿರುತ ಹೃದಯಸದನದೊಳನ
ವರತ ಉರಗಾದ್ರಿವಾಸ ವಿಠಲನ
ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
****