..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಏತಕೆ ಬಾರದೊ ಹರಿಯೆ
ನೀತವೆ ಇದು ಸರಿಯೆ ಪ
ಖ್ಯಾತ ನಿಗಮ ಸಂಗೀತನಾಮ ಜಲ
ಜಾತನಯನ ಬಹುಪ್ರೀತಿ ಮಾಡಿದರು ಅ.ಪ
ಕುಂದರದನ ಕುರುವಿಂದಾಧರ ಪೂ
ರ್ಣೇಂದು ವದನ ಮುನಿವಂದ್ಯ
ಎಂದಿಗೆ ಈ ಭವಬಂಧ ಬಿಡಿಸಿ ದಯ
ದಿಂದ ತೋರುವಿಯಾನಂದ
ಕುಂದುಗಳೆಣಿಸದೆ ಚಂದದಿ ಸಲಹಲು
ಎಂದೆಂದಿಗು ನೀ ಗತಿಯೆಂತೆಂದರು 1
ಮಾರಜನಕ ಗಂಭೀರ ಹೃದಯ ಸಂ
ಚಾರ ಭಜಕ ಮಂದಾರ
ತೋರು ನಿನ್ನ ಪದ ಸಾರಸವನು ಮುನಿ
ನಾರದಾದಿ ಪರಿವಾರ
ಘೋರ ಶರಧಿಯೊಳು ಸೇರಿದವರಿಗಿ
ನ್ನಾರು ಬಂದು ಉದ್ಧಾರ ಮಾಡುವರು 2
ಶ್ರೀಶ ಯದುಕುಲಾಧೀಶ ಮೇಘ ಸಂ
ಕಾಶ ರೂಪ ಸರ್ವೇಶ
ಘಾಸಿಪಡಿಪ ವಿಷಯಾಸೆಗಳೆಲ್ಲವ
ನಾಶಗೈಸೊ ಶ್ರೀನಿವಾಸ
ದಾಸ ಜನರಿಗುಲ್ಲಾಸವ ಕೊಡುತಿಹ
ವಾಸುದೇವವಿಠಲಯ್ಯನೆ ಎನ್ನೊಳು 3
***